ಬೆಂಗಳೂರು: ಕ್ರೈಸ್ತ ಸಮುದಾಯದ ವಿರುದ್ಧ ಕೋಮುದ್ವೇಷ ಭಾಷಣ ಆರೋಪದಡಿಯಲ್ಲಿ ತೋಟಗಾರಿಕೆ ಸಚಿವ ಮುನಿರತ್ನ ವಿರುದ್ಧ ಆರ್.ಆರ್. ನಗರ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅವರು ನೀಡಿದ ದೂರಿನ ಮೇರೆಗೆ ಸಚಿವ ಮುನಿರತ್ನ ವಿರುದ್ಧ ಪ್ರಕರಣ ದಾಖಲಾಗಿದೆ. ಕಳೆದ ಮಾರ್ಚ್ 31ರಂದು ಖಾಸಗಿ ವಾಹಿನಿಯಲ್ಲಿ ನೀಡಿದ್ದ ಹೇಳಿಕೆ ಹಿನ್ನೆಲೆಯಲ್ಲಿ ಸಚಿವ ಮುನಿರತ್ನ ವಿರುದ್ಧ ಪ್ರಕರಣ ದಾಖಲಾಗಿದೆ. ಕೋಮುದ್ವೇಷ ಪ್ರಚೋದಿತ ಭಾಷಣದ ಬಗ್ಗೆ ಚುನಾವಣಾಧಿಕಾರಿ ಮನೋಜ್ ಕುಮಾರ್ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಪ್ರಚೋದನಕಾರಿ ಹೇಳಿಕೆ: ಸಚಿವ ಮುನಿರತ್ನ ಬಂಧಿಸಲು ಸಂಸದ ಡಿ.ಕೆ.ಸುರೇಶ್ ಆಗ್ರಹ
ಮತ್ತೊಂದೆಡೆ ಸಂಸದ ಡಿಕೆ ಸುರೇಶ್, ಮಾ.19 ರಂದು ಸಚಿವ ಮುನಿರತ್ನ ಭಾಷಣದ ವೇಳೆ ಪ್ರಚೋದನೆಕಾರಿ ಮಾತುಗಳನ್ನು ಆಡಿದ್ದಾರೆ ಎಂದು ಆರೋಪ ಮಾಡಿದ್ದರು. ಸಚಿವ ಮುನಿರತ್ನ, ಆರ್.ಆರ್ ನಗರದಲ್ಲಿ ಮತ ಕೇಳಲು ಇಲ್ಲಿಗೆ ಯಾರೇ ಬಂದರೂ ಹೊಡೆದೋಡಿಸಿ, ಸಾಯೋತನಕ ಬಿಡಬೇಡಿ ಎಂದು ಕ್ಷೇತ್ರದ ಜನರಿಗೆ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂದು ಡಿ ಕೆ ಸುರೇಶ್ ಆರೋಪಿಸಿದ್ದರು. ಈ ಬಗ್ಗೆ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ್ದ ಅವರು, ಮುನಿರತ್ನರ ಭಾಷಣದ ವಿಡಿಯೋ ಸಹ ಬಿಡುಗಡೆ ಮಾಡಿದ್ದರು.
