ಬೆಂಗಳೂರು: ಛತ್ತೀಸ್‌ಗಢ ಅಕ್ಕಿಯ ಮೂಲಕ ತಮ್ಮ ಜೇಬಿಗೆ ಹಣ ಹಾಕಿಕೊಳ್ಳುವ ಕೆಲಸ ಈ ಸರ್ಕಾರ ಮಾಡ್ತಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಆರೋಪಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಛತ್ತೀಸ್‌ಗಢದಲ್ಲಿ ಅಕ್ಕಿ ಖರೀದಿ ಮೂಲಕ ಕಮೀಷನ್ ಪಡೆಯಲು ಈ ಸರ್ಕಾರ ಹೊರಟಿದೆ. ಎಐಸಿಸಿಗೆ ಕರ್ನಾಟಕದಲ್ಲಿ ಎಟಿಎಂ ಸರ್ಕಾರ ತೆರೆಯಲಾಗಿದೆ. ಇದೊಂದು ಎಟಿಎಂ ಸರ್ಕಾರ. ಸುರ್ಜೇವಾಲ ಅದರ ಏಜೆಂಟ್ ಎಂದು ವಾಗ್ದಾಳಿ ನಡೆಸಿದ್ದಾರೆ.
ಜೂನ್ 20 ಕ್ಕೆ ಕೇಂದ್ರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯೆಸಿದ ಅವರು, ಇದೊಂದು ಹಾಸ್ಯಾಸ್ಪದ ಪ್ರತಿಭಟನೆ ಅನಿಸ್ತಿದೆ. ದೇಶಾದ್ಯಂತ ಬಡ ಜನರಿಗೆ ಕೇಂದ್ರ ಅಕ್ಕಿ ಕೊಡ್ತಿದೆ. ಹೆಚ್ಚುವರಿ ಅಕ್ಕಿ ಕೊಡೋದು ಕಾಂಗ್ರೆಸ್ ನ ಜವಾಬ್ದಾರಿ. ಕೇಂದ್ರದ ಬಳಿ ಅಕ್ಕಿ ಇಲ್ಲ, ಹಾಗಾಗಿ ಕೊಡಕ್ಕಾಗ್ತಿಲ್ಲ. ಆದ್ರೆ ಕೇಂದ್ರದ ವಿರುದ್ಧ ಕಾಂಗ್ರೆಸ್ ಧರಣಿ, ಜನವಿರೋಧಿ ನಿರ್ಧಾರ. ಕೇಂದ್ರದ ಬಳಿ ಅಕ್ಕಿ ಇದ್ದರೆ ತಾನೇ ಕೊಡೋದು. ಇದು ಮಳೆಗಾಲ, ಅಕ್ಕಿ ಸ್ಟಾಕ್ ಇಲ್ಲ. ಇವರಿಗೆ ಅಕ್ಕಿ ಕೊಟ್ಬಿಟ್ರೆ ಉಳಿದ ರಾಜ್ಯಗಳಿಗೆ ಏನು ಕೊಡೋದು ಅನ್ನೋ ಪ್ರಶ್ನೆ ಕೇಂದ್ರದ್ದು ಎಂದು ಕಿಡಿಕಾರಿದರು.
ಸಣ್ಣ ಸಣ್ಣ ಕೈಗಾರಿಕೆಗಳಿಗೆ ವಿದ್ಯುತ್ ದರ ಏರಿಕೆಯಿಂದ ಸಮಸ್ಯೆ ಆಗಿದೆ. ಎರಡು ಮೂರು ಪಟ್ಟು ಕೈಗಾರಿಕೆಗಳ ವಿದ್ಯುತ್ ದರ ಹೆಚ್ಚಳ ಆಗಿದೆ. ಕೈಗಾರಿಕೆಗಳು ಮುಚ್ಚುವ ಪರಿಸ್ಥಿತಿ ಬಂದಿದೆ. ಇಷ್ಟು ಭಾರಿ ಪ್ರಮಾಣದ ವಿದ್ಯುತ್ ದರ ಹೆಚ್ಚಳಕ್ಕೆ ಉದ್ಯಮ ವಲಯ ಶಾಕ್ ಆಗಿದೆ. ಸರ್ಕಾರದ ವಿರುದ್ಧ ಎಲ್ಲರೂ ಶಾಪ ಹಾಕ್ತಿದಾರೆ ಎಂದು ಅಪಾದಿಸಿದರು.
