ಬೆಂಗಳೂರು: ಸಿಎಂ ಯಡಿಯೂರಪ್ಪ ವಿದೇಶ ಪ್ರವಾಸ ಹಿನ್ನೆಲೆ ಜಂಟಿ ಅಧಿವೇಶನವನ್ನು ಫೆಬ್ರವರಿ 17ಕ್ಕೆ ಮುಂದೂಡಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ.
ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾನೂನು ಸಚಿವ ಮಾಧುಸ್ವಾಮಿ, ಈ ಮುಂಚೆ ಜಂಟಿ ಅಧಿವೇಶನವನ್ನು ಜನವರಿ 20ರಿಂದ 30ರ ವರೆಗೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಸಿಎಂ ಅಲಭ್ಯತೆಯ ಹಿನ್ನೆಲೆ ಇದನ್ನು ಫೆಬ್ರವರಿ 17ರಿಂದ 21ರವರೆಗೆ ನಡೆಸಲಾಗುವುದು. ಇನ್ನು ಬಜೆಟ್ ಅಧಿವೇಶನ ಮಾರ್ಚ್ 2ರಿಂದ ಆರಂಭವಾಗಲಿದ್ದು, ಮಾರ್ಚ್ 5 ರಂದು ಆಯವ್ಯಯ ಮಂಡನೆ ಮಾಡಲಾಗುವುದು ಎಂದರು.
ನ್ಯಾಷನಲ್ ಲಾ ಸ್ಕೂಲ್ ನಲ್ಲಿ ಮೀಸಲಾತಿ:
ಇನ್ನು ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ನಲ್ಲಿ ಕರ್ನಾಟಕ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡುವ ಸಂಬಂಧ ತಿದ್ದುಪಡಿ ಮಸೂದೆಯನ್ನು ಅಧಿವೇಶನದಲ್ಲಿ ಮಂಡಿಸಲು ಸರ್ಕಾರ ನಿರ್ಧರಿಸಿದೆ.
ಈ ಬಗ್ಗೆ ತಿಳಿಸಿದ ಸಚಿವ ಮಾಧುಸ್ವಾಮಿ, ಇಲ್ಲಿವರೆಗೆ ಕರ್ನಾಟಕ ವಿದ್ಯಾರ್ಥಿಗಳಿಗೆ ನ್ಯಾಷನಲ್ ಲಾ ಸ್ಕೂಲ್ ನಲ್ಲಿ ಯಾವುದೇ ಅನುಕೂಲ ಇರಲಿಲ್ಲ. ಹಿಂದಿನ ಸರ್ಕಾರ 50% ಮೀಸಲಾತಿ ನೀಡಬೇಕು ಎಂದು ಬಿಲ್ ಪಾಸ್ ಮಾಡಿ ರಾಜ್ಯಪಾಲರಿಗೆ ಕಳುಹಿಸಿದ್ದರು. ಆದರೆ ರಾಜ್ಯಪಾಲರು ಅದನ್ನು ತಿರಸ್ಕರಿಸಿದ್ದರು.ಈಗ ರಾಜ್ಯದಲ್ಲಿ 10 ವರ್ಷ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳಿಗೆ ನ್ಯಾಷನಲ್ ಲಾ ಸ್ಕೂಲ್ ನಲ್ಲಿ 100ರಲ್ಲಿ 25 ಮಕ್ಕಳಿಗೆ ಅಂದರೆ ಶೇ.25 ಮೀಸಲು ಕಲ್ಪಿಸುವ ತಿದ್ದುಪಡಿ ಮಸೂದೆಯನ್ನು ಮಂಡಿಸಲು ನಿರ್ಧರಿಸಲಾಗಿದೆ ಎಂದರು.
ಸಂಪುಟದ ಇತರ ಪ್ರಮುಖ ತೀರ್ಮಾನಗಳು:
- ಬೆಂಗಳೂರಿನಲ್ಲಿ ನವಂಬರ್ 3-5 ಮೂರು ದಿನಗಳ ಜಾಗತಿಕ ಹೂಡಿಕೆದಾರರ ಸಭೆ ನಡೆಸಲು ನಿರ್ಧಾರ.
- ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಅಧ್ಯಕ್ಷಗಿರಿ ಆ ಭಾಗದ ಸಚಿವರು ಆಗಬೇಕೆಂಬ ಕಾನೂನಿಗೆ ತಿದ್ದುಪಡಿ ತಂದು ಆ ಭಾಗದ ಯಾರಾದರು ಶಾಸಕರನ್ನು ನೇಮಕ ಮಾಡಲು ಅವಕಾಶ ಕಲ್ಪಿಸಲು ನಿರ್ಧಾರ.
- ಕೆಪಿಎಸ್ ಸಿಯಲ್ಲಿ ಎ,ಬಿ,ಸಿ,ಡಿ ಹುದ್ದೆಗಳಲ್ಲಿ ಸಿ,ಡಿ ಹುದ್ದೆಗಳನ್ನು ಲಿಖಿತ ಪರೀಕ್ಷೆ ಆಧಾರದಲ್ಲಿ ನೇಮಕ ಮಾಡಲಾಗುತ್ತಿದ್ದು, ಎ ಮತ್ತು ಬಿ ಗ್ರೂಪ್ ನ ಕೆಲ ನೇಮಕಾತಿಯನ್ನು ಆಯ್ದ ಕೆಲ ಇಲಾಖೆಗಳಲ್ಲೂ ಅದೇ ಮಾದರಿಯಲ್ಲಿ ಲಿಖಿತ ಪರೀಕ್ಷೆ ಆಧಾರದಲ್ಲಿ ನೇಮಕ ಮಾಡಲು ತೀರ್ಮಾನ.
