ಬೆಂಗಳೂರು: ಸತತವಾಗಿ ಮೂರನೇ ದಿನವು ವಿಧಾನಸಭೆ ಕಲಾಪದಲ್ಲಿ ರಮೇಶ್ ಜಾರಕಿಹೊಳಿ ಸಿಡಿ ವಿಚಾರವಾಗಿ ಪ್ರತಿಪಕ್ಷ ಕಾಂಗ್ರೆಸ್ ತನ್ನ ಧರಣಿಯನ್ನು ಮುಂದುವರೆಸಿದವು. ವಿಧಾನಸಭಾ ಕಲಾಪದಲ್ಲಿ ಇಂದು ಪ್ರತಿಪಕ್ಷ ನಾಯಕರು ಗದ್ದಲದ ನಡುವೆಯೂ ಬಜೆಟ್ ಮಸೂದೆ ಅಂಗೀಕಾರಗೊಂಡಿದೆ.
ಇಂದು ಸದನ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಪುನಃ ಧರಣಿ ಆರಂಭಿಸಿದರು. ಈ ವೇಳೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಬಜೆಟ್ ಕುರಿತ ಚರ್ಚೆಗೆ ಉತ್ತರಿಸುವಂತೆ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಿದರು. ಆದರೆ ಮುಖ್ಯಮಂತ್ರಿಗಳು ಮಾತನಾಡಲು ಆರಂಭಿಸುತ್ತಿದ್ದಂತೆಯೇ ಕಾಂಗ್ರೆಸ್ ಸದಸ್ಯರು ಸರ್ಕಾರದ ವಿರುದ್ಧ ಜೋರಾಗಿ ಧಿಕ್ಕಾರ ಕೂಗಲು ಆರಂಭಿಸಿದರು.
ಕೊರೊನಾ ಸಂಕಷ್ಟದಿಂದ ತತ್ತರಿಸಿದ ಆರ್ಥಿಕ ಪರಿಸ್ಥಿತಿಯ ನಡುವೆಯೇ ತಾವು ಅಭಿವೃದ್ಧಿ ಪರ ಬಜೆಟ್ ಮಂಡಿಸಿರುವುದಾಗಿ ಸಿಎಂ ಸಮರ್ಥಿಸಿಕೊಂಡರು. ಸರ್ಕಾರ ಹೆಚ್ಚಿನ ಸಾಲ ಮಾಡಬೇಕಾಗಿ ಬಂದಿದೆ. ಆದರೆ ಅದು ವಿತ್ತೀಯ ನಿರ್ವಹಣೆ ಕಾಯ್ದೆ ವಿಧಿಸಿದ ಮಿತಿಯಲ್ಲಿದೆ ಎಂದು ಹೇಳಿದರು. ಕ್ರಮೇಣ ಆರ್ಥಿಕ ಬೆಳವಣಿಗೆ ಸಾಧಿತವಾಗುತ್ತಿದ್ದು ಮುಂದಿನ ದಿನಗಳಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಆದರೆ ಸದನದನ ಬಾವಿಯಲ್ಲಿದ್ದ ಕಾಂಗ್ರೆಸ್ ಸದಸ್ಯರು, ಜಾರಕಿಹೊಳಿ ಪ್ರಕರಣದ ಬಗ್ಗೆ ಹೈಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕು. ನ್ಯಾಯಾಲಯಕ್ಕೆ ಹೋದ ಆರು ಸಚಿವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಕೂಗತೊಡಗಿದರು.
ಇದನ್ನೂ ಓದಿ: ಸದನದಲ್ಲಿ ಮುಂದುವರೆದ ‘ಸಿಡಿ’ ವಾರ್.. ‘ಬ್ಲ್ಯೂ ಬಾಯ್ಸ್’ ಎಂದು ಧಿಕ್ಕಾರ ಕೂಗಿದ ವಿಪಕ್ಷ ಸದಸ್ಯರು
ಸಿಎಂ ಬಿಎಸ್ವೈ ಬಜೆಟ್ ಮೇಲಿನ ಚರ್ಚೆಗೆ ಲಿಖಿತ ಉತ್ತರ ಓದಿದ ಬಳಿಕ, 2020-21 ಸಾಲಿನ ಅನುದಾನ ಬೇಡಿಕೆಗಳನ್ನ ಸ್ಪೀಕರ್ ಮತಕ್ಕೆ ಹಾಕಿ, ಅನುಮೋದನೆ ಪಡೆದರು. ಬಳಿಕ ಸಿಎಂ ಮಂಡಿಸಿದ 2021ನೇ ಸಾಲಿನ ಧನವಿನಿಯೋಗ ಮಸೂದೆ ಪ್ರಸ್ತಾವವನ್ನು ಸ್ಪೀಕರ್ ಅಂಗೀಕರಿಸಿದರು. ಅಷ್ಟೇ ಅಲ್ಲದೆ, 2021 ರ ಆರ್ಥಿಕ ಹೊಣೆಗಾರಿಕೆ ತಿದ್ದುಪಡಿ ಮಸೂದೆಗೂ ಸಹ ಸದನವು ಅಂಗೀಕಾರ ನೀಡಿತು.
ಸಭಾಧ್ಯಕ್ಷರು ಸದನ ಕಲಾಪವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿದರು.