ಬೆಂಗಳೂರು : ನಗರದ ರಾಮಮೂರ್ತಿನಗರ ಸಮೀಪದ ಹೊರಮಾವು ಮುಖ್ಯರಸ್ತೆಯ ರೈಲ್ವೆ ಅಂಡರ್ ಪಾಸ್ ಬಳಿ ಹುಕುಂ ಸಿಂಗ್ ಎಂಬಾತ ಮನೆ ನಿರ್ಮಾಣ ಮಾಡಿದ್ದು, ಪಕ್ಕದಲ್ಲಿ ಕುಮರೇಶ್ ಎಂಬಾತ ಹೊಸ ಮನೆ ನಿರ್ಮಾಣ ಮಾಡಲು ಹೋದಾಗ ಹುಕುಂ ಸಿಂಗ್ ಮನೆಯ ಗೋಡೆಗಳು ಬಿರುಕು ಬಿಟ್ಟು ಜನರಲ್ಲಿ ಆತಂಕ ಸೃಷ್ಟಿಯಾಗಿದ್ದು, ನಂತರ ಬಿಬಿಎಂಪಿ ಆ ಕಟ್ಟಡವನ್ನು ತೆರವುಗೊಳಿಸಿದೆ.
ನಿನ್ನೆ ರೈಲ್ವೆ ಅಂಡರ್ ಪಾಸ್ ಬಳಿ ಕುಮರೇಶ್ ಎಂಬಾತ ಮನೆ ಕಟ್ಟಲು ಫೌಂಡೇಶನ್ ತೆಗೆಯಲು ಹೋಗಿದ್ದಾರೆ. ಆ ವೇಳೆ ಹುಕುಂ ಸಿಂಗ್ಗೆ ಸೇರಿದ ಮೂರಂತಸ್ಥಿನ ಕಟ್ಟಡ ಸಂಪೂರ್ಣವಾಗಿ ಬಿರುಕು ಬಿಟ್ಟು ವಾಲಿಕೊಂಡಿದೆ. ಕೂಡಲೇ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಬಂದಿದ್ದಾರೆ. ನಂತರ ಮನೆಯಲ್ಲಿದ್ದವರನ್ನು ಮತ್ತು ಅಕ್ಕಪಕ್ಕದ ಮನೆಯವರನ್ನ ಮನೆ ಖಾಲಿ ಮಾಡಿಸಿ ರಕ್ಷಣಾ ಕಾರ್ಯಾಚರಣೆ ಮಾಡಿದ್ದಾರೆ.
ಹುಕುಂ ಸಿಂಗ್ ಒಡೆತನದಲ್ಲಿರುವ ಆ ಬಿರುಕು ಬಿಟ್ಟಿರುವ ಕಟ್ಟಡ ಹದಿನಾರು ವರ್ಷಗಳ ಹಿಂದಿನ ಕಟ್ಟಡ ಎನ್ನಲಾಗಿದೆ . ಹುಕುಂ ಸಿಂಗ್ ಕಟ್ಟಡಕ್ಕೆ ಅಡಿಪಾಯ ಹಾಕುವ ಸಮಯದಲ್ಲಿ ಸರಿಯಾಗಿ ಹಾಕದೇ ಇರುವುದು ಈ ಕಟ್ಟಡ ಬಿರುಕು ಬಿಡಲು ಕಾರಣ ಎನ್ನಲಾಗಿದೆ. ಇನ್ನು ಈ ಕಟ್ಟಡವನ್ನು ಬಿಬಿಎಂಬಿ ಅಧಿಕಾರಿಗಳು ಡೆಮಾಲಿಷ್ ಮಾಡಲು ಮುಂದಾಗಿದ್ದು ಸ್ಥಳೀಯರ ಆತಂಕವನ್ನು ಕಡಿಮೆ ಮಾಡಿದ್ದಾರೆ.
ಬೆಳಗ್ಗೆಯಿಂದ ಕಟ್ಟಡವನ್ನು ತೆರವು ಮಾಡಲು ನಾನಾ ಕಸರತ್ತುಗಳನ್ನು ಮಾಡಿ, ಮೊದಲಿಗೆ ಮೂರು ಮತ್ತು ಎರಡನೇ ಅಂತಸ್ಥಿನ ಗೋಡೆಗಳನ್ನು ಕೆಡವಲಾಯಿತು. ನಂತರ ಕಟ್ಟಡಕ್ಕೆ ರೂಪ್ ಅಳವಡಿಸಿ ಹಿಟಾಚಿ ಯಂತ್ರದಿಂದ ಎಳೆದು ಎರಡು ಅಂತಸ್ಥುಗಳನ್ನು ತೆರವುಗೊಳಿಸಲಾಗಿದೆ.