ಜೊತೆಗೆ ರಾಜರಾಜೇಶ್ವರಿ ಕ್ಷೇತ್ರದ ಖಾತಾನಗರದಲ್ಲಿ ತಮಿಳು ಭಾಷಿಕರು ಸುಮಾರು 60-70 ವರ್ಷದಿಂದ ವಾಸವಾಗಿದ್ದಾರೆ. ರಾಜ್ಯದ ಸಚಿವರೊಬ್ಬರು ತಮಿಳಿನಲ್ಲಿ ಮಾತನಾಡುತ್ತ, ಈ ಪ್ರದೇಶಕ್ಕೆ ಯಾರೇ ಬಂದರೂ ಹೊಡೆದೋಡಿಸಿ ಎಂದು ಕರೆ ನೀಡಿದ್ದಾರೆ ಎಂದು ಆರೋಪಿಸಿದ್ದರು. ಒಕ್ಕಲಿಗರನ್ನು ಗುರಿಯಾಗಿಸಿ ಚಿತ್ರ ನಿರ್ಮಾಣ ಮಾಡಲು ಹೊರಟ ವ್ಯಕ್ತಿ ಈಗ ದ್ವೇಷ ಸಾಧಿಸುತ್ತಿದ್ದಾರೆ. ಪೊಲೀಸರ ಸಮ್ಮುಖದಲ್ಲೇ ಈ ಮಾತುಗಳನ್ನು ಹೇಳಿದ್ದಾರೆ. ಕನ್ನಡ ಮತ್ತು ಒಕ್ಕಲಿಗ ಹೆಣ್ಣು ಮಗಳ ವಿರುದ್ಧ ಮಾತನಾಡಿದ್ದಾರೆ. ಒಕ್ಕಲಿಗರ ಹೆಸರಲ್ಲಿ ಲಾಭ ಪಡೆಯುತ್ತಿದ್ದಾರೆ ಎಂದು ಆರೋಪಿಸಿದ್ದರು. ಅಲ್ಲದೇ ಸಚಿವ ಮುನಿರತ್ನರನ್ನು ಬಂಧಿಸುವಂತೆ ಆಗ್ರಹಿಸಿದ್ದರು.
ಹಾಗೆ ಮಾತನಾಡಿದ್ದರೆ ಜೀವ ಬಿಡಲು ಸಿದ್ಧ ಎಂದಿದ್ದ ಮುನಿರತ್ನ.. ಸಂಸದ ಡಿ ಕೆ ಸುರೇಶ್ ಅವರು ಆರೋಪಿಸಿದಂತೆ ನಾನು, ಆ ರೀತಿ ಮಾತನಾಡಿಲ್ಲ. ಒಕ್ಕಲಿಗ ಹೆಣ್ಣು ಮಗಳು ಎಂಬ ಪದವನ್ನು ನಾನು ಬಳಸಿದ್ರೆ ರಾಜಕೀಯ ಅಷ್ಟೇ ಅಲ್ಲ, ಜೀವ ಬಿಡಲು ಸಹ ಸಿದ್ಧವೆಂದು ಸಚಿವ ಮುನಿರತ್ನ ಸ್ಪಷ್ಟಪಡಿಸಿದ್ದರು. ಅಲ್ಲದೆ, ಇದೇ ವೇಳೆ ತಮ್ಮ ಹೇಳಿಕೆಯನ್ನು ಸಾಬೀತು ಪಡಿಸದೇ ಇದ್ದಲ್ಲಿ ಡಿ ಕೆ ಸುರೇಶ್ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡ್ತಾರಾ ಎಂದು ಅವರು ಸವಾಲು ಹಾಕಿದ್ದರು.
ವಕ್ರದೃಷ್ಠಿ ಬೆಂಗಳೂರಿನ ಮೇಲೆ ಬೀಳುವುದು ಬೇಡ - ಮುನಿರತ್ನ.. ಇಂತಹ ರಾಜಕಾರಣ ಮಾಡುವುದು ಸಂಸದ ಸುರೇಶ್ ಅವರಿಗೆ ಒಳ್ಳೆಯದಲ್ಲ. ನಿಮ್ಮ ವಕ್ರದೃಷ್ಠಿ ಬೆಂಗಳೂರಿನ ಮೇಲೆ ಬೀಳುವುದು ಬೇಡ ಎಂದು ಸಚಿವ ಮುನಿರತ್ನ ತಿರುಗೇಟು ನೀಡಿದ್ದರು.
ಇದನ್ನೂ ಓದಿ: ಅಂತಿಮಗೊಳ್ಳದ ಕಾಂಗ್ರೆಸ್ 2ನೇ ಪಟ್ಟಿ: ಗುರುವಾರ ಮತ್ತೊಮ್ಮೆ ಸಭೆ ನಡೆಸಲು ತೀರ್ಮಾನ