ಬೆಂಗಳೂರು: ಎಚ್. ಕಾಂತರಾಜು ಅಧ್ಯಕ್ಷತೆಯಲ್ಲಿ ಸಿದ್ಧಪಡಿಸಲಾಗಿದ್ದ ಜಾತಿ ಗಣತಿ ವರದಿಯ ಮೂಲ ಪ್ರತಿ ನಾಪತ್ತೆಯಾಗಿದೆ ಎಂಬ ವಿವಾದದ ನಡುವೆಯೇ ವರದಿ ಸಲ್ಲಿಕೆಗೆ ಸಿದ್ಧತೆ ನಡೆದಿದೆ. ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ನವೆಂಬರ್ ಮಾಸಾಂತ್ಯಕ್ಕೆ ಸರ್ಕಾರಕ್ಕೆ ಜಾತಿಗಣತಿ ವರದಿ ಸಲ್ಲಿಕೆ ಮಾಡಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಜಾತಿಗಣತಿ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ ಎಂಬ ಮಾಹಿತಿ ಬಂದಿರುವ ಹಿನ್ನೆಲೆ ಒಕ್ಕಲಿಗ ಹಾಗೂ ವೀರಶೈವ - ಲಿಂಗಾಯತ ಸಮುದಾಯಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿ, ಮರು ಸಮೀಕ್ಷೆಗೆ ಆಗ್ರಹಿಸಿವೆ. ಕಳೆದ 2015 ರಲ್ಲಿ ಆಯೋಗದ ವತಿಯಿಂದ ಕೈಗೊಳ್ಳಲಾದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಮುಖ್ಯ ವರದಿಯಲ್ಲಿ ಸದಸ್ಯ ಕಾರ್ಯದರ್ಶಿಗಳ ಸಹಿ ಇಲ್ಲ ಎಂದು ಹಾಲಿ ಅಧ್ಯಕ್ಷರು, 2021ರ ಅಕ್ಟೋಬರ್ 5 ರಂದು ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದರು.
2021ರ ಆ. 26ರಂದು ಆಯೋಗದ ಕಚೇರಿಯಲ್ಲಿ ಇರಿಸಲಾಗಿದ್ದ ಸಾಮಾಜಿಕ - ಶೈಕ್ಷಣಿಕ ಸಮೀಕ್ಷೆಯಲ್ಲಿ ಸಂಗ್ರಹಿಸಿದ್ದ ಅಂಕಿ - ಅಂಶಗಳು ಹಾಗೂ ಇತರ ವಿವರಗಳನ್ನು ಒಳಗೊಂಡ ಸೀಲ್ಡ್ ಬಾಕ್ಸ್‌ಗಳನ್ನು ಆಯೋಗದ ಅಧ್ಯಕ್ಷರು, ಸದಸ್ಯರು ಹಾಗೂ ಸದಸ್ಯ ಕಾರ್ಯದರ್ಶಿ ಅವರ ಸಮ್ಮುಖದಲ್ಲಿ ಮಹಜರು ನಡೆಸಿ ತೆರೆಯಲಾಗಿತ್ತು.
ಮುದ್ರಿತ ಮುಖ್ಯ ವರದಿಯಲ್ಲಿ ಸದಸ್ಯ ಕಾರ್ಯದರ್ಶಿಯವರ ಸಹಿ ಇಲ್ಲದೇ ಇರುವುದನ್ನು ಆಯೋಗ ಗಮನಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಮೂಲಪ್ರತಿ ಸೀಲ್ಡ್ ಬಾಕ್ಸ್‌ನಲ್ಲಿ ಲಭ್ಯವಿಲ್ಲದೇ ಇರುವುದರಿಂದ, ಹಸ್ತ ಪ್ರತಿಯನ್ನು ಕೂಡಲೇ ಆಯೋಗದ ಕಚೇರಿಗೆ ಸಲ್ಲಿಸಲು ಸಂಬಂಧಪಟ್ಟ ಅಧಿಕಾರಿಗೆ ಸೂಚಿಸಲಾಗಿತ್ತು. ಈ ಸೂಚನೆಗೆ ಸಂಬಂಧಪಟ್ಟವರು ಉತ್ತರ ನೀಡಿದ್ದು, ಆ ಪತ್ರದ ಪ್ರತಿಯನ್ನೂ ಲಗತ್ತಿಸಿ, ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಸ್ಪಷ್ಟ ಪಡಿಸುವಂತೆ ಕೋರಿದ್ದ ಪತ್ರ ಬಹಿರಂಗಗೊಂಡಿದೆ.
ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಜಾತಿ ಗಣತಿ ಪ್ರಕಟಿಸುತ್ತಿದ್ದಂತೆ ಕಾಂಗ್ರೆಸ್‌ನ ಅಧಿನಾಯಕ ರಾಹುಲ್ ಗಾಂಧಿ ಇದಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು. ರಾಹುಲ್ ಗಾಂಧಿ ಹೇಳಿಕೆ ನೀಡಿದ ಬೆನ್ನಲ್ಲೇ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ, ಕಾಂತರಾಜು ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಕೋರಿದ್ದರು. ಮುಖ್ಯಮಂತ್ರಿ ಅವರ ಹೇಳಿಕೆ ಬೆನ್ನಲ್ಲೇ ಕಾಂತರಾಜು ವರದಿ ಬಗ್ಗೆ ಪರ ಮತ್ತು ವಿರೋಧ ಹೇಳಿಕೆಗಳು ವ್ಯಕ್ತವಾಗಿದ್ದವು.
2024ರ ಲೋಕಸಭಾ ಚುನಾವಣೆ ಹಿನ್ನೆಲೆ ಮಹತ್ವ ಪಡೆದ ವರದಿ: 2024 ರ ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆ ಎದುರಾಗಲಿದ್ದು, ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರು ವರದಿ ಬಗ್ಗೆ ಏನು ನಿರ್ಧಾರ ಕೈಗೊಳ್ಳುತ್ತಾರೋ ಕಾದುನೋಡಬೇಕಿದೆ. ಒಕ್ಕಲಿಗ, ಲಿಂಗಾಯತ ಸಮುದಾಯದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ಹೊಸ ಸಂಕಷ್ಟ ಎದುರಾಗಿದೆ.
ನವೆಂಬರ್ ಮಾಸಾಂತ್ಯದಲ್ಲಿ ಜಾತಿ ಗಣತಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಲು ಶಾಶ್ವತ ಹಿಂದುಳಿದ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಮುಂದಾಗಿದ್ದು, ಈ ನಡುವೆ ಒಕ್ಕಲಿಗರ ಸಮುದಾಯದ ಶಾಸಕರು, ಸಚಿವರು, ಮುಖಂಡರು ಚಿಂತನ - ಮಂಥನ ಸಭೆ ನಡೆಸುವ ಮೂಲಕ ಸರ್ಕಾರದ ಮೇಲೆ ಒತ್ತಡ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ.
ಇತ್ತೀಚೆಗೆ ರಾಜ್ಯ ಒಕ್ಕಲಿಗರ ಸಂಘ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಚಿಂತನ - ಮಂಥನ ಸಭೆಯಲ್ಲಿ ಆದಿಚುಂಚನಗಿರಿ ಮಠಾಧೀಶರಾದ ಶ್ರೀ ನಿರ್ಮಲಾನಂದ ಸ್ವಾಮೀಜಿ, ಶಿರಾದ ಸ್ಪಟಿಕಪುರಿ ಮಠದ ಶ್ರೀ ನಂಜಾವಧೂತ ಸ್ವಾಮೀಜಿ, ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಭಾಗಿಯಾಗಿದ್ದರು. ಸಭೆಯಲ್ಲಿ ಜಾತಿಗಣತಿ ವರದಿ ಜಾರಿಗೆ ವಿರೋಧ ವ್ಯಕ್ತವಾಗಿದೆ. ಹಲವು ಮುಖಂಡರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಈ ಮೂಲಕ ಸರ್ಕಾರದ ಮೇಲೆ ಒತ್ತಡವನ್ನು ಹೇರಿದ್ದಾರೆ ಎನ್ನಲಾಗಿದೆ.
ವರದಿ ಜಾರಿಗೆ ಒತ್ತಾಯ : ಇನ್ನೊಂದೆಡೆ ಎಚ್.ಕಾಂತರಾಜು ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳ ಮುಖಂಡರು, ಹೋರಾಟಗಾರರು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗಕ್ಕೆ ಮನವಿ ಸಲ್ಲಿಸಿದ್ದಾರೆ. ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ನೇತೃತ್ವದಲ್ಲಿ ಭೇಟಿ ಮಾಡಿದ ನಿಯೋಗ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಎಲ್ಲ ಜಾತಿಗಳ ಸಾಮಾಜಿಕ - ಶೈಕ್ಷಣಿಕ ಸಮೀಕ್ಷಾ ವರದಿಯನ್ನು ಅಂಗೀಕರಿಸಿ ಅನುಷ್ಠಾನಕ್ಕೆ ತರಬೇಕು ಎಂದು ಒತ್ತಾಯಿಸಿದ್ದಾರೆ. ಹಾಗಾಗಿ, ಈ ವರದಿ ಬಿಡುಗಡೆಗೆ ಕಗ್ಗಂಟಾಗಿದೆ.
ಇದನ್ನೂಓದಿ:ಹಳೆ ಜಾತಿ ಗಣತಿ ವರದಿ ಕೈಬಿಡಿ, ಹೊಸದಾಗಿ ಸಮೀಕ್ಷೆ ನಡೆಸಿ: ವೀರಶೈವ ಮಹಾಸಭೆ ಆಗ್ರಹ