ಬೆಂಗಳೂರು: ಜೀವನ್ ಭೀಮಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ನ್ಯೂ ತಿಪ್ಪಸಂದ್ರದಲ್ಲಿ ಅನಧಿಕೃತವಾಗಿ ಪಟಾಕಿ ಮಾರಾಟ ಮಾಡುತ್ತಿದ್ದ ಗೋದಾಮು ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ನ್ಯೂ ತಿಪ್ಪಸಂದ್ರ ಮುಖ್ಯರಸ್ತೆಯ ಧಹಿಯಾ ಎಂಬ ಮಾರ್ಟ್‌ನಲ್ಲಿ ಗೋದಾಮಿನಲ್ಲಿ ಪರವಾನಗಿ ಪಡೆದುಕೊಳ್ಳದೇ ಅನಧಿಕೃತವಾಗಿ ಪಟಾಕಿ ಮಾರಾಟ ಮಾಡಲಾಗುತಿತ್ತು.
ಯಾವುದೇ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳದೇ ಪಟಾಕಿ ಮಾರಾಟ ನಡೆಸುತ್ತಿರುವ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿ, ಇಬ್ಬರನ್ನು ವಶಕ್ಕೆ ಪಡೆದು ಒಟ್ಟು 1.25 ಲಕ್ಷ ರೂಪಾಯಿ ಮೌಲ್ಯದ ಪಟಾಕಿ ಸೀಜ್ ಮಾಡಲಾಗಿದೆ. ಆರೋಪಿಗಳ ವಿರುದ್ಧ ಜೀವನ್ ಭೀಮಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಮತ್ತೊಂದು ಗೋದಾಮಿನ ಮೇಲೆ ದಾಳಿ ನಡೆಸಿದ್ದು, ಪರವಾನಗಿ ಪಡೆಯದೇ ಜನವಸತಿ ಪ್ರದೇಶದಲ್ಲಿ ಪಟಾಕಿ ಮಾರಾಟ ಮಾಡಲಾಗುತಿತ್ತು. ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳದೇ ಅಕ್ರಮವಾಗಿ ಪಟಾಕಿ ದಾಸ್ತಾನು ಮಾಡಲಾಗಿತ್ತು. ಮಾಹಿತಿ ಮೇರೆಗೆ ಗೋಡೌನ್ ಮೇಲೆ ದಾಳಿ ನಡೆಸಿದ್ದ ಸಿಸಿಬಿ ನಡೆಸಿ ವ್ಯಕ್ತಿಯೊಬ್ಬನನ್ನು ಬಂಧಿಸಿ 15 ಲಕ್ಷ ಮೌಲ್ಯದ ಪಟಾಕಿ ಸೀಜ್ ಮಾಡಲಾಗಿದೆ.
ಹಸಿರು ಪಟಾಕಿ ಹೊರತುಪಡಿಸಿ ಇತರ ಪಟಾಕಿಗಳ ಬಳಕೆ ನಿಷೇಧ ಹೇರಿದ ಮೈಸೂರು ಪಾಲಿಕೆ: ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ದೀಪಾವಳಿಯನ್ನು ನ.11ರಿಂದ 15ರವರೆಗೆ ಆಚರಣೆ ನಡೆಯಲಿದೆ. ಈ ವೇಳೆಯಲ್ಲಿ ವಿವಿಧ ಪಟಾಕಿಗಳನ್ನು ಸ್ಫೋಟಿಸುವುದರಿಂದ ಉಂಟಾಗುವ ಶಬ್ದ ಮಾಲಿನ್ಯ ಮತ್ತು ವಾಯು ಮಾಲಿನ್ಯದಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಉಂಟಾಗಲಿದೆ. ಇದನ್ನು ನಿಯಂತ್ರಿಸಲು ಸರ್ವೋಚ್ಛ ನ್ಯಾಯಾಲಯವು ಹೊರಡಿಸಿರುವ ಆದೇಶಗಳನ್ನು ತಪ್ಪದೇ ಪಾಲಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಆಗಿರುತ್ತದೆ. ರಾತ್ರಿ 8ರಿಂದ 10 ಗಂಟೆಯವರೆಗೆ ಮಾತ್ರ ಪಟಾಕಿಗಳನ್ನು ಸಿಡಿಲು ಅವಕಾಶವಿದ್ದು, ಉಳಿದ ಅವಧಿಯಲ್ಲಿ ಪಟಾಕಿಗಳ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ ಎಂದು ಪಾಲಿಕೆ ಆರೋಗ್ಯ ಅಧಿಕಾರಿಗಳು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಯಾವುದೇ ಆಸ್ಪತ್ರೆ, ಶೈಕ್ಷಣಿಕ ಸಂಸ್ಥೆಗಳ ಸುತ್ತಮುತ್ತಲಿನ ಮತ್ತು ಬೇರೆ ನಿಷೇಧಿತ ಪ್ರದೇಶಗಳಲ್ಲಿ ಯಾವುದೇ ಪಟಾಕಿಗಳನ್ನು ಸಿಡಿಸಬಾರದು. ಇನ್ನೂ ದೀಪಾವಳಿ ಹಬ್ಬದಲ್ಲಿ ಹಸಿರು ಪಟಾಕಿಗಳನ್ನು ಬಿಟ್ಟು ಇತರೆ ಯಾವುದೇ ಪಟಾಕಿಗಳ ಮಾರಾಟ ಮತ್ತು ಬಳಕೆ ಮಾಡುವುದಕ್ಕೆ ಹೇರಲಾಗಿದೆ. ಪ್ರತಿಯೊಂದು ಹಸಿರು ಪಟಾಕಿಗಳ ಮೇಲೆ ಮತ್ತು ಅವುಗಳ ಪ್ಯಾಕೇಟ್‌ಗಳ ಮೇಲೆಯೂ ಚಿಹ್ನೆ ಇರುತ್ತದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಮೈಸೂರು: ಹಸಿರು ಪಟಾಕಿ ಹೊರತುಪಡಿಸಿ ಇತರೆ ಪಟಾಕಿಗಳ ಬಳಕೆ ನಿಷೇಧ