ಬೆಂಗಳೂರು: "ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ 48 ಗಂಟೆಗಳ ಗಡುವು ನೀಡುತ್ತಿದ್ದು, ಅಷ್ಟರಲ್ಲಿ ಶ್ರೀಕಾಂತ್ ಪೂಜಾರಿಯನ್ನು ಬಿಡುಗಡೆಗೊಳಿಸದೇ ಇದ್ದಲ್ಲಿ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಬಿಜೆಪಿ ಯುವ ಮೋರ್ಚಾ ಮುತ್ತಿಗೆ ಹಾಕಲಿದೆ. ಶ್ರೀಕಾಂತ್ ಪೂಜಾರಿಗೆ ನ್ಯಾಯ ಸಿಗುವವರೆಗೂ ಹೋರಾಟ ನಡೆಸಲಾಗುತ್ತದೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಕರಸೇವಕ ಶ್ರೀಕಾಂತ್ ಪೂಜಾರಿ ಬಂಧನ ಖಂಡಿಸಿ ನಗರದ ಫ್ರೀಡಂ ಪಾರ್ಕ್ನಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಿತು. ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ವಿಜಯೇಂದ್ರ, "ಕಳೆದ ಕೆಲ ದಿನಗಳಿಂದ ರಾಜ್ಯ ಮಾತ್ರವಲ್ಲ ಇಡೀ ದೇಶದಲ್ಲಿ ಉತ್ಸವದ ವಾತಾವರಣ ಇದೆ. ನೂರಾರು ವರ್ಷದಿಂದ ಹಿಂದೂಗಳ ಆರಾಧ್ಯದೈವ ರಾಮಮಂದಿರ ನಿರ್ಮಾಣಕ್ಕೆ ಹೋರಾಟ ನಡೆದು, ಹಿಂದೂಗಳ ತಪಸ್ಸಿನಿಂದ ಇದೀಗ ಮೋದಿ ನೇತೃತ್ವದಲ್ಲಿ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಿದೆ. ಒಂದು ಕಡೆ ರಾಮಭಕ್ತರು ಪವಿತ್ರ ಮಂತ್ರಾಕ್ಷತೆ ಹಂಚುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯದಲ್ಲಿರುವ ಹಿಂದೂ ವಿರೋಧಿ, ರಾಮ ವಿರೋಧಿ ಕಾಂಗ್ರೆಸ್ ಸರ್ಕಾರ ಮಂತ್ರಾಕ್ಷತೆ ಹಂಚುವುದಕ್ಕೆ ತಡೆ ಒಡ್ಡುತ್ತಿದೆ" ಎಂದು ದೂರಿದರು.
"ಮಾಜಿ ಸಚಿವರು ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಮಾಜಿ ಸಚಿವ ಆಂಜನೇಯ ಹೇಳಿಕೆ ನೋಡಿದರೆ ಅವರನ್ನು ದೇವರೇ ಕಾಪಾಡಬೇಕು. ಇದರ ನಡುವೆ ಈ ಸರ್ಕಾರ ಕರಸೇವಕ ಶ್ರೀಕಾಂತ್ ಪೂಜಾರಿಯನ್ನು ಬಂಧಿಸುವ ದುಸ್ಸಾಹಸಕ್ಕೆ ಕೈಹಾಕಿದೆ. ದ್ವೇಷದ ರಾಜಕಾರಣ ಮಾಡುತ್ತಿದೆ, ಹಿಂದೂಗಳ ಹಕ್ಕು ತುಳಿಯುವ ಕೆಲಸ ಮಾಡುತ್ತಿದೆ ಇವರಿಗೆ ತಕ್ಕ ಪಾಠ ಕಲಿಸಬೇಕಿದೆ" ಎಂದರು.
