ಬೆಂಗಳೂರು: ಇಡೀ ದಿನ ಶಾಸಕರ ಜೊತೆ ಸಭೆ ನಡೆಸಿ ಅಹವಾಲು ಆಲಿಸಿದ್ದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಭೇಟಿ ಮಾಡಿ ಕುತೂಹಲ ಮೂಡಿಸಿದ್ದಾರೆ. ನಾಳೆ ರಾಜ್ಯ ಪದಾಧಿಕಾರಿಗಳ ಸಭೆ ನಿಗದಿಯಾಗಿದ್ದರೂ ಒಂದು ದಿನ ಮೊದಲೇ ಸಿಎಂ ಪುತ್ರ ಬಿ.ವೈ ವಿಜಯೇಂದ್ರ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದರು.
ಕುಮಾರಕೃಪಾ ಅತಿಥಿಗೃಹಕ್ಕೆ ತೆರಳಿದ ವಿಜಯೇಂದ್ರ ಅರುಣ್ ಸಿಂಗ್ರನ್ನು ಭೇಟಿ ಮಾಡಿ 40 ನಿಮಿಷಗಳ ಕಾಲ ಸುದೀರ್ಘ ಮಾತುಕತೆ ನಡೆಸಿದರು. ಆಡಳಿತದಲ್ಲಿ ಸಿಎಂ ಕುಟುಂಬದ ಹಸ್ತಕ್ಷೇಪವಿದೆ ಎನ್ನುವುದು ವಿರೋಧಿ ಬಣದ ಸದಸ್ಯರ ಆರೋಪವಾಗಿದ್ದು, ನೇರವಾಗಿ ವಿಜಯೇಂದ್ರ ಹೆಸರನ್ನು ಉಲ್ಲೇಖಿಸಿಯೇ ಆರೋಪ ಮಾಡಿದ್ದಾರೆ. ಹೀಗಿದ್ದರೂ ವಿಜಯೇಂದ್ರ ಅವರ ಜೊತೆ ಅರುಣ್ ಸಿಂಗ್ ಮಾತುಕತೆ ನಡೆಸಿದ್ದು ಕುತೂಹಲಕ್ಕೆ ಕಾರಣವಾಗಿದೆ.
ಇಂದು ಇಡೀ ದಿನ ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿಯೇ ಇದ್ದ ವಿಜಯೇಂದ್ರ, ಅರುಣ್ ಸಿಂಗ್ ಅವರಿಗೆ ವಿರೋಧಿ ಬಣ ನೀಡುತ್ತಿದ್ದ ದೂರು, ಆರೋಪ, ಟೆಲಿಫೋನ್ ಕದ್ದಾಲಿಕೆ ಕುರಿತು ಮಾತುಕತೆ ನಡೆಸಿದ್ದರು. ನಂತರ ವಿಜಯೇಂದ್ರ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿದ್ದಾರೆ. ಸಿಎಂ ಸೂಚನೆ ಮೇರೆಗೆ ವಿಜಯೇಂದ್ರ ಈ ಭೇಟಿ ಮಾಡಿದ್ದು, ಕೆಲವೊಂದು ವಿವರಣೆ ನೀಡಿದ್ದಾರೆ ಎನ್ನಲಾಗಿದೆ.