- ವಾಜಪೇಯಿ ವಸತಿ ಯೋಜನೆ ಹಾಗೂ ಅಂಬೇಡ್ಕರ್ ವಸತಿ ಯೋಜನೆಯಡಿ ಬೆಂಗಳೂರಿನಲ್ಲಿ ಒಂದು ಲಕ್ಷ ಮನೆ ನಿರ್ಮಾಣ ಯೋಜನೆ ನಿಯಮ ತಿದ್ದುಪಡಿ. ಫಲಾನುಭವಿಗಳ ಆರ್ಥಿಕ ಆದಾಯ ಮಿತಿ 87,500 ರು. ಇದ್ದಿದ್ದನ್ನು 3 ಲಕ್ಷಕ್ಕೆ ವಿಸ್ತರಣೆ. ಪ್ಲೋರ್ ಎತ್ತರವನ್ನು ಜಿ+3 ಗೆ ಮಿತಿಗೊಳಿಸಲು ತೀರ್ಮಾನ. ಈವರೆಗೆ 28,754 ಮನೆಗಳು ನಿರ್ಮಾಣವಾಗಿದೆ. ಟೆಂಡರ್ ಕರೆಯದೇ ಇರುವ ಮನೆಗಳಿಗೆ ಈ ತಿದ್ದುಪಡಿ ಅನ್ವಯ.
- ಚಿಲ್ಲರೆ ವ್ಯಾಪಾರ ನೀತಿಯಡಿ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಅವಕಾಶ ಇದ್ದಿಲ್ಲ. ಈಗ ರಾತ್ರಿ ಪಾಳಿಯಲ್ಲೂ ಕೆಲಸ ಮಾಡಲು ಅನುವು ಮಾಡಲು ಕಾಯ್ದೆ ತಿದ್ದುಪಡಿ ತಂದು ವಿಧಾನಮಂಡಲದಲ್ಲಿ ಮಂಡಿಸಲು ತೀರ್ಮಾನ.
- ಬೆಂಗಳೂರು ಟರ್ಪ್ ಕ್ಲಬ್ ನಿಂದ 37.46 ಕೋಟಿ ರು. ಬಾಡಿಗೆ ಹಣ ಬರಬೇಕಾಗಿದೆ. ಕ್ಲಬ್ ನ ಲೀಸ್ ಅವಧಿ 31.12.2009 ಮುಕ್ತಾಯವಾಗಿದೆ. ಆದರೂ ಕೋರ್ಟ್ ಗೆ ಹೋಗಿ ಯಾವುದೇ ಕ್ರಮ ಜರುಗಿಸದಂತೆ ಈ ಸಂಬಂಧ ಯತಾಸ್ಥಿತಿ ಆದೇಶ ತಂದಿದ್ದರು. ಈಗ ಕನಿಷ್ಠ ಅವರು ಕೊಡಬೇಕಾದ ಬಾಡಿಗೆ ವಸೂಲಿ ಮಾಡಲು ಕ್ರಮ ಜರಗಿಸಲು ನಿರ್ಧಾರ.
- ಮೈಸೂರು ಟರ್ಫ್ ಕ್ಲಬ್ ಗುತ್ತಿಗೆ 30 ವರ್ಷಗೆ ವಿಸ್ತರಿಸಲು ನಿರ್ಧಾರ
- 4 ರಕ್ತ ನಿಧಿ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ರೀಜನಲ್ ಸೆಂಟರ್ ಆಫ್ ಎಕ್ಸಲೆನ್ಸ್ ಮಾಡಲು ನಿರ್ಧಾರ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ, ಮಂಗಳೂರಿನ ವೆನ್ ಲಾಕ್ ಆಸ್ಪತ್ರೆ, ಹುಬ್ಬಳ್ಳಿಯ ಕಿಮ್ಸ್ , ಬಳ್ಳಾರಿಯ ಜಿಲ್ಲಾ ಆಸ್ಪತ್ರೆ ವಿಮ್ಸ್ ನಲ್ಲಿ ರೀಜನಲ್ ಸೆಂಟರ್ ಆಫ್ ಎಕ್ಸಲೆನ್ಸ್ ಸ್ಥಾಪಿಸಲು ತೀರ್ಮಾನ.
ಯುಪಿ ಮಾದರಿ ಕಾನೂನು ಸದ್ಯಕ್ಕಿಲ್ಲ:
ಉತ್ತರ ಪ್ರದೇಶ ಮಾದರಿಯಲ್ಲಿ ಗಲಭೆಕೋರರ ಆಸ್ತಿ ಮುಟ್ಟುಗೋಲು ಕಾನೂನು ರಾಜ್ಯದಲ್ಲಿ ಸದ್ಯಕ್ಕೆ ತರುವುದಿಲ್ಲ ಎಂದು ಸಚಿವ ಮಾಧು ಸ್ವಾಮಿ ತಿಳಿಸಿದ್ದಾರೆ.