"ಹಿಂದೆಯೂ ಸಿದ್ದರಾಮಯ್ಯ ಸರ್ಕಾರ ಪಿಎಫ್ಐ ಕಾರ್ಯಕರ್ತರ ಮೇಲಿನ ಕೇಸ್ ವಾಪಸ್ ಪಡೆದರು. ಈಗ ಡಿಜೆ ಕೆಜೆ ಹಳ್ಳಿ ಗಲಭೆ ಕೇಸ್ ವಾಪಸ್ ಪಡೆದಿದ್ದಾರೆ. ಕನ್ನಡ ಪರ ಹೋರಾಟಗಾರರು, ರೈತರ ಮೇಲೆ ಕೇಸ್ ಹಾಕಲಾಗುತ್ತಿದೆ. ಇದನ್ನು ನೋಡಿ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ, ಇದಕ್ಕೆ ತಕ್ಕ ಉತ್ತರ ನೀಡಬೇಕಿದೆ. ಇಂದು ಈ ರಾಜ್ಯ ಸರ್ಕಾರಕ್ಕೆ 48 ಗಂಟೆ ಗಡುವು ನೀಡುತ್ತಿದ್ದೇವೆ. ಅಷ್ಟರಲ್ಲಿ ಶ್ರೀಕಾಂತ್ ಪೂಜಾರಿಯನ್ನು ಬಿಡುಗಡೆ ಮಾಡದೇ ಇದ್ದಲ್ಲಿ ಯುವ ಮೋರ್ಚಾದಿಂದ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲಿದ್ದೇವೆ" ಎಂದು ಎಚ್ಚರಿಕೆ ನೀಡಿದರು.
"ಇಂದು ಮತ್ತು ನಾಳೆ ರಾಜ್ಯದಲ್ಲಿ ಬಿಜೆಪಿ ಹೋರಾಟ ಮಾಡಲಿದೆ. ನಿಮ್ಮ ಧೋರಣೆ ಬದಲಾವಣೆ ಮಾಡಿಕೊಳ್ಳಿ. ಹಿಂದೂ ಕಾರ್ಯಕರ್ತರನ್ನು ಹೆದರಿಸುವುದನ್ನು ನೋಡುತ್ತಾ ಕುಳಿತುಕೊಳ್ಳಲ್ಲ, ರಸ್ತೆಗಿಳಿದು ಬಿಜೆಪಿ ಹೋರಾಟ ನಡೆಸಲಿದೆ. ಇದು ಮೊಘಲ್ ದರ್ಬಾರ್ ಅಲ್ಲ, ತಾಲಿಬಾನ್ ಸರ್ಕಾರ ಅಲ್ಲ, ಜನಪರ ಸರ್ಕಾರ ನೀಡದೇ ಇದ್ದಲ್ಲಿ ಬಿಜೆಪಿ ಮಾತ್ರವಲ್ಲ ಸ್ವಾಭಿಮಾನಿ ಕನ್ನಡಿಗರೆಲ್ಲಾ ಹೋರಾಟಕ್ಕೆ ಇಳಿಯಲಿದ್ದಾರೆ. ಶ್ರೀಕಾಂತ್ ಪೂಜಾರಿಗೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲಲ್ಲ" ಎಂದರು.
ಮಾಜಿ ಸಿಎಂ ಡಿವಿ ಸದಾನಂದಗೌಡ ಮಾತನಾಡಿ, "ಅಧಿಕಾರ ಶಾಸ್ವತ ಅಲ್ಲ, ವಿಚಾರಗಳು ಶಾಶ್ವತವಾಗಿ ಉಳಿಯಲಿವೆ. ರಾಮ ಮಂದಿರ ವಿಚಾರದಲ್ಲಿ ಸಿದ್ದರಾಮಯ್ಯ ಮಾತು ಕಾಂಗ್ರೆಸ್ ಮಾತು ಹೊಸತೇನಲ್ಲ. ಕಾಂಗ್ರೆಸ್ನವರು ಸುಪ್ರೀಂ ಕೋರ್ಟ್ನಲ್ಲಿ ಶ್ರೀರಾಮ ಇಲ್ಲ ಎನ್ನುವ ಪ್ರಮಾಣಪತ್ರ ಸಲ್ಲಿಸಿದ್ದರು. ರಾಮಸೇತುವೆಯ ಇಂಜಿನಿಯರ್ ಯಾರು ಎನ್ನುವ ಪ್ರಶ್ನೆ ಕೇಳಿದ್ದವರು ಕಾಂಗ್ರೆಸ್ನವರು. ಕಂದಹಾರ್ ವಿಮಾನ ಹೈಜಾಕ್ನ ಬೆಂಬಲಕ್ಕಿದ್ದವರನ್ನೇ ಎರಡು ಬಾರಿ ಸಂಸತ್ಗೆ ಆಯ್ಕೆ ಮಾಡಿದ್ದಂತವರು" ಎಂದು ಟೀಕಿಸಿದರು.
