ಬೆಂಗಳೂರು: ಕೊರೊನಾ ಸೋಂಕಿತರ ಪ್ರಮಾಣ ದಿನೇ ದಿನೆ ಹೆಚ್ಚಾಗುತ್ತಿದೆ. ಆದರೆ, ಮೃತ ಪಟ್ಟವರ ಅಂತ್ಯ ಸಂಸ್ಕಾರ ಮಾಡಲು ಚಿತಾಗಾರದಲ್ಲಿ ಶವಗಳನ್ನ ಸರದಿ ಸಾಲಿನಲ್ಲಿ ಇಟ್ಟು ಕಾಯುವ ಪರಿಸ್ಥಿತಿ ಇದೆ. ಇದರ ಗಂಭೀರತೆ ಅರಿತ ರಾಜ್ಯ ಸರ್ಕಾರ ಬೆಂಗಳೂರು ಹೊರವಲಯದ ತಾವರೆಕೆರೆ ಬಳಿ ಸ್ಮಶಾನ ಜಾಗವನ್ನು ಗುರುತಿಸಿದ್ದು, ಇಲ್ಲಿ ಏಕ ಕಾಲದಲ್ಲಿ 20 ಕ್ಕೂ ಹೆಚ್ಚು ಶವಗಳನ್ನ ದಹನ ಮಾಡುವ ಸೌಲಭ್ಯವನ್ನು ಕಲ್ಪಿಸಲಾಗಿದೆ.
ಆಕ್ಸಿಜನ್ ಕೊರತೆ ಸೇರಿದಂತೆ ವೈದಕೀಯ ಸೌಲಭ್ಯ ಸಿಗದೇ ಕೊರೊನಾ ಸೊಂಕಿತರು ಮೃತಪಡುತ್ತಿದ್ದಾರೆ. ಬೆಂಗಳೂರಿನಲ್ಲಿ ಸಾವಿನ ಪ್ರಮಾಣ ಹೆಚ್ಚಾದ ಹಿನ್ನೆಲೆ ಚಿತಾಗಾರಗಳಲ್ಲಿ ಶವಗಳನ್ನ ಸರದಿ ಸಾಲಿನಲ್ಲಿ ಇಟ್ಟು ಅಂತ್ಯ ಸಂಸ್ಕಾರ ಮಾಡಲು ಸಂಬಂಧಿಕರು ಕಾಯುತ್ತಿದ್ದಾರೆ. ಕನಿಷ್ಠ ಪಕ್ಷ ಸತ್ತವರ ಅಂತ್ಯ ಸಂಸ್ಕಾರವನ್ನು ಗೌರವಯುತವಾಗಿ ನಡೆಸಲು ಸೌಲಭ್ಯ ಕಲ್ಪಿಸುವಂತೆ ಮೃತರ ಸಂಬಂಧಿಕರು ಸರ್ಕಾರದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದರು. ಇದರ ಗಂಭೀರತೆ ಅರಿತ ರಾಜ್ಯ ಸರ್ಕಾರ ಬೆಂಗಳೂರು ಹೊರವಲಯದ ಮಾಗಡಿ ರಸ್ತೆಯ ತಾವರೆಕೆರೆ ಬಳಿ ಸ್ಮಶಾನ ಜಾಗವನ್ನು ಗುರುತಿಸಿದೆ.
ಕೋವಿಡ್ ಸೋಂಕು ಪೀಡಿತ ಶವಗಳ ಅಂತ್ಯ ಸಂಸ್ಕಾರಕ್ಕೆ ನಿರ್ಮಿಸಲಾಗಿರುವ ಸ್ಮಶಾನದ ಸಿದ್ಧತಾ ಕಾರ್ಯಗಳ ಕುರಿತು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್ ಅಶೋಕ್ ಜಂಟಿಯಾಗಿ ಪರಿಶೀಲನೆ ನಡೆಸಿದರು. ಗುರುವಾರ ಸಂಜೆ ಭೇಟಿ ನೀಡಿದ ಸಚಿವರು ಸಿದ್ಧತೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಶುಕ್ರವಾರದಿಂದ ತಾವರೆಕೆರೆಯ ಸ್ಮಶಾನದಲ್ಲಿ ಶವಗಳ ದಹನ ಕ್ರಿಯೆ ನಡೆಯಲಿದೆ. ಸ್ಮಶಾನದಲ್ಲಿ ಏಕಕಾಲಕ್ಕೆ ಇಪ್ಪತ್ತಕ್ಕೂ ಹೆಚ್ಚು ಶವಗಳನ್ನು ದಹನ ಮಾಡುವ ವ್ಯವಸ್ಥೆ ಮಾಡಲಾಗಿದೆ. ಅಂತ್ಯ ಸಂಸ್ಕಾರಕ್ಕೆ ಬರುವ ಮೃತರ ಸಂಬಂಧಿಕರಿಗೆ ಸ್ಮಶಾನದ ಸ್ಥಳದಲ್ಲಿ ನೀರಿನ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಲಾಗಿದೆ.
ಓದಿ: ಮಾಸ್ಕ್ ಖರೀದಿಗೆ ಹಣವಿಲ್ಲ: ಪಕ್ಷಿ ಗೂಡು ಧರಿಸಿ ಸರ್ಕಾರಿ ಕಚೇರಿಗೆ ಬಂದ ವ್ಯಕ್ತಿಗೆ ಮೆಚ್ಚುಗೆ!