ಬೆಂಗಳೂರು: ಕೇಂದ್ರ ಬಜೆಟ್ ಪೂರ್ವತಯಾರಿ ಸಂಬಂಧ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಜೊತೆ ಸಚಿವ ಬಸವರಾಜ್ ಬೊಮ್ಮಾಯಿ ವಿಡಿಯೋ ಸಂವಾದ ನಡೆಸಿದರು. ಈ ವೇಳೆ ರಾಜ್ಯದ ಹಲವು ವಿಷಯ ಮುಂದಿಟ್ಟಿದ್ದಾರೆ.
202-21ನೇ ಸಾಲಿನ 15ನೇ ಹಣಕಾಸು ಆಯೋಗದ ವರದಿಯಲ್ಲಿ ಕರ್ನಾಟಕಕ್ಕೆ 5,495 ಕೋಟಿ ರೂ. ವಿಶೇಷ ಅನುದಾನ ನೀಡುವಂತೆ ಶಿಫಾರಸು ಮಾಡಿದ್ದಾರೆ. ಹಣಕಾಸು ಆಯೋಗ ಶಿಫಾರಸು ಮಾಡಿರುವ ನಾಲ್ಕು ವರ್ಷಗಳಿಗಾಗಿ ರಾಜ್ಯದ ಪಾಲಿನ ತೆರಿಗೆ ಮಾಹಿತಿಯನ್ನು ಆದಷ್ಟು ಬೇಗ ರಾಜ್ಯ ಸರ್ಕಾರಕ್ಕೆ ತಿಳಿಸಬೇಕು. ಅದರಿಂದ ಬಜೆಟ್ ತಯಾರಿಗೆ ಸಹಾಯಕವಾಗಲಿದೆ ಎಂದು ಮನವಿ ಮಾಡಿದ್ದಾರೆ.
ಈ ಸಲ ಆಗಸ್ಟ್ ಹಾಗೂ ಸೆಪ್ಟೆಂಬರ್ನಲ್ಲಿ ಕರ್ನಾಟಕದಲ್ಲಿ ಭೀಕರ ಮಳೆಯಿಂದ ಉಂಟಾಗಿರುವ ಪ್ರವಾಹದಿಂದ, ಜನ ಜೀವನಕ್ಕೆ ಭಾರೀ ಹಾನಿಯಾಗಿವೆ. ಈ ಸಂಬಂಧ ರಾಜ್ಯ 2,261 ಕೋಟಿ ರೂ. ನೆರೆ ಪರಿಹಾರ ಕೋರಿತ್ತು. ಆದರೆ ಅದರಲ್ಲಿ ಈವರೆಗೆ 1,369 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಈ ಉಳಿದ ಹಣವನ್ನು ಈ ವರ್ಷ ಬಿಡುಗಡೆ ಮಾಡಬೇಕು ಅಥವಾ 2021-22 ಕೇಂದ್ರ ಬಜೆಟ್‌ನಲ್ಲಿ ಘೋಷಣೆ ಮಾಡಬೇಕು ಎಂದು ತಿಳಿಸಿದರು.
ಓದಿ: ಬೆಳ್ಳಂದೂರು ಡಿನೋಫಟಿಫಿಕೇಷನ್ ಪ್ರಕರಣ: ಮುಖ್ಯಮಂತ್ರಿ ಬಿಎಸ್ವೈ ಬಿಗ್ ರಿಲೀಫ್
ಎಂಎಸ್ಪಿಯಡಿ ಈವರೆಗೆ ಮಾಡಿದ ಖರೀದಿ ಸಂಬಂಧ ಕೇಂದ್ರ ಸರ್ಕಾರ 885 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಹೀಗಾಗಿ ಆದಷ್ಟು ಬೇಗ ಎಂಎಸ್ಪಿ ಹಣವನ್ನು ಬಿಡುಗಡೆ ಮಾಡಬೇಕು. ಅಥವಾ ಬಜೆಟ್‌ನಲ್ಲಿ ಘೋಷಣೆ ಮಾಡಿ ಎಂದು ಮನವಿ ಮಾಡಿದರು.
ಬೆಂಗಳೂರು ಅತಿ ವೇಗದೊಂದಿಗೆ ಬೆಳೆಯುತ್ತಿರುವ ನಗರವಾಗಿದ್ದು, ದೇಶದ ಆರ್ಥಿಕತೆಗೆ ಹೆಚ್ಚಿನ ಕೊಡುಗೆ ನೀಡುತ್ತಿದೆ. ಬೆಂಗಳೂರಿಗೆ ದೊಡ್ಡ ಹೂಡಿಕೆ ಆಗಬೇಕಿದೆ. ಕೇಂದ್ರ ಸರ್ಕಾರ ಹಲವು ಯೋಜನೆಗಳಿಗೆ ಸಹಾಯ ಮಾಡುತ್ತಿದೆ. ಈ ಅನುದಾನ ಅಸಮರ್ಪಕವಾಗಿದೆ. ಹೀಗಾಗಿ ಸಂಚಾರ, ಕಣ ನಿರ್ವಹಣೆ ಮತ್ತು ಮಹತ್ವದ ಮೂಲಭೂತ ಯೋಜನೆಗಳಿಗೆ ಹೆಚ್ಚಿನ ನೆರವು ನೀಡುವಂತೆ ತಿಳಿಸಿದ್ದಾರೆ.
ಪ್ರಾದೇಶಿಕ ಅಸಮತೋಲನವನ್ನು ನಿರ್ಮೂಲನೆ ಮಾಡಲು ಹೈದರಾಬಾದ್ ಕರ್ನಾಟಕ ಪ್ರದೇಶಗಳಿಗೆ ರಾಜ್ಯ ಹೆಚ್ಚಿನ ಅನುದಾನ ಬಿಡುಗಡೆ ಮಾಡುತ್ತಿದೆ. ಕೇಂದ್ರ ಇನ್ನಷ್ಟು ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು ಎಂದಿರುವ ಅವರು, ಕೃಷ್ಣಾ ಮೇಲ್ದಂಡೆ-3 ಯೋಜನೆ, ಎತ್ತಿನ ಹೊಳೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿ, ಕೇಂದ್ರ ಸರ್ಕಾರ ಯೋಜನಾ ವೆಚ್ಚದ 90%ರಷ್ಟನ್ನು ಭರಿಸುವಂತೆ ಮನವಿ ಮಾಡಿದ್ದಾರೆ. ಜೊತೆಗೆ ರಾಜ್ಯದಲ್ಲಿನ ರೈಲ್ವೇ ಯೋಜನೆಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಕೋರಿದ್ದಾರೆ.