ಬೆಂಗಳೂರು: ಶಿವಾಜಿನಗರ ಉಪಚುನಾವಣೆಯಲ್ಲಿ ಮತದಾನ ಪ್ರಕ್ರಿಯೆ ನೀರಸವಾಗಿದ್ದರೆ. ಕೆ ಆರ್ ಪುರದಲ್ಲಿ 104 ವಯಸ್ಸಿನ ಅಜ್ಜಿವೋರ್ವರು ಉತ್ಸಾಹದಿಂದಲೇ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸುವ ಮೂಲಕ ಗಮನ ಸೆಳೆದರು.
ಮಧ್ಯಾಹ್ನ ಮೂರು ಗಂಟೆಯವರೆಗೆ ಶಿವಾಜಿ ನಗರದಲ್ಲಿ ಕೇವಲ 33:22%ರಷ್ಟು ಮತದಾನವಾಗಿತ್ತು. ಬೆಳಗಿನಿಂದಲೂ ಹಿರಿಯ ನಾಗರಿಕರೇ ಹೆಚ್ಚಾಗಿ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಿದರು. ಅದ್ರೆ ಯುವ ಮತದಾರರಿಂದ ಮತದಾನಕ್ಕೆ ಆಸಕ್ತಿ ಕಂಡುಬರಲಿಲ್ಲ.
ರಜೆ ಸಿಕ್ತು ಅಂತ ಮನೆಯಲ್ಲಿ ಕೂರಬೇಡಿ:
ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದಲ್ಲಿ ಯುವ ಮತದಾರರೂ ನಾಚುವ ಹಾಗೆ ಶತಾಯುಷಿ ಸಲ್ಲಮ್ಮ ಎಂಬುವರು ನಡುಗುತ್ತಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದರು. 104 ವರ್ಷದ ಸಲ್ಲಮ್ಮ ಕ್ಷೇತ್ರದ ಕಲ್ಕೆರೆ ಗ್ರಾಮದ ನಮ್ಮೂರ ಸರ್ಕಾರಿ ಶಾಲೆಯ ಮತಗಟ್ಟೆಗೆ ಬಂದು ವೋಟು ಚಲಾಯಿಸಿದರು.
ಇನ್ನು, 70 ವರ್ಷದ ಸುಮತಿ ಬಾನು ಎಂಬುವರು ಈಟಿವಿ ಭಾರತ್ ಜೊತೆ ಮಾತನಾಡಿ, ಎಲ್ಲಾ ಮತದಾರರು ಬಂದು ಮತ ಚಲಾಯಿಸಬೇಕು. ರಜೆ ಸಿಕ್ಕಿದೆ ಅಂದುಕೊಂಡು ಯಾರೂ ಮನೆಯಲ್ಲಿ ಕೂರಬೇಡಿ. ದಯವಿಟ್ಟು ಉತ್ತಮ ಅಭ್ಯರ್ಥಿಗೆ ವೋಟು ಹಾಕಿ ಒಳ್ಳೆಯ ಸರ್ಕಾರ ತನ್ನಿ ಎಂದು ಮನವಿ ಮಾಡಿದ್ರು.
ಮೌಂಟ್ ಕಾರ್ಮೆಲ್ ಕಾಲೇಜು ಬೂತ್ಗಳಲ್ಲಿ ಹಿರಿಯರ ದರ್ಬಾರ್:
ಶಿವಾಜಿನಗರ ಕ್ಷೇತ್ರದಲ್ಲಿ ಮತದಾನ ಕೊಂಚ ಮಟ್ಟಿಗೆ ನಿರಾಸೆ ಮೂಡಿಸಿದೆ. ಬೆಳಗ್ಗೆಯಿಂದ ಯುವ ಮತದಾರರು ಮತದಾನ ಮಾಡುವ ಹುಮ್ಮಸ್ಸು ತೋರಲಿಲ್ಲ. ಆದ್ರೆ ವಯಸ್ಸಾದವರು ಮಾತ್ರ ಮಧ್ಯ ವಯಸ್ಕರು, ವೃದ್ಧರು ಉತ್ಸುಕತೆಯಿಂದ ತಮ್ಮ ಹಕ್ಕು ಚಲಾಯಿಸಿದ್ದು ಕಂಡುಬಂತು.