ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸಾಂಕ್ರಾಮಿಕ ಹರಡುವ ಹಿನ್ನೆಲೆಯಲ್ಲಿ ಜನಸಂದಣಿ ಸೇರುವ ಸ್ಥಳಗಳಿಗೆ ಸರ್ಕಾರ ಬ್ರೇಕ್ ಹಾಕಿತ್ತು. ಹಾಗಾಗಿ ಬರೋಬ್ಬರಿ ಒಂದೂವರೆ ತಿಂಗಳುಗಳ ಕಾಲ ಎಲ್ಲೂ ಅಲ್ಲಾಡದೆ ಬಸ್ಗಳು ಡಿಪೋದಲ್ಲಿಯೇ ಬಂಧಿಯಾಗಿದ್ದವು.
ಇದೀಗ ಕೊರೊನಾ ಸೋಂಕಿತರ ಸಂಖ್ಯೆ ಕ್ರಮೇಣ ಇಳಿಕೆಯಾದ ಹಿನ್ನೆಲೆ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅನ್ಲಾಕ್ ಘೋಷಣೆ ಮಾಡಿದೆ. ಕಳೆದ ಮೂರು ದಿನಗಳಿಂದ ಬಿಎಂಟಿಸಿ ಬಸ್ಗಳು ಸಂಚಾರ ನಡೆಸಿದ್ದು, ದಿನಕ್ಕೆ 5 ಕೋಟಿ ಆದಾಯ ಗಳಿಸುತ್ತಿದ್ದ ನಿಗಮಕ್ಕೆ ಎರಡು ದಿನದಲ್ಲಿ ಕೇವಲ 1.35 ಕೋಟಿ ರೂ. ಆದಾಯ ಸಂಗ್ರಹವಾಗಿದೆ.
ಜೂನ್ 21 ರಂದು 4.74 ಲಕ್ಷ ಪ್ರಯಾಣಿಕರು ಪ್ರಯಾಣ ಬೆಳೆಸಿದ್ದು, 45 ಲಕ್ಷ ಆದಾಯ ಸಂಗ್ರಹವಾದರೆ ಜೂನ್ 22 ರಂದು 8.2 ಲಕ್ಷ ಪ್ರಯಾಣಿಕರು ಪ್ರಯಾಣ ಬೆಳೆಸಿದ್ದು 90 ಲಕ್ಷ ಆದಾಯ ಗಳಿಸಿದೆ. ಒಟ್ಟಾರೆ ಎರಡು ದಿನದಲ್ಲಿ ಕೇವಲ 13,500,000 ಆದಾಯ ಬಂದಿದೆ.
ಇದನ್ನೂ ಓದಿ: Unlock Day-2: ಪ್ರಯಾಣಿಕರಿಲ್ಲದೆ ಬಿಎಂಟಿಸಿ ಬಸ್ಗಳು ಖಾಲಿ ಖಾಲಿ
ಈ ಮೊದಲು ದಿನನಿತ್ಯ 40 - 45 ಲಕ್ಷ ಪ್ರಯಾಣಿಕರು ಬಿಎಂಟಿಸಿ ಬಸ್ನಲ್ಲಿ ಓಡಾಡುತ್ತಿದ್ದರು. ಆದರೆ, ಕೊರೊನಾ ಕಾರಣಕ್ಕೆ ಸಾರ್ವಜನಿಕ ಸೇವೆಯಿಂದ ಹಲವರು ದೂರವೇ ಉಳಿದಿದ್ದಾರೆ. ಇನ್ನು ಸಾರ್ವಜನಿಕರ ದೃಷ್ಟಿಯಿಂದ ಹೆಚ್ಚುವರಿ ಬಸ್ಗಳನ್ನ ಬಿಡುತ್ತಿದ್ದು ಹಂತ ಹಂತವಾಗಿ ಪ್ರಯಾಣಿಕರು ಬರುವ ನಿರೀಕ್ಷೆ ಇದೆ.
ಕೋಟಿ ಕೋಟಿ ಆದಾಯ ಖೋತಾ..
ನಿತ್ಯ 7 ಕೋಟಿ ಆದಾಯ ಗಳಿಕೆ ಮಾಡುತ್ತಿದ್ದ ಕೆಎಸ್ಆರ್ ಟಿಸಿ ಬಸ್ಗಳು ಈಗ ಅನ್ ಲಾಕ್ ಬಳಿಕ ರಸ್ತೆಗಿಳಿದಿವೆ.ಆದರೆ, ಕೋಟಿ ಕೋಟಿ ಆದಾಯ ಖೋತವಾಗಿದೆ. ಕಳೆದ ಎರಡು ದಿನಗಳಿಂದ ಕೆಎಸ್ಆರ್ ಟಿಸಿ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಕುಸಿತ ಕಂಡಿದೆ. ಕೊರೊನಾ ಹಿನ್ನೆಲೆ ಬಸ್ಸಿನಲ್ಲಿ ಶೇ 50% ಪ್ರಯಾಣಿಕರಿಗೆ ಅವಕಾಶ ನೀಡಿದ್ದು, ಹೀಗಾಗಿ ಜೂನ್21 ರಂದು 1.10 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದು 54.06 ಲಕ್ಷ ಆದಾಯ, ಹಾಗೂ 22 ರಂದು 2.25 ಲಕ್ಷ ಪ್ರಯಾಣಿಕರು 1.27 ಕೋಟಿ ಆದಾಯ ಸಂಗ್ರಹವಾಗಿದೆ.