ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತು ಪ್ರದಾನ ಮಾಡುವ ಶತಮಾನೋತ್ಸವ ದತ್ತಿ ಪ್ರಶಸ್ತಿಯ 2022ನೇ ಸಾಲಿನ ಪ್ರಶಸ್ತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ನಾಡೋಜ ಡಾ. ಮನು ಬಳಿಗಾರ ಆಯ್ಕೆಯಾಗಿದ್ದಾರೆ. ಮೇ 5 ರಂದು ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯಂದು ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾಹಿತ್ಯ ಪರಿಷತ್ತಿನ ಸಿಬ್ಬಂದಿಗಾಗಿ ಮೀಸಲಿಟ್ಟಿರುವ ಎನ್.ರಮಾದೇವಿ ವಿಶ್ವೇಶ್ವರಯ್ಯ ದತ್ತಿ ಹಾಗೂ ವಿ. ಗೌರಮ್ಮ ಗಂಗಾಧರಯ್ಯ ಸಿಬ್ಬಂದಿ ಸೇವಾ ದತ್ತಿ ಪ್ರಶಸ್ತಿ ಪ್ರಕಟಿಸಲಾಗಿದೆ. 2022ನೇ ಸಾಲಿನ ಎನ್. ರಮಾದೇವಿ ವಿಶ್ವೇಶ್ವರಯ್ಯ ದತ್ತಿಗಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಸಿಬ್ಬಂದಿ ಹೆಚ್.ಮಂಜುಳಾ 2022ನೆಯ ಸಾಲಿನ ವಿ. ಗೌರಮ್ಮ ಗಂಗಾಧರಯ್ಯ ಸಿಬ್ಬಂದಿ ಸೇವಾ ದತ್ತಿ ಪ್ರಶಸ್ತಿಗೆ ಪರಿಷತ್ತಿನ ಹಿರಿಯ ಸಿಬ್ಬಂದಿ ಎನ್. ಕೃಷ್ಣಮೂರ್ತಿ ಅವರನ್ನು ಆಯ್ಕೆ ಮಾಡಲಾಗಿದೆ. ಈ ದತ್ತಿನ ದಾನಿಗಳು ಈ ಬಾರಿ ಹೆಚ್ಚುವರಿಯಾಗಿ ಮೂರು ಜನ ಕನ್ನಡ ಸಾಹಿತ್ಯ ಪರಿಷತ್ತಿನ ನಿವೃತ್ತ ಸಿಬ್ಬಂದಿಗೆ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ. ಅದಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ನಿವೃತ್ತ ಸಿಬ್ಬಂದಿಗಳಾದ ಎ. ಅಮರನಾಥ್, ನಾ. ಚಕ್ರಪಾಣಿ ಹಾಗೂ ಕೆ. ರಾಮೇಗೌಡ ಅವರಿಗೆ ಪ್ರದಾನ ಮಾಡಲಾಗುವುದು ಎಂದು ಹೇಳಿದ್ದಾರೆ.
ಪರಿಷತ್ತು ಕಳೆದ ವರ್ಷದಿಂದ ಮೇ 5 ರಂದು ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಿಕೊಂಡು ಬರುತ್ತಿದೆ. ಅದೇ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಶತಮಾನೋತ್ಸವ ದತ್ತಿ ಪ್ರಶಸ್ತಿ ಎನ್. ರಮಾದೇವಿ ವಿಶ್ವೇಶ್ವರಯ್ಯ ದತ್ತಿ ಹಾಗೂ ವಿ. ಗೌರಮ್ಮ ಗಂಗಾಧರಯ್ಯ ಸಿಬ್ಬಂದಿ ಸೇವಾ ದತ್ತಿ ಪುರಸ್ಕೃತರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಈ ಪ್ರಶಸ್ತಿಗಳು ಪರಿಷತ್ತಿನಲ್ಲಿ ಕಾಯಕ ಮಾಡುವ ಮೂಲಕ ಕನ್ನಡದ ಕೆಲಸವನ್ನು ನಿಷ್ಠೆ ಮತ್ತು ಶ್ರದ್ಧೆಯಿಂದ ಮಾಡುತ್ತಿರುವ ಪರಿಷತ್ತಿನ ಸಿಬ್ಬಂದಿಗಳ ಮನೋಸ್ಥೈರ್ಯ ಹೆಚ್ಚಿಸುತ್ತದೆ. ತಮ್ಮ ಕೆಲಸವನ್ನು ಗುರುತಿಸಿ ಪರಿಷತ್ತು ಗೌರವಿಸುತ್ತದೆ ಎನ್ನುವ ಹೆಮ್ಮೆಯ ಭಾವ ಎಲ್ಲರಲ್ಲೂ ಮೂಡಿಸುವ ಹಿನ್ನೆಲೆಯಲ್ಲಿ ಈ ಪ್ರಶಸ್ತಿಗಳು ಹೆಚ್ಚು ಮಹತ್ವ ಪಡೆದುಕೊಳ್ಳುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಆಯ್ಕೆ ಸಮಿತಿಯಲ್ಲಿ ಪರಿಷತ್ತಿನ ಗೌರವ ಕಾರ್ಯದರ್ಶಿ ನೇ.ಭ. ರಾಮಲಿಂಗ ಶೆಟ್ಟಿ, ಡಾ. ಪದ್ಮಿನಿ ನಾಗರಾಜು ಹಾಗೂ ಗೌರವ ಕೋಶಾಧ್ಯಕ್ಷ ಡಾ. ಬಿ.ಎಂ.ಪಟೇಲ್ ಪಾಂಡು ಉಪಸ್ಥಿತರಿದ್ದರು.
ಇದನ್ನೂ ಓದಿ : ಕನ್ನಡ ಸಾಹಿತ್ಯ ಪರಿಷತ್ ಮುಂಭಾಗ ಪಂಪನ ಪ್ರತಿಮೆ ಸ್ಥಾಪನೆ: ಡಾ.ಮಹೇಶ ಜೋಶಿ