"ಕಾಂಗ್ರೆಸ್ನ ಶೇ.75 ರಷ್ಟು ಜನ 22 ರಂದು ನಂದಾದೀಪ ಹಚ್ಚಲಿದ್ದಾರೆ. ಇದನ್ನು ತಡೆಯವ ಕೀಳುಮಟ್ಟದ ಅಭಿರುಚಿಯನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಶ್ರೀಕಾಂತ ಪೂಜಾರಿಯನ್ನು ಬಂಧಿಸಿರುವ ಇವರಿಗೆ ಕನಿಷ್ಠ ಬೆಳಗಾವಿ ಕೇಸ್ನಲ್ಲಿ ಎಫ್ಐಆರ್ ದಾಖಲಿಸಲಾಗಲಿಲ್ಲ. ಇಂತಹ ಕೀಳುಮಟ್ಟದ ರಾಜಕಾರಣಕ್ಕೆ ಇತಿಶ್ರೀ ಹಾಡಬೇಕಿದೆ. ಇಂದೇ ಬಿಡುಗಡೆಗೆ ಆದೇಶ ನೀಡಬೇಕು, ತಪ್ಪಾಯಿತು ಎಂದು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಇಲ್ಲದಿದ್ದರೆ ರಾಮನ ಶಾಪ ತಟ್ಟಲಿದೆ" ಎಂದು ಎಚ್ಚರಿಸಿದರು.
ಮಾಜಿ ಡಿಸಿಎಂ ಡಾ.ಅಶ್ವತ್ಥನಾರಾಯಣ ಮಾತನಾಡಿ, "ಕೇಸ್ ವಾಪಸ್ ಪಡೆದು ಶ್ರೀಕಾಂತ್ ಪೂಜಾರಿ ಬಿಡುಗಡೆ ಮಾಡಿ, ಬಂಡತನ ಬಿಡಿ. ಇಲ್ಲದೇ ಇದ್ದರೆ ಜನ ಕ್ಷಮಿಸಲ್ಲ. ಕೇಸ್ ವಾಪಸ್ ಪಡೆಯದೇ ಇದ್ದಲ್ಲಿ ತೀವ್ರತರ ಹೋರಾಟ ಮಾಡಬೇಕಾಗಲಿದೆ" ಎಂದು ಕಿಡಿ ಕಾರಿದರು.
ಮಾಜಿ ಸಚಿವ ಮುನಿರತ್ನ ಮಾತನಾಡಿ, "31 ವರ್ಷದ ಪ್ರಕರಣಕ್ಕೆ ಇಂದು ಮರುಜೀವ ನೀಡಿದ್ದಾರೆ. ಅವರು ದೇಶದ್ರೋಹದ ಕೆಲಸ ಮಾಡಿಲ್ಲ, ಕಾನೂನಿಗೆ ವಿರುದ್ಧವಾಗಿ ಕೆಲಸ ಮಾಡಿಲ್ಲ. ಹಿಂದೂಪರ ಹೋರಾಟ ಮಾಡಿದವರನ್ನು ಬಂಧಿಸಿದ್ದಾರೆ. ಇದನ್ನು ಹೀಗೆಯೇ ಮುಂದುವರೆಯಲು ಬಿಟ್ಟರೆ ಬಹಳ ಅನಾಹುತವಾಗಲಿದೆ ಎಂದರು.
ಇದನ್ನೂ ಓದಿ: ರಾಮ ಭಕ್ತರ ಅರೆಸ್ಟ್, ಪಿಎಫ್ಐಗಳ ಬಿಡುಗಡೆ: ಸರ್ಕಾರದ ವಿರುದ್ಧ ಆರ್.ಅಶೋಕ್ ಕಿಡಿ