ಬೆಂಗಳೂರು: ಸಂಪುಟ ವಿಸ್ತರಣೆ ಹೈಡ್ರಾಮಾಗೆ ಬ್ರೇಕ್ ಹಾಕಲು ನಿರ್ಧರಿಸಿದ್ದು, ಜನವರಿ 29 ರಂದು ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಲವು ಹೊಂದಿದ್ದಾರೆ. ಇದಕ್ಕೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೂಡ ಸಿಗಲಿದೆ ಎನ್ನುವ ಮಾತುಗಳು ಕೇಳಿಬಂದಿವೆ.
ವಸಂತ ಪಂಚಮಿ ದಿನವಾದ ಜನವರಿ 29 ಉತ್ತಮ ದಿನವಾಗಿದ್ದು, ಅಂದು ಬೆಳಗ್ಗೆ 10.30 ರ ನಂತರ ರಾಜಯೋಗ ಆರಂಭಗೊಳ್ಳಲಿದೆ. ಹಾಗಾಗಿ ಆ ಸಮಯದಲ್ಲೇ ಸಂಪುಟ ವಿಸ್ತರಣೆ ಮಾಡಿದರೆ ಒಳಿತಾಗಲಿದೆ. ಸಂಪುಟ ಸಂಕಷ್ಟ ಕರಗಲಿದೆ ಎನ್ನುವ ಜ್ಯೋತಿಷಿಗಳ ಸಲಹೆ ಪಡೆದು ಸಿಎಂ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಇನ್ನು ಅಮಿತ್ ಶಾ ರಾಜ್ಯ ಭೇಟಿ ವೇಳೆಯಲ್ಲಿಯೇ ಸಚಿವರ ಪಟ್ಟಿ ಅಂತಿಮಗೊಂಡಿದೆ ಕೇವಲ ದಿನಾಂಕ ನಿಗದಿಯಷ್ಟೇ ಬಾಕಿ ಇದೆ ಎಂದು ಸಿಎಂ ಆಪ್ತ ಮೂಲಗಳಿಂದ ತಿಳಿದು ಬಂದಿದೆ.
ವಿದೇಶ ಪ್ರವಾಸ ಮುಗಿಸಿ ಸಂಪುಟ ವಿಸ್ತರಣೆ ಮಾಡಿ ಎಂದು ಅಮಿತ್ ಶಾ ನೀಡಿದ್ದ ನಿರ್ದೇಶನದಂತೆ ಈಗ ಸಂಪುಟ ವಿಸ್ತರಣೆ ಮಾಡಲು ಸಿಎಂ ಮುಂದಾಗಿದ್ದು, ಈ ಸಂಬಂಧ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಜೊತೆ ಸಿಎಂ ಮಾತುಕತೆ ನಡೆಸಿದ್ದಾರೆ. ಸಿಎಂ ಸಂದೇಶ ಹೊತ್ತು ದೆಹಲಿಗೆ ತೆರಳಿರುವ ಸಂತೋಷ್ ಹೈಕಮಾಂಡ್ ಜೊತೆ ಮಾತುಕತೆ ನಡೆಸಲಿದ್ದಾರೆ.
ಸದ್ಯ ಸಂಪುಟದಲ್ಲಿ 17 ಸಚಿವರಿದ್ದು, ಇನ್ನು ಅರ್ಧದಷ್ಟು ಸ್ಥಾನ ಖಾಲಿ ಉಳಿದಿವೆ. ಇದರಲ್ಲಿ ಎಷ್ಟು ಸ್ಥಾನ ಭರ್ತಿ ಮಾಡಲಿದ್ದಾರೆ ಎನ್ನುವುದು ಇನ್ನೂ ಬಹಿರಂಗವಾಗಿಲ್ಲ. ಒಟ್ಟಿನಲ್ಲಿ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ್ದಲ್ಲಿ ಜನವರಿ 29 ಕ್ಕೆ ಸಂಪುಟ ವಿಸ್ತರಣೆ ಖಚಿತವಾಗಿದೆ.