ಆನೇಕಲ್: ಕಾಂಕ್ರೀಟ್ ಮಿಕ್ಸರ್ ಲಾರಿ ಕಾರಿನ ಮೇಲೆ ಪಲ್ಟಿ ಹೊಡೆದ ಪರಿಣಾಮ ಸ್ಥಳದಲ್ಲೇ ತಾಯಿ ಮತ್ತು ಮಗಳು ಸಾವನ್ನಪ್ಪಿರುವ ಘಟನೆ ಆನೇಕಲ್ ತಾಲೂಕಿನ ಬನ್ನೇರುಘಟ್ಟದಲ್ಲಿ ನಡೆದಿದೆ. ಬನ್ನೇರುಘಟ್ಟ ಸಮೀಪದ ಬ್ಯಾಲದ ಮರದ ದೊಡ್ಡಿ ಬಳಿಯ ತಿರುವಿನಲ್ಲಿ ವೇಗವಾಗಿ ಬಂದ ಲಾರಿ ನಿಯಂತ್ರಣ ತಪ್ಪಿ ಕಾರಿನ ಮೇಲೆ ಬಿದ್ದಿದೆ. ಮೃತಪಟ್ಟವರು ಐಟಿ ಉದ್ಯೋಗಿ ಗಾಯಿತ್ರಿ ಕುಮಾರ್(47) ಸಮತಾ ಕುಮಾರ್(16) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.
ಇನ್ನು ಮಗಳು ಸಮತಾ ಕುಮಾರ್ಳನ್ನು ಶೇರ್ ವುಡ್ ಹೈ ಶಾಲೆಗೆ ಕರೆದೊಯ್ಯುತ್ತಿದ್ದ ವೇಳೆ ಕನಕಪುರ ರಸ್ತೆ ಮಾರ್ಗವಾಗಿ ಬನ್ನೇರು ಘಟ್ಟಕ್ಕೆ ಬರುತ್ತಿದ್ದ ಕಾಂಕ್ರೀಟ್ ಮಿಕ್ಸರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಮಿಕ್ಸರ್ ಲಾರಿ ಪಲ್ಟಿ ಹೊಡೆದು ಸ್ವಿಫ್ಟ್ ಕಾರಿನ ಮೇಲೆ ಮಗುಚಿ ಬಿದ್ದಿದೆ. ಪರಿಣಾಮ ಕಾರಿನಲ್ಲಿದ್ದ ತಾಯಿ ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇವರು ಕಳೆದ 20 ವರ್ಷದಿಂದ ಬೆಂಗಳೂರಿನಲ್ಲಿ ವಾಸವಿದ್ದರು ಎಂದು ತಿಳಿದುಬಂದಿದೆ. ಮೃತ ಪತ್ನಿ ಗಾಯಿತ್ರಿ ಕುಮಾರ್ ತರಳು ನಿವಾಸಿ ಸುನೀಲ್ ಕುಮಾರ್ ಎಂಬುವವರ ಪತ್ನಿಯಾಗಿದ್ದು, ಅವರ ಕಾರು ಅಪಘಾತವಾಗುತ್ತಿದ್ದಂತೆ ಪತಿಯ ಮೊಬೈಲ್ ಗೆ ಕಾರು ಕ್ರಷ್ ಆಗಿದೆ ಎಂದು ಮೆಸೇಜ್ ಹೋಗಿದೆ. ಕೂಡಲೇ ಸ್ಥಳಕ್ಕೆ ಪತಿ ಸುನೀಲ್ ಕುಮಾರ್ ಧಾವಿಸಿದ್ದು, ಲಾರಿ ಕೆಳಗೆ ಸಿಲುಕಿರುವ ಕಾರು ಜೊತೆಗೆ ಸಿಲುಕಿರುವ ಪತ್ನಿ ಮತ್ತು ಮಗಳನ್ನು ಹೊರತೆಗೆಯಲು ಹರಸಾಹಸ ಪಟ್ಟರು. ನಾಲ್ಕು ಕ್ರೇನ್, ಒಂದು ಜೆಸಿಬಿ ನೆರವಿನಿಂದ ತೆರವು ಕಾರ್ಯಾಚರಣೆ ಮಾಡಲಾಗಿದ್ದು, ಅಪಘಾತದ ಪರಿಣಾಮ ತಾಯಿ ಮಗಳು ಸ್ಥಳದಲ್ಲೇ ಗಂಭಿರ ಗಾಯದಿಂದ ಮೃತಪಟ್ಟಿದ್ದಾರೆ.
ಆನೇಕಲ್ನಲ್ಲಿ ನಿಂತಿದ್ದ ಕಂಟೇನರ್ಗೆ ಲಾರಿ ಡಿಕ್ಕಿ: ನಿಂತಿದ್ದ ಕಂಟೇನರ್ ಗೆ ಇನ್ನೊಂದು ಲಾರಿ ಡಿಕ್ಕಿ ಹೊಡೆದ ಪರಿಣಾಮ ಲಾರಿ ಚಾಲಕನ ಎರಡು ಕಾಲುಗಳು ತುಂಡು ಆಗಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ಲಿನ ಅತ್ತಿಬೆಲೆ ಬಳಿ ಚೆಕ್ ಪೊಸ್ಟ್ ಬಳಿ ನಡೆದಿದೆ. ಅಂದಹಾಗೆ ರಸ್ತೆ ಬದಿಯಲ್ಲಿ ನಿಂತಿದ್ದ ಕಂಟೇನರ್ ಗೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದಿದೆ.
ಲಾರಿಯು ಹೊಸೂರು ಭಾಗದಿಂದ ಬರುತ್ತಿದ್ದು ಹಿಂದಿನಿಂದ ಕಂಟೇನರ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಲಾರಿಯ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿ ಲಾರಿಯ ಮುಂಭಾಗದಲ್ಲಿ ಚಾಲಕ ಸಿಲುಕಿ ಹಾಕಿಕೊಂಡಿದ್ದಾನೆ. ಇನ್ನು ಚಾಲಕ ನಾಗರಾಜನನ್ನು ಹೊರ ತೆಗೆಯಲು ಎಲೆಕ್ಟ್ರಾನಿಕ್ ಸಿಟಿ ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ ನಡೆಸಿದ್ದಾರೆ. ಫೈಯರ್ ಆಫೀಸರ್ ಮಂಜುನಾಥ್ ನೇತೃತ್ವದ ತಂಡದಿಂದ ಕಾರ್ಯಾಚರಣೆ ನಡೆಸಿ ಲಾರಿಯ ಮುಂಬದಿಯಲ್ಲಿ ಕಬ್ಬಿಣದ ತುಂಡುಗಳನ್ನು ಹೊರ ತೆಗೆದಿದ್ದಾರೆ. ಆದರೆ ಚಾಲಕ ನಾಗರಾಜ್ ನ ಎರಡೂ ಕಾಲುಗಳು ತುಂಡು ಆಗಿದ್ದು ಹತ್ತಿರದ ಆಕ್ಸ್ಫರ್ಡ್ ಆಸ್ಪತ್ರೆಗೆ ಚಾಲಕನನ್ನು ರವಾನೆ ಮಾಡಲಾಗಿದೆ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ತಿಳಿಸಿದ್ದಾರೆ.
ಇದನ್ನೂ ಓದಿ: ಬಾಲಕಿ ಮೇಲೆ ಅತ್ಯಾಚಾರ: ಸಹೋದರರು ಸೇರಿ 7 ಮಂದಿಗೆ 10 ವರ್ಷ ಜೈಲು