ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮಹಾಮಾರಿ ಜೊತೆಗೆ ಬ್ಲ್ಯಾಕ್ ಫಂಗಸ್ ಬಿಟ್ಟು ಬಿಡದೇ ಕಾಡ್ತಿದೆ. (ಮ್ಯುಕೋರ್ಮೈಕೋಸಿಸ್) ಈ ತನಕ ಫಂಗಸ್ 2,844 ಜನರಲ್ಲಿ ಕಂಡು ಬಂದಿದ್ದು, ದುರದೃಷ್ಟವಶಾತ್ 222 ಮಂದಿ ಮೃತಪಟ್ಟಿದ್ದಾರೆ. 629 ಮಂದಿಯ ರಿಪೋರ್ಟ್ ಲ್ಯಾಬ್ ನಲ್ಲಿದ್ದು, ವರದಿ ಬರಬೇಕಿದೆ. ಈ ನಡುವೆ ಬ್ಲ್ಯಾಕ್ ಫಂಗಸ್ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಸೋಂಕಿತರಿಂದ ಡಿಸ್ಚಾರ್ಜ್ ಬೇಡಿಕೆಯಿಟ್ಟವರ ಸಂಖ್ಯೆಯೂ ಹೆಚ್ಚಾಗಿದೆ.
ಡಿಸ್ಚಾರ್ಜ್ ಅಗೈನೆಸ್ಟ್ ಮೆಡಿಕಲ್ ಅಡ್ವೈಸ್ ( DAMA) ನಲ್ಲಿ ಸುಮಾರು 117 ಸೋಂಕಿತರು ಚಿಕಿತ್ಸೆ ನಡುವೆಯೂ ಡಿಸ್ಚಾರ್ಜ್ ಆಗಿದ್ದಾರೆ. ವೈದ್ಯರ ವಿರೋಧದ ನಡುವೆ ಬಲವಂತವಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗ್ತಿದ್ದಾರೆ. ಈ ತನಕ ಬ್ಲ್ಯಾಕ್ ಫಂಗಸ್ನಿಂದ 181 ಮಂದಿ ಅಷ್ಟೇ ಗುಣಮುಖರಾಗಿದ್ದಾರೆ.
ಹಲವು ಜಿಲ್ಲೆಗಳಲ್ಲಿ ನೂರಾರ ಗಡಿದಾಟಿದ ಬ್ಲ್ಯಾಕ್ ಫಂಗಸ್
ರಾಜ್ಯಾದ್ಯಂತ ಬ್ಲ್ಯಾಕ್ ಫಂಗಸ್ ಹರಡಿದ್ದು ಹಲವು ಜಿಲ್ಲೆಗಳಲ್ಲಿ ನೂರರ ಗಡಿ ದಾಟಿದೆ. ಬೆಂಗಳೂರು ನಗರ ಮೊದಲ ಸ್ಥಾನದಲ್ಲಿದ್ದು, ಸಾವಿರದ ಗಡಿದಾಟುತ್ತಿದೆ. ಬಾಗಲಕೋಟೆ, ಬಳ್ಳಾರಿ, ಬೆಳಗಾವಿ, ಚಿತ್ರದುರ್ಗ, ಧಾರವಾಡ, ಕಲಬುರಗಿ, ವಿಜಯಪುರ ಜಿಲ್ಲೆಯಲ್ಲಿ ನೂರರ ಗಡಿದಾಟಿದೆ. ಉಳಿದಂತೆ ಐದು ಜಿಲ್ಲೆಗಳು ನೂರರ ಸಮೀಪಿಸುತ್ತಿದ್ದರೆ, ಇನ್ನಿತರ ಜಿಲ್ಲೆಗಳಲ್ಲಿ ಪ್ರಕರಣ ಎರಡಂಕಿಯಲ್ಲಿದೆ.
ಕಪ್ಪು ಮಾರಿಗೆ ಕಣ್ಣು ಕಳೆದುಕೊಂಡ 27 ಸೋಂಕಿತರು
ನಗರದ ಮಿಂಟೋ ಆಸ್ಪತ್ರೆಯೊಂದರಲ್ಲೇ 27 ಮಂದಿ ಬ್ಲ್ಯಾಕ್ ಫಂಗಸ್ನಿಂದಾಗಿ ದೃಷ್ಟಿ ಕಳೆದುಕೊಂಡಿದ್ದಾರೆ. 15 ಜನರಿಗೆ ಫಂಗಸ್ ಕಣ್ಣಿಗೆ ವ್ಯಾಪಿಸಿದ್ದು ಕಣ್ಣು ಗುಡ್ಡೆ ತೆಗೆಯಬೇಕಾಗಿದೆ. 190 ಮಂದಿ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿಂದು ಹೊಸದಾಗಿ 4 ಮಂದಿಗೆ, ಬೌರಿಂಗ್ ಆಸ್ಪತ್ರೆಯಲ್ಲಿ 8 ಮಂದಿಗೆ ಫಂಗಸ್ ಕಾಣಿಸಿಕೊಂಡಿದೆ. ವಿಕ್ಟೋರಿಯಾದಲ್ಲಿ 195, ಬೌರಿಂಗ್ನಲ್ಲಿ 212 ಜನರಿಗೆ ಸೋಂಕು ವಕ್ಕರಿಸಿದೆ. ಒಟ್ಟಾರೆ ಬೆಂಗಳೂರಿನಲ್ಲಿ 959 ಮಂದಿಗೆ ಸೋಂಕು ತಗುಲಿದ್ದು, 72 ಸೋಂಕಿತರು ಮೃತರಾಗಿದ್ದಾರೆ.