ಇನ್ನು ಬಿಬಿಎಂಪಿ ಅಧಿಕಾರಿಗಳು ಹೇಳ್ತಿರೋ ಪ್ರಕಾರ ಸುಮಾರು 16 ವರ್ಷಗಳ ಈ ಹಿಂದೆ ಈ ಕಟ್ಟಡವನ್ನು ರತನ್ ಸಿಂಗ್ ಎಂಬಾತ ನಿರ್ಮಾಣ ಮಾಡಿದ್ದು, ನಂತರ ಹುಕುಮ್ ಸಿಂಗ್ ಎಂಬಾತನಿಗೆ 2016 ರಲ್ಲಿ ಮಾರಾಟ ಮಾಡಿದ್ದಾನೆ. ಕಟ್ಟಡಕ್ಕೆ ಸರಿಯಾದ ಫೌಂಡೇಷನ್ ಹಾಕಿಲ್ಲ. ಕೇವಲ ಮೂರು ಅಡಿಗಳಷ್ಟು ಮಾತ್ರ ಫೌಂಡೇಷನ್ ಹಾಕಿದ್ದಾರೆ ಇದರಿಂದ ಈ ಕಟ್ಟಡ ವಾಲಿಕೊಂಡಿದೆ ಎನ್ನಲಾಗಿದೆ.
ಇಷ್ಟೇ ಅಲ್ಲದೇ ಮನೆ ಮಾಲೀಕ ರತನ್ ಸಿಂಗ್ ಮನೆ ಕಟ್ಟುವಾಗ ಪಾಲಿಕೆಯಿಂದ ಯಾವುದೇ ಅನುಮತಿ ಪಡೆದಿಲ್ವಂತೆ. ಹಾಗೂ ನಿನ್ನೆ ಸೈಟ್ ನಲ್ಲಿ ಮನೆ ಕಟ್ಟಲು ಮುಂದಾಗಿದ್ದ ಕುಮರೇಶ್ ಕೂಡ ಪಾಲಿಕೆ ಯಿಂದ ಯಾವುದೇ ಅನುಮತಿ ಪಡೆದಿಲ್ವಂತೆ.
ಇಂದು ಬೆಳಗ್ಗೆ ಸ್ಥಳಕ್ಕೆ ಬಂದ ಬಿಬಿಎಂಪಿ ಅಧಿಕಾರಿಗಳು ಬಿಲ್ಡಿಂಗ್ ಡೆಮಾಲಿಷ್ ಮಾಡಲು ಮುಂದಾಗಿದ್ದಾರೆ. ಆದರೆ, ಈ ಕಟ್ಟಡದ ಸಮೀಪ ರಿಂಗ್ ರಸ್ತೆಗೆ ಸಂಪರ್ಕ ಕಲ್ಪಿಸುವ ರೈಲ್ವೆ ಅಂಡರ್ ಪಾಸ್ ಇದ್ದು, ಸಂಚಾರ ದಟ್ಟಣೆ ಜಾಸ್ತಿ ಇದ್ದ ಪರಿಣಾಮ ಡೆಮಾಲಿಷ್ ಮಾಡಲು ಸಾಧ್ಯವಾಗಲಿಲ್ಲ. ನಂತರ ಬಿಬಿಎಂಪಿ ಅಧಿಕಾರಿಗಳು ತೆರವು ಕಾರ್ಯಾಚರಣೆ ಮುಂದುವರೆಸಿದ್ದಾರೆ. ಇನ್ನು ಸಂಪೂರ್ಣವಾಗಿ ಕಟ್ಟಡವನ್ನು ಒಡೆಯಲು ಕನಿಷ್ಠ ಎರಡು ದಿನಗಳು ಬೇಕು ಎನ್ನಲಾಗ್ತಿದೆ.
ಇನ್ನು ಈ ರೀತಿ ಅನುಮತಿ ಪಡೆಯದೇ ಅಕ್ರಮವಾಗಿ ಮನೆ ನಿರ್ಮಾಣ ಮಾಡುವವರ ವಿರುದ್ದ ಕ್ರಮ ಕೈಗೊಳ್ಳುವಂತೆ ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