ಬೆಂಗಳೂರು: ಅನಗತ್ಯ ನಿಗಮಗಳು ಹಾಗೂ ಪ್ರಾಧಿಕಾರಗಳು, ಹುದ್ದೆ ರದ್ದು, ಕೆಲವು ನಿಗಮಗಳನ್ನು ಇಲಾಖೆಯಲ್ಲಿ ವಿಲೀನಗೊಳಿಸಲು ನಿನ್ನೆ(ಮಂಗಳವಾರ) ನಡೆದ ಸಚಿವ ಸಂಪುಟ ಉಪ ಸಮಿತಿ ಸಭೆ ತೀರ್ಮಾನಿಸಿದೆ.
ಪ್ರಮುಖವಾಗಿ ಶಿಕ್ಷಣ ಇಲಾಖೆಯಲ್ಲಿ ಮುದ್ರಣ ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ಇಲಾಖೆಯನ್ನು, ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವನ್ನು ಪ್ರವಾಸೋದ್ಯಮ ಇಲಾಖೆಯಲ್ಲಿ ವಿಲೀನಗೊಳಿಸಲು ನಿರ್ಧರಿಸಲಾಗಿದೆ. ಕೃಷಿ ಇಲಾಖೆಯಡಿ ಬರುವ ಮೈಸೂರು ತಂಬಾಕು ಕಂಪನಿ, ಕೈಗಾರಿಕಾ ಕೃಷಿ ನಿಗಮ ಹಾಗೂ ಕೈಗಾರಿಕಾ ಆಹಾರ ನಿಗಮಗಳ ರದ್ದು ಹಾಗೂ ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಯನ್ನು ಒಂದೇ ಸಚಿವಾಲಯದ ಅಡಿ ತರಲು ಹಾಗೂ ಅರಣ್ಯ ಇಲಾಖೆಯಲ್ಲಿ ಜಿಲ್ಲೆ ಮತ್ತು ತಾಲೂಕಿಗೆ ಒಬ್ಬರೇ ಅಧಿಕಾರಿಗೆ ಜವಾಬ್ದಾರಿ ನೀಡಲು ತೀರ್ಮಾನ ಮಾಡಲಾಗಿದೆ.
ವಿಧಾನಸೌಧದಲ್ಲಿ ನಡೆದ ಆಡಳಿತ ಸುಧಾರಣಾ ಆಯೋಗ ನೀಡಿರುವ ಶಿಫಾರಸುಗಳ ಜಾರಿ ಸಂಬಂಧ ರಚಿಸಿರುವ ಸಂಪುಟದ ಉಪ ಸಮಿತಿ ಸಭೆಯ ನಂತರ ಮಾಧ್ಯಮದವರಿಗೆ ಈ ಬಗ್ಗೆ ಸಮಿತಿ ಅಧ್ಯಕ್ಷ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಮಾಹಿತಿ ನೀಡಿದರು. ಮುದ್ರಣ ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ಇಲಾಖೆಯನ್ನು ಶಿಕ್ಷಣ ಇಲಾಖೆಯಲ್ಲಿ ವಿಲೀನಗೊಳಿಸಲಾಗುವುದು. ಉನ್ನತ ಹುದ್ದೆಗಳಲ್ಲಿ ಇರುವವರನ್ನು ಬೇರೆಡೆಗೆ ವರ್ಗ ಮಾಡಿ ಉಳಿದವರನ್ನು ಶಿಕ್ಷಣ ಇಲಾಖೆಯಲ್ಲಿ ಮುಂದುವರೆಸಲಾಗುವುದು. ಅದೇ ರೀತಿ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೂ ಹೆಚ್ಚಿನ ಕೆಲಸ ಇಲ್ಲದ ಕಾರಣ ನಿಗಮವನ್ನು ಪ್ರವಾಸೋದ್ಯಮ ಇಲಾಖೆಯಲ್ಲಿ ವಿಲೀನಗೊಳಿಸಲಾಗುವುದು ಎಂದು ಹೇಳಿದರು.
