ಬೆಂಗಳೂರು: ಕೆ.ಆರ್. ಪೇಟೆ ಉಪ ಚುನಾವಣೆಗೆ ಜೆಡಿಎಸ್ನಿಂದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಗೌಡ ಕಣಕ್ಕಿಳಿದರೆ ಬಿಜೆಪಿಯಿಂದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರರನ್ನು ಕಣಕ್ಕಿಳಿಸುವ ಕುರಿತು ಬಿಜೆಪಿ ನಾಯಕರು ಚಿಂತನೆ ನಡೆಸಿದ್ದಾರೆ ಎನ್ನಲಾಗ್ತಿದೆ.
ಶಾಸಕ ನಾರಾಯಣ ಗೌಡ ಅನರ್ಹತೆಯಿಂದ ತೆರವಾಗಿರುವ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ದಿನಾಂಕ ನಿಗದಿಯಾಗದೇ ಇದ್ದರೂ, ಅಭ್ಯರ್ಥಿ ಹೆಸರುಗಳ ಕುರಿತು ಚರ್ಚೆ ಜೋರಾಗಿದೆ. ರಾಜೀನಾಮೆ ನೀಡಿದ್ದರೂ ಅದನ್ನು ಅಂಗೀಕರಿಸದೇ ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ ಸ್ಪೀಕರ್ ನಡೆಯ ವಿರುದ್ಧ ಅನರ್ಹ ಶಾಸಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಈ ನಡುವೆ ಉಪ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆಗಳು ಶುರುವಾಗಿವೆ.
ಜೆಡಿಎಸ್ ನಿಂದ ಮಾಜಿ ಸಿಎಂ ಹೆಚ್. ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಗೌಡ ಅವರನ್ನು ಕಣಕ್ಕಿಳಿಸುವಂತೆ ಒತ್ತಾಯ ಕೇಳಿ ಬಂದಿದೆ. ಒಂದು ವೇಳೆ ನಿಖಿಲ್ ಅಭ್ಯರ್ಥಿ ಆದರೆ ಬಿಜೆಪಿಯಿಂದ ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಸಿಎಂ ಯಡಿಯೂರಪ್ಪ ಅವರ ಪುತ್ರ ಬಿ.ವೈ ವಿಜಯೇಂದ್ರ ಅವರನ್ನು ಕಣಕ್ಕಿಳಿಸಬೇಕು ಎನ್ನುವ ಚಿಂತನೆ ಮಂಡ್ಯ ಬಿಜೆಪಿ ನಾಯಕರದ್ದಾಗಿದೆ. ಈ ಸಂಬಂಧ ಅವರು ರಾಜ್ಯ ನಾಯಕರ ಜೊತೆ ಸಮಾಲೋಚನೆ ನಡೆಸಲು ನಿರ್ಧರಿಸಿದ್ದಾರೆ ಎನ್ನಲಾಗ್ತಿದೆ.
ವಿಜಯೇಂಂದ್ರ ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಟಿಕೆಟ್ ಕೈತಪ್ಪಿತ್ತು. ಈ ವೇಳೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಕೆ ಆರ್ ಪೇಟೆ ಕ್ಷೇತ್ರದಿಂದ ವಿಜಯೇಂದ್ರಗೆ ಟಿಕೆಟ್ ಕೊಟ್ಟರೆ ಅದನ್ನು ಪಕ್ಷದ ಕಾರ್ಯಕರ್ತರು ಸ್ವಾಗತಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.