ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಜನರ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡುತ್ತಿದ್ದ ಖತರ್ನಾಕ್ ದಂಪತಿಯನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ. ಮಂಜುಳ ಅಲಿಯಾಸ್ ಕಳ್ಳ ಮಂಜಿ ಹಾಗೂ ಚೆಲುವರಾಯಿ ಅಲಿಯಾಸ್ ಚೆಲುವ ಬಂಧಿತ ಆರೋಪಿಗಳು.
ಆರೋಪಿಗಳಿಬ್ಬರು ಹಲವು ವರ್ಷಗಳಿಂದ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಜ್ಯುವಲ್ಲರಿ ಶಾಪ್ನಿಂದ ಹೊರಬರುವ ವಯೋವೃದ್ಧರು, ಮಹಿಳೆಯರು, ಹೆಣ್ಣುಮಕ್ಕಳನ್ನ ಟಾರ್ಗೆಟ್ ಮಾಡಿ ಕಂತೆ ಕಂತೆ ನೋಟು ಬಿದ್ದಿದೆ ಎಂದು ನಂಬಿಸಿ ಅವರ ಗಮನವನ್ನು ಮಂಜುಳಾ ಬೇರೆಡೆ ಸೆಳೆಯುತ್ತಿದ್ದಳು. ಬಳಿಕ ಹಣ ನಿಮ್ಮದಲ್ಲ ಅನಿಸುತ್ತೆ. ಯಾರೋ ಬೀಳಿಸಿಕೊಂಡು ಹೋಗಿದ್ದಾರೆ ಅಂತ ಹೇಳಿ, ಸಿಕ್ಕಿರೋದು ನಮ್ಮಿಬ್ಬರಿಗೆ ಗೊತ್ತು. ನಾವಿಬ್ಬರೂ ಹಣ ಹಂಚಿಕೊಳ್ಳೋಣ ಎಂದು ಹೇಳಿ ನಿರ್ಜನ ಪ್ರದೇಶಕ್ಕೆ ಕರೆದೊಯ್ಯುತ್ತಿದ್ದಳು. ಒಡವೆ ತೆಗೆಯಿರಿ, ಇಲ್ಲಿ ಚೈನ್ ಸ್ನಾಚರ್ಸ್ ಇದ್ದಾರೆ. ಸರ ಕಳ್ಳತನ ಮಾಡಿಕೊಂಡು ಹೋಗ್ತಾರೆ ಅಂತ ಹೇಳಿ ಪುಸುಲಾಯಿಸುತ್ತಿದ್ದಳು. ಬಳಿಕ ನಮ್ಮ ಮನೆಗೆ ಹೋಗೋಣ. ಅಲ್ಲೇ ಹಣ ಲೆಕ್ಕ ಮಾಡೋಣ ಎಂದು ನಂಬಿಸುತ್ತಿದ್ದಳಂತೆ.
ತನ್ನ ಗಂಡ ಚೆಲುವನನ್ನ ಕರೆ ಮಾಡಿ ಆಕೆ ಇರೋ ಜಾಗಕ್ಕೆ ಕರೆಸಿಕೊಂಡು ಮೋಸ ಮಾಡಲ್ಲ ಅನ್ನೋ ರೀತಿ ನಂಬಿಕೆ ಬರಿಸುತ್ತಿದ್ದಳು. ಬಳಿಕ ಅವರಿಂದ ಚಿನ್ನಾಭರಣ ಕದ್ದು ಪರಾರಿಯಾಗುತ್ತಿದ್ದರು.
ಸದ್ಯ ದಂಪತಿಯನ್ನ ಬಂಧಿಸಿರುವ ಕೋಣನಕುಂಟೆ ಪೊಲೀಸರು, ಆರೋಪಿಗಳಿಂದ 7.5 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ಬೇರೆ ಬೇರೆ ಠಾಣೆಯ 100ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಈ ಇಬ್ಬರೂ ಭಾಗಿಯಾಗಿರುವುದು ಪತ್ತೆಯಾಗಿದೆ.