ಒಂದೇ ಸಚಿವಾಲಯ ರಚನೆ, 3 ನಿಗಮ ರದ್ದು: ಕೃಷಿ, ತೋಟಗಾರಿಕೆ ಮತ್ತು ಕೃಷಿ ಇಲಾಖೆಗೆ ಪ್ರತ್ಯೇಕ ಸಚಿವಾಲಯದ ಅವಶ್ಯಕತೆ ಇಲ್ಲ. ಮೂರು ಇಲಾಖೆಗಳು ಒಂದಕ್ಕೊಂದು ಪೂರಕವಾಗಿದೆ. ಹೀಗಾಗಿ ಈ ಮೂರು ಇಲಾಖೆಗಳಿಗೆ ಒಂದೇ ಸಚಿವಾಲಯ ರಚಿಸಲಾಗುವುದು. ಕೃಷಿ ಇಲಾಖೆಯಡಿ ಬರುವ ಮೈಸೂರು ತಂಬಾಕು ಕಂಪನಿ, ಕೈಗಾರಿಕಾ ಕೃಷಿ ನಿಗಮ, ಕೈಗಾರಿಕಾ ಆಹಾರ ನಿಗಮಗಳನ್ನು ರದ್ದು ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
2 ಸಾವಿರ ಹುದ್ದೆ ರದ್ದು: ರೇಷ್ಮೆ ಇಲಾಖೆಯಡಿ ಪ್ರತಿ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಕಚೇರಿ, ನಿರ್ದೇಶಕರು, ಅಧಿಕಾರಿಗಳು ಸಿಬ್ಬಂದಿ ಇದ್ದಾರೆ. ಕೆಲವು ಜಿಲ್ಲೆಗಳಲ್ಲಿ ರೇಷ್ಮೆ ಬೆಳೆಯದಿದ್ದರೂ ಸಹ ಕಚೇರಿಗಳು ಅಸ್ತಿತ್ವದಲ್ಲಿವೆ. ಈ ರೀತಿ ಅನಗತ್ಯವಾಗಿರುವ ಕಚೇರಿಗಳನ್ನು ರದ್ದು ಮಾಡಲಾಗುವುದು. ಇದರಿಂದ ಸುಮಾರು 2 ಸಾವಿರ ಹುದ್ದೆಗಳನ್ನು ರದ್ದುಗೊಳ್ಳಲಿದೆ ಎಂದು ಸಚಿವರು ಮಾಹಿತಿ ನೀಡಿದರು.
ಅರಣ್ಯ ಇಲಾಖೆಯಲ್ಲಿ ಅನಗತ್ಯವಾಗಿರುವ ಹುದ್ದೆಗಳನ್ನು ಕಡಿತಗೊಳಿಸಲು ನಿರ್ಧರಿಸಲಾಗಿದೆ. ಇನ್ನು ಮುಂದೆ ತಾಲೂಕು ಹಾಗೂ ಜಿಲ್ಲೆಗೆ ಒಬ್ಬ ಅರಣ್ಯಾಧಿಕಾರಿಗೆ ಜವಾಬ್ದಾರಿ ನೀಡಲಾಗುವುದು. ಆದರೆ ಅರಣ್ಯ ಹೆಚ್ಚಿರುವ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಉತ್ತರ ಕನ್ನಡ ಮುಂತಾದ ಜಿಲ್ಲೆಗಳಿಗೆ ಮಾತ್ರ ಇಬ್ಬರು ಅರಣ್ಯ ಅಧಿಕಾರಿಗಳು ಇರುತ್ತಾರೆ. ಅರಣ್ಯ ಇಲಾಖೆಯಲ್ಲಿ ಕೆಳಹಂತದ ಅಧಿಕಾರಿ, ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸುವಂತೆ ಅರಣ್ಯ ಇಲಾಖೆಗೆ ಸೂಚಿಸಲಾಗಿದೆ ಎಂದು ಹೇಳಿದರು.
ಅಭಿವೃದ್ಧಿ ಪ್ರಾಧಿಕಾರ ರದ್ದು: ಬೆಂಗಳೂರು ಸುತ್ತ ಬರುವ ತಾಲೂಕುಗಳಲ್ಲಿ 10 ನಗರಾಭಿವೃದ್ಧಿ ಪ್ರಾಧಿಕಾರ ರಚನೆಯಾಗಿದ್ದು, ಈ ಪೈಕಿ ರಾಮನಗರ, ಚೆನ್ನಪಟ್ಟಣ, ಕನಕಪುರ, ಸಾತನೂರು ಸೇರಿದಂತೆ ಏಳು ಪ್ರಾಧಿಕಾರಗಳನ್ನು ರದ್ದು ಮಾಡಲಾಗುವುದು. ಇದಕ್ಕೆ ಬದಲಾಗಿ ಜಿಲ್ಲೆಗೊಂದು ಪ್ರಾಧಿಕಾರ ರಚಿಸಲಾಗುವುದು ಎಂದು ಹೇಳಿದರು.
