ಬೆಂಗಳೂರು: ಕೆ.ಆರ್.ಪುರ ವಿಧಾನಸಭಾ ಕ್ಷೇತ್ರ ಸೇರಿದಂತೆ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಇಂದು ಹೊರಬೀಳಲಿದೆ. ಬೆಂಗಳೂರಿನಲ್ಲಿ ನಡೆಯುವ ಮತ ಎಣಿಕೆ ಕೇಂದ್ರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಕೆ.ಆರ್.ಪುರಂ ಹಾಗೂ ಮಹಾಲಕ್ಷೀ ಲೇಔಟ್ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯು ವಿಠ್ಠಲ್ ಮಲ್ಯ ರಸ್ತೆಯ ಸೆಂಜ್ ಜೋಸೆಫ್ ಹೈಸ್ಕೂಲ್ ನಲ್ಲಿ ಕೌಂಟಿಂಗ್ ನಡೆಯಲಿದೆ. ಇದಕ್ಕೆ ಬೇಕಾದ ಅಗತ್ಯ ಸಿದ್ಧತೆಯನ್ನು ಚುನಾವಣಾ ಅಧಿಕಾರಿಗಳು ಈಗಾಗಲೇ ತಯಾರಿ ಮಾಡಿಕೊಂಡಿದ್ದಾರೆ.
ಕೆ.ಆರ್.ಪುರ ಕ್ಷೇತ್ರದ ಮತ ಎಣಿಕೆಗೆ 14 ಟೇಬಲ್ ಹಾಕಲಾಗಿದೆ. ಮತ ಎಣಿಕೆ ಸುಲಭವಾಗಲು ಮೈಕೊ ಅಬ್ಸರ್ ವೇರ್, ಮೇಲ್ವಿಚಾರಕರು ಹಾಗೂ ಸಹಾಯಕರಿಗೆ ಚುನಾವಣಾ ಆಯೋಗವು ಸೂಕ್ತ ತರಬೇತಿ ನೀಡಿದೆ.
ಇಂದು ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭವಾಗಲಿದೆ. ಮೊದಲು ಅಂಚೆ ಮತ ಎಣಿಕೆ ಮಾಡಲಿದ್ದು, ಅನಂತರ ಆಯಾ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯಾಗಲಿವೆ. ಬಿಜೆಪಿಯಿಂದ ಬೈರತಿ ಬಸವರಾಜ್, ಕಾಂಗ್ರೆಸ್ನಿಂದ ಎಂ.ನಾರಾಯಣಸ್ವಾಮಿ ಹಾಗೂ ಜೆಡಿಎಸ್ನಿಂದ ಕೃಷ್ಣಮೂರ್ತಿ ಹಾಗೂ ಪಕ್ಷೇತರರು ಸೇರಿದಂತೆ ಒಟ್ಟು 13 ಮಂದಿ ಸ್ಪರ್ಧಿಗಳು ಕಣದಲ್ಲಿದ್ದಾರೆ.