ಬೆಂಗಳೂರು: ಪಬ್ಜಿ ಆಡುವುದಕ್ಕಾಗಿ ಅಪ್ರಾಪ್ತ ವಯಸ್ಸಿನ ಬಾಲಕನೋರ್ವ ಹುಸಿ ಬಾಂಬ್ ಕರೆ ಮಾಡಿ ಆತಂಕ ಸೃಷ್ಟಿಸಿದ ಘಟನೆ ಮಾರ್ಚ್ 30ರಂದು ಯಲಹಂಕ ರೈಲ್ವೆ ನಿಲ್ದಾಣದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬಾಲಕ ಹೇಳಿದ್ದ ಒಂದು ಸುಳ್ಳಿನಿಂದ ಪೊಲೀಸರು ಸುಮಾರು 90 ನಿಮಿಷಗಳ ಕಾಲ ರೈಲನ್ನು ತಡಕಾಡುವಂತಾಗಿತ್ತು.
ಪಬ್ಜಿ ಗೇಮ್ ಗೀಳಿಗೊಳಗಾಗಿರುವ ಫ್ರೆಂಡ್ 2 ಗಂಟೆಗೆ ಯಲಹಂಕದಿಂದ ಕಾಚಿಗುಡ ಎಕ್ಸ್‌ಪ್ರೆಸ್ ರೈಲಿನಲ್ಲಿ ತೆರಳಬೇಕಿತ್ತು. ಸ್ನೇಹಿತ ಹೋದರೆ ತನಗೆ ಪಾರ್ಟ್ನರ್ ಇರಲ್ಲವೆಂದು ಅಂದುಕೊಂಡ ಬಾಲಕ ರೈಲ್ವೆ ಸಹಾಯವಾಣಿಗೆ ಕರೆ ಮಾಡಿ, ಕಾಚಿಗುಡ ಎಕ್ಸ್‌ಪ್ರೆಸ್‌ನಲ್ಲಿ ಬಾಂಬ್ ಇದೆ ಎಂದು ಹೇಳಿದ್ದಾನೆ. ಈ ಹಿನ್ನೆಲೆಯಲ್ಲಿ ತಕ್ಷಣ ಪ್ರಯಾಣಿಕರನ್ನ ಇಳಿಸಿದ ಪೊಲೀಸರು, 90 ನಿಮಿಷಗಳ ಕಾಲ ಪರಿಶೀಲಿಸಿದ್ದಾರೆ.
ಬಳಿಕ ಸುಳ್ಳೆಂದು ತಿಳಿದ ಮೇಲೆ ಹುಸಿ ಕರೆಯ ಮೂಲ ಹುಡುಕಾಡಿದ ಪೊಲೀಸರಿಗೆ ಅಪ್ರಾಪ್ತ ಬಾಲಕ ಹೇಳಿದ ಸುಳ್ಳಿನ ಅಸಲಿ ಕಥೆ ಗೊತ್ತಾಗಿದೆ. ಕರೆ ಮಾಡಿದವ ಅಪ್ರಾಪ್ತನಾಗಿದ್ದರಿಂದ ಪೊಲೀಸರು ಯಾವುದೇ ಪ್ರಕರಣ ದಾಖಲಿಸದೇ, ಆತನಿಗೆ ಬುದ್ಧಿವಾದ ಹೇಳಿ ಸುಮ್ಮನಾಗಿದ್ದಾರೆ.
ಇದನ್ನೂ ಓದಿ: ಜೀವನವು ಮತ್ತೊಮ್ಮೆ ಸುಂದರವಾಗಿದೆ.. ಕೇಶಮುಂಡನದ ಫೋಟೋ ಶೇರ್ ಮಾಡಿದ ನಟಿ !