4 ಅಭಿವೃದ್ಧಿ ಆಯುಕ್ತರ ಹುದ್ದೆ ರದ್ದತಿಗೆ ಚಿಂತನೆ: ರಾಜ್ಯದ ನಾಲ್ಕು ಕಡೆ ಇರುವ ವಿಭಾಗೀಯ ಅಭಿವೃದ್ಧಿ ಆಯುಕ್ತರ ಹುದ್ದೆ ರದ್ದು ಮಾಡಿ ರಾಜ್ಯಕ್ಕೆ ಒಬ್ಬರನ್ನೇ ಅಭಿವೃದ್ಧಿ ಆಯುಕ್ತರನ್ನಾಗಿ ಮಾಡುವ ಚಿಂತನೆ ಮಾಡಲಾಗಿದೆ ಎಂದು ಸಚಿವರು ಹೇಳಿದರು. ಸಂಪುಟ ಉಪ ಸಮಿತಿಯ ನಿರ್ಧಾರಗಳನ್ನು ಶೀಘ್ರವೇ ಸಂಪುಟದಲ್ಲಿ ಇಟ್ಟು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಕುಮ್ಕಿ, ಬಾಣೆ ಜಮೀನು ರೈತರಿಗೆ ನೀಡಲು ಶೀಘ್ರದಲ್ಲಿ ಆದೇಶ: ಮಲೆನಾಡು ಭಾಗದ ಕುಮ್ಕಿ, ಬಾಣೆ, ಸೊಪ್ಪಿನ ಬೆಟ್ಟ ಜಮೀನುಗಳನ್ನು ರೈತರಿಗೆ ನೀಡಲು ಆದಷ್ಟು ಬೇಗ ಈ ನಿಟ್ಟಿನಲ್ಲಿ ಸರ್ಕಾರದಿಂದ ಆದೇಶ ಮಾಡಲಾಗುವುದು ಎಂದು ಸಚಿವ ಅಶೋಕ್ ತಿಳಿಸಿದರು.
ಈ ಜಮೀನುಗಳನ್ನು ಅರಣ್ಯ ಭೂಮಿ ಅಂತ ಘೋಷಣೆ ಆಗಿದೆ. ಆದರೆ, 60-70 ವರ್ಷಗಳಿಂದ ಜನರಿಗೆ ಈ ಭೂಮಿಗಳಲ್ಲಿ ಸಾಗುವಳಿ ಮಾಡುತ್ತಿದಾರೆ. ಈ ಜಮೀನುಗಳಲ್ಲಿ ತೆಂಗು, ಅಡಿಕೆ ಬೆಳೆಯುತ್ತಿದ್ದಾರೆ. ಹೀಗಾಗಿ ಈ ರೀತಿಯ ಜಮೀನುಗಳನ್ನು ಕಾನೂನು ತಿದ್ದುಪಡಿ ಮಾಡಿ ರೈತರಿಗೆ ಕೊಡಬೇಕು ಎಂದು ನಿರ್ಧಾರ ಮಾಡಿದ್ದೇವೆ. ಈ ಜಮೀನುಗಳನ್ನು ಅರಣ್ಯ ಭೂಮಿ ಮಾಡಲು ಈಗ ಆಗಲ್ಲ. ಹೀಗಾಗಿ ಬಡ ರೈತರಿಗೆ ಕೊಡಲು ತೀರ್ಮಾನ ಮಾಡಲಾಗುವುದು. ಈ ಸಂಬಂಧ ಇಂದು ಕಂದಾಯ, ಅರಣ್ಯ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಲಾಗಿದೆ. ಆದಷ್ಟು ಬೇಗ ಈ ನಿಟ್ಟಿನಲ್ಲಿ ಸರ್ಕಾರಿಂದ ಆದೇಶ ಮಾಡಲಾಗುವುದು ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಆರಂಭವಾಗಿದೆ. ಎಷ್ಟೇ ಪ್ರತಿರೋಧ ಬಂದರೂ ನಿಲ್ಲಿಸಲ್ಲ. ಮುಂದಿನ ಮಳೆಗಾಲಕ್ಕೆ ಈ ರೀತಿಯ ಸಮಸ್ಯೆ ಆಗಬಾರದು. ಎಲ್ಲರೂ ಸಹಕಾರ ನೀಡಿದರೆ ನಿರಂತರವಾಗಿ ತೆರವು ಕಾರ್ಯಾಚರಣೆ ನಡೆಯಲಿದೆ ಎಂದು ಹೇಳಿದರು.
ಇದನ್ನೂ ಓದಿ: ಮೂರು ವಿಧೇಯಕಗಳಿಗೆ ಅನುಮೋದನೆ ನೀಡಿದ ರಾಜ್ಯಪಾಲರು.. ರಾಜಪತ್ರ ಹೊರಡಿಸಿದ ಸರ್ಕಾರ