ಬೆಂಗಳೂರು: ರಾಜ್ಯದಲ್ಲಿ ಆಡಳಿತರೂಢವಾಗಿರುವ ನಮ್ಮ ಪಕ್ಷವೇ ಮತ್ತೆ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್‍ನವರು ಅಧಿಕಾರಕ್ಕೇರುವ ಕುರಿತು ತಿರುಕನ ಕನಸು ಕಾಣುತ್ತಿದ್ದಾರೆ. ನಾಯಕತ್ವ ಇಲ್ಲದೆ ಪರದಾಡುವ ಕಾಂಗ್ರೆಸ್ಸಿಗೆ ಭವಿಷ್ಯ ಇಲ್ಲ ಎಂದು ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದರು.
ನಗರದ ದಿ ಕ್ಯಾಪಿಟಲ್ ಹೋಟೆಲ್‍ನಲ್ಲಿ ಇಂದು ಮಂಡಲ ಪ್ರಭಾರಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ಜನರ ಒಲವು ಬಿಜೆಪಿ ಕಡೆಗಿದೆ. ಬಿಜೆಪಿ ಮತ್ತೆ ಅಧಿಕಾರ ಪಡೆಯುವುದು ಖಚಿತ. ನರೇಂದ್ರ ಮೋದಿ ಅವರ ಶ್ರೇಷ್ಠ ನಾಯಕತ್ವ ನಮ್ಮ ಜೊತೆಗಿದೆ. ಯಂಕ, ನಾಣಿ ನಾಯಕತ್ವವು ಜೊತೆಗಿರುವ ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯ ಇಲ್ಲ. ಅವರು ತಿರುಕನ ಕನಸು ಕಾಣುತ್ತಿದ್ದಾರೆ ಅಷ್ಟೆ. ವಿಶ್ವಾಸಾರ್ಹ ಮತ್ತು ಕ್ರಿಯಾಶೀಲ ಕಾರ್ಯಕರ್ತರ ದೊಡ್ಡ ಪಡೆ ನಮ್ಮ ಪಕ್ಷದ ಜೊತೆ ಇದೆ. ನಮ್ಮದು ಕಾರ್ಯಕರ್ತರ ಪಕ್ಷ ಎಂದರು.
ಮೋದಿ ಸರ್ಕಾರದ 8-9 ವರ್ಷಗಳ ಸಾಧನೆ, ಜನಪರ ಆಡಳಿತವನ್ನು ಜನರಿಗೆ ತಿಳಿಸಬೇಕು. ಮೋದಿ ನಮ್ಮ ಪಕ್ಷದ ಪ್ರಮುಖ ಆಸ್ತಿ, ಜನ್‍ಧನ್, ಆಯುಷ್ಮಾನ್, ಶೌಚಾಲಯ ನಿರ್ಮಾಣ, ಮನೆಮನೆಗೆ ನಲ್ಲಿ ನೀರು ಸೇರಿ ಹಲವು ಯೋಜನೆ ಜಾರಿಯನ್ನು ಉಲ್ಲೇಖಿಸಿದರು. ಪ್ರತಿ ಮನೆಯಲ್ಲೂ ಒಂದಿಲ್ಲೊಂದು ಫಲಾನುಭವಿ ಇದ್ದಾರೆ. ಅಂಥ ಫಲಾನುಭವಿಗಳನ್ನು ಗುರುತಿಸಿ ತಲುಪುವ ಕಾರ್ಯ ನಮ್ಮಿಂದ ಆಗಬೇಕೆಂದು ಕಿವಿಮಾತು ಹೇಳಿದರು. ಪಕ್ಷದ ಬೆನ್ನೆಲುಬಿನಂತೆ ಕೆಲಸ ಮಾಡಬೇಕೆಂದು ವಿನಂತಿಸಿದರು. ಸೀಟ್ ಹಂಚಿಕೆ ಬಳಿಕ ಸಣ್ಣಪುಟ್ಟ ಅಸಮಾಧಾನ ಇದ್ದರೆ ಅದನ್ನು ಶಮನಗೊಳಿಸಬೇಕೆಂದು ಎಂದು ಸಲಹೆ ನೀಡಿದರು.
