ಬೆಂಗಳೂರು: ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಕುರಿತಾಗಿ ಮಾಡಿರುವ ಟೀಕೆಯು ಅವರ ಕೀಳು ಮನಸ್ಥಿತಿಯನ್ನು ಬಯಲು ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಪಾಕಿಸ್ತಾನದ ವಿದೇಶಾಂಗ ಸಚಿವರಾಗಿ ಅವರ ಹೇಳಿಕೆಯು ಪಾಕಿಸ್ತಾನ ಸರ್ಕಾರದ ನೀಚ ಮನೋಸ್ಥಿತಿಯನ್ನು ಪ್ರತಿಬಿಂಬಿಸಿದೆ. ಇಡೀ ವಿಶ್ವದಲ್ಲಿಯೇ ಶಾಂತಿ ನೆಲೆಸುವಂತಾಗಲು ಭಾರತದ ಪ್ರಧಾನಿಯವರು ನೇತೃತ್ವ ವಹಿಸಬೇಕೆಂದು ವಿಶ್ವದ ಎಲ್ಲಾ ಪ್ರಮುಖ ದೇಶಗಳು ಕೋರುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವರಿಂದ ಇಂತಹ ಹೇಳಿಕೆಯು ನಾಯಿ ಬಾಲ ಎಂದಿಗೂ ಡೊಂಕು ಎಂಬಂತಹ ಪ್ರವೃತ್ತಿಯನ್ನು ಸಾಬೀತುಪಡಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ವಿಶ್ವದ ಅತ್ಯುಗ್ರ ಒಸಾಮ ಬಿನ್ ಲಾಡೆನ್ ಎಲ್ಲಿ ಅಡಗಿ ಕುಳಿತಿದ್ದ, ಮತ್ತು ಅವನನ್ನು ಪೋಷಿಸುತ್ತಿದ್ದವರು ಯಾರು ಹಾಗೂ ವಿಶ್ವದ ಬಹುತೇಕ ಉಗ್ರ ಸಂಘಟನೆಗಳಿಗೆ ತವರು ನೆಲೆ ಪಾಕಿಸ್ತಾನ ಎಂಬುದು ಇಡೀ ಜಗತ್ತಿಗೆ ತಿಳಿದಿದೆ. ಹೀಗಿರುವಾಗ ನರೇಂದ್ರ ಮೋದಿಯಂತಹ ವಿಶ್ವ ನಾಯಕರ ಬಗ್ಗೆ ಟೀಕೆ ಮಾಡಿದರೆ, ಜಗತ್ತಿನ ಕಣ್ಣಿನಲ್ಲಿ ಅವರು ದೊಡ್ಡ ವ್ಯಕ್ತಿಯಾಗುತ್ತೇನೆಂದು ಭಾವಿಸಿರುವಂತೆ ಕಾಣುತ್ತಿದೆ ಎಂದಿದ್ದಾರೆ.
2018ರ ಫೆಬ್ರವರಿ 18ರಂದು ಅಮೆರಿಕದ ವಾಷಿಂಗ್ಟನ್ನಲ್ಲಿ 'ಪಾಕಿಸ್ತಾನದಲ್ಲಿ ಭಯೋತ್ಪಾದನೆ ಹೆಚ್ಚಾಗುತ್ತಿದೆ' ಎಂದು ಹಾಗೂ ದಿನಾಂಕ 2019ರ ಮಾರ್ಚ್ 7ರಂದು 'ಪಾಕಿಸ್ತಾನದ ಮೂವರು ಸಚಿವರು ಉಗ್ರ ಸಂಘಟನೆಗಳ ಜೊತೆಗೆ ಸಂಬಂಧ ಹೊಂದಿದ್ದಾರೆ' ಎಂದು ಹೇಳಿಕೆ ನೀಡಿರುವುದನ್ನು ಮರೆತಂತೆ ಕಾಣುತ್ತಿದೆ ಎಂದು ಟೀಕಿಸಿದ್ದಾರೆ.
ಮೋದಿ ಕುರಿತಾದ ಕೀಳುಮಟ್ಟದ ಇಬ್ಬಗೆತನದ ಅವರ ಹೇಳಿಕೆಯು ಭಾರತಕ್ಕೆ ಮಾಡಿದ ಅವಮಾನ. ದೇಶಪ್ರೇಮಿ ಭಾರತೀಯರು ಇದನ್ನು ಖಂಡಿಸಿ ಇದರ ವಿರುದ್ಧ ಹೋರಾಟ ಮಾಡಬೇಕಿದೆ ಎಂದು ಯಡಿಯೂರಪ್ಪ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಮೋದಿ ಬಗ್ಗೆ ವಿವಾದಿತ ಹೇಳಿಕೆ ಕೊಟ್ಟ ಬಿಲಾವಲ್ ಭುಟ್ಟೋ ಜನ್ಮ ಜಾಲಾಡಿದ ಭಾರತ