ಸೋಮವಾರ ಬಿಜೆಪಿ ಕಚೇರಿಯಲ್ಲಿ ನಮ್ಮ ನಾಯಕರು ತುರ್ತು ಸಭೆ ಕರೆದಿದ್ದು, ಗೋಹತ್ಯೆ ತಡೆ ಕಾಯ್ದೆ, ಮತಾಂತರ ನಿಷೇಧ ಕಾಯ್ದೆ ರದ್ದು ನಿರ್ಧಾರಗಳು, ವಿದ್ಯುತ್ ಹೆಚ್ಚಳ ಬಗ್ಗೆ ಮುಂದಿನ ಹೋರಾಟದ ರೂಪುರೇಷ ಬಗ್ಗೆ ಚರ್ಚೆ ಮಾಡಲು ಸಭೆ ನಡೆಯಲಿದೆ ಎಂದು ತಿಳಿಸಿದರು.
ಬಿಜೆಪಿ ನಾಯಕರಿಂದ ರಾಜ್ಯ ಪ್ರವಾಸ: ಜೂನ್ 26 ರಿಂದ ಜುಲೈ 5ರ ವರೆಗೆ ರಾಜ್ಯಾದ್ಯಂತ ಕರಪತ್ರಗಳ ವಿತರಣೆ ಅಭಿಯಾನ ನಡೆಯಲಿದೆ. ಎಲ್ಲ ಮನೆ ಮನೆಗಳಿಗೆ ಕೇಂದ್ರದ ಸಾಧನೆಗಳಿರುವ ಕರಪತ್ರಗಳ ವಿತರಣೆಗೆ ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು.
ಮನೆಮನೆಗೆ ಮೋದಿ ಹೆಸರಲ್ಲಿ ಕರಪತ್ರ ವಿತರಣೆ ಮಾಡಲಾಗುತ್ತಿದೆ. 50 ಲಕ್ಷ ಮನೆಗಳಿಗೆ ಕರಪತ್ರಗಳ ವಿತರಣೆ ಗುರಿ ಹೊಂದಲಾಗಿದೆ. ಜೂನ್ 22 ರಿಂದ 26 ರ ವರೆಗೆ ಪಕ್ಷದ ವಿವಿಧ ನಾಯಕರಿಂದ ರಾಜ್ಯ ಪ್ರವಾಸ ಮಾಡಲಿದ್ದಾರೆ. 7 ತಂಡಗಳಲ್ಲಿ ಬಿಜೆಪಿ ನಾಯಕರಿಂದ ರಾಜ್ಯ ಪ್ರವಾಸ ಕೈಗೊಳ್ಳಲಿದೆ. ಪ್ರಧಾನಿ ಮೋದಿಯವರು ಪ್ರಧಾನಿಯಾಗಿ ಒಂಭತ್ತು ವರ್ಷಗಳ ಸಾಧನೆಗಳನ್ನು ಜನರಿಗೆ ತಲುಪಿಸಲು ರಾಜ್ಯ ಪ್ರವಾಸ ಮಾಡಲಿದ್ದಾರೆ ಎಂದು ತಿಳಿಸಿದರು.
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಆರ್. ಅಶೋಕ್, ಸಂಸದ ಡಿ.ವಿ. ಸದಾನಂದ ಗೌಡ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ನೇತೃತ್ವದ 7 ತಂಡಗಳಿಂದ ರಾಜ್ಯ ಪ್ರವಾಸ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಇದನ್ನೂಓದಿ:Ramanagara crime : ತವರು ಮನೆ ಸೇರಿದ್ದ ಹೆಂಡ್ತಿ.. ಶೀಲ ಶಂಕಿಸಿ ಮಕ್ಕಳೆದುರೇ ಪತ್ನಿಯನ್ನು ಕೊಂದ ಪತಿ