ಪಕ್ಷದ ಬೆನ್ನೆಲುಬಾಗಿ ನಾವು ಎಲ್ಲರು ಕೆಲಸ ಮಾಡಬೇಕು. ಸಣ್ಣಪುಟ್ಟ ಅಸಮಾಧಾನ ಸ್ವಾಭಾವಿಕ. ತಾವು ತಾಲ್ಲೂಕು ಮಟ್ಟದಲ್ಲಿ ಅಸಮಧಾನ ಶಮನ ಮಾಡಬೇಕು. ಟಿಕೆಟ್ ಆಯ್ಕೆ ಮಾಡುವುದು ಕೇಂದ್ರ ಚುನಾವಣಾ ಸಮಿತಿ. ಖಂಡಿತವಾಗಿ ನಮ್ಮ ಪಕ್ಷ ಮತ್ತೆ ಅಧಿಕಾರಕ್ಕೆ ಬರುತ್ತದೆ. ನಾಯಕತ್ವ ಇಲ್ಲದೆ ಪರದಾಡುವ ಪಕ್ಷ ಕಾಂಗ್ರೆಸ್ ಪಾರ್ಟಿ, ನರೇಂದ್ರ ಮೋದಿ ನಾಯಕತ್ವದ ಮುಂದೆ, ನಿಮ್ಮ ರಾಹುಲ್ ಗಾಂಧಿ ಕರೆಸಿ ನೀವು ಮತ ಕೇಳುತ್ತೀರಾ ಎಂದು ಪ್ರಶ್ನಿಸಿದರು.
ಕೈ ನಾಯಕರು ಹುಚ್ಚರು, ತಲೆ ತಿರುಕರು: ಕಾಂಗ್ರೆಸ್ ನಾಯಕರು ಹುಚ್ಚರು. ತಲೆ ತಿರುಕರು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಲೆ ತಿರುಕರು ಹೀಗೆ ಮಾತಾಡೋದು. ತಲೆ ಸರಿ ಇದ್ದವರು ಯಾರು ಕೂಡ ಈ ರೀತಿ ಮಾತಾಡಲ್ಲ. ಅಧಿಕಾರದ ಭ್ರಮೆಯಿಂದ ನಾವು ಅಧಿಕಾರಕ್ಕೆ ಬಂದೇ ಬಿಟ್ಟಿದ್ದೇವೆಂದು ಹೀಗೆ ಹುಚ್ಚುಚ್ಚಾಗಿ ಮಾತನಾಡುತ್ತಿದ್ದಾರೆ. ಇವರ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಗುತ್ತಿಗೆ ವಿಚಾರ ಕುರಿತು ಸದನದಲ್ಲಿ ಅವರು ಮಾತಾಡಲಿ. ಅದಕ್ಕೆ ನಾವು ತಕ್ಕ ಉತ್ತರವನ್ನು ಕೊಡುತ್ತೇವೆ ಎಂದು ಯಡಿಯೂರಪ್ಪ ಗುಡುಗಿದರು.
ನಾನು ಅಧಿವೇಶನದಲ್ಲೇ ಇರುವುದಿಲ್ಲ ಎಂದು ಸಿದ್ದರಾಮಯ್ಯನನವರು ಹೇಳುತ್ತಾರೆ. ಒಬ್ಬ ವಿರೋಧ ಪಕ್ಷದ ನಾಯಕನಾಗಿ ಈ ರೀತಿ ಹೇಳೋದು ಅವರಿಗೆ ಗೌರವ ತರುತ್ತದೆಯಾ..? ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅವರು ಆ ರೀತಿ ನಡೆದುಕೊಳ್ಳಬಹುದಾ..? ಅವರಿಗೆ ಚುನಾವಣೆಯೇ ಮುಖ್ಯವಾಯ್ತಾ? ಈ ರೀತಿಯ ಅನೇಕ ಆರೋಪಗಳ ಮೂಲಕ ಹುಚ್ಚುಚ್ಚಾಗಿ ಆಡೋದು ಬಹಳ ಜಾಸ್ತಿಯಾಗಿದೆ. ಶಿವಕುಮಾರ್ ತಮ್ಮ ಜವಬ್ದಾರಿ ಅರಿತು ಮಾತಾಡಬೇಕಿತ್ತು. ಆದರೆ ಅವರು ಈ ಮಟ್ಟಕ್ಕೆ ಇಳಿದಿರೋದು ನನಗೆ ತುಂಬಾ ನೋವು ತಂದಿದೆ. ಇನ್ನಾದರೂ ಅವರು ಜವಾಬ್ದಾರಿಯುತವಾಗಿ ಮಾತಾಡಲಿ ಎಂದು ಬಿಎಸ್ವೈ ತಿರುಗೇಟು ನೀಡಿದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಅಮೆರಿಕ ವೀಸಾ ಕಚೇರಿ ತೆರೆಯುವ ಅಗತ್ಯವಿದೆ: ಸಿಎಂ ಬೊಮ್ಮಾಯಿ