ಬೆಂಗಳೂರು : ರಾಜ್ಯ ಸಚಿವ ಸಂಪುಟದ ಹದಿನೈದು ಸಚಿವರ ವಿರುದ್ಧ ಕಿಡಿ ಕಾರುತ್ತಿರುವ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಅವರಿಗೆ ದೆಹಲಿಗೆ ಬುಲಾವ್ ಬಂದಿದೆ. ಕರ್ನಾಟಕ ಉಸ್ತುವಾರಿ ಹೊಣೆ ಹೊತ್ತ ಅರುಣ್ ಸಿಂಗ್ ಈ ಬುಲಾವ್ ನೀಡಿದ್ದು, ಸೋಮವಾರ ಈ ಕುರಿತಂತೆ ರೇಣುಕಾಚಾರ್ಯ ಅವರ ಜೊತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದರು ಎಂದು ತಿಳಿದು ಬಂದಿದೆ.
ಅರುಣ್ ಸಿಂಗ್ ಅವರ ಜೊತೆಗಿನ ಮಾತುಕತೆಯ ಹಿನ್ನೆಲೆಯಲ್ಲಿ ರೇಣುಕಾಚಾರ್ಯ ಅವರು ಫೆ. 7 ಅಥವಾ 8ರಂದು ದೆಹಲಿಗೆ ತೆರಳಲಿದ್ದಾರೆ ಎಂದು ಗೊತ್ತಾಗಿದೆ. ಉನ್ನತ ಮೂಲಗಳ ಪ್ರಕಾರ, ಜನವರಿ 31ರಂದು ರೇಣುಕಾಚಾರ್ಯ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿದ ಅರುಣ್ ಸಿಂಗ್, ಸಚಿವರ ವಿರುದ್ಧ ಕಿಡಿ ಕಾರುತ್ತಿರುವುದಕ್ಕೆ ಕಾರಣ ಕೇಳಿದ್ದಾರೆ. ಈ ಸಂದರ್ಭದಲ್ಲಿ ಸ್ವಪಕ್ಷದ ಕೆಲ ಸಚಿವರು ಮತ್ತು ವಲಸೆ ಬಂದು ಸಚಿವರಾಗಿರುವ ಕೆಲವರ ವರ್ತನೆಯ ಬಗ್ಗೆ ರೇಣುಕಾಚಾರ್ಯ ಆಕ್ಷೇಪ ವ್ಯಕ್ತಪಡಿಸಿದರು ಎನ್ನಲಾಗಿದೆ.
ಸರ್ಕಾರದಲ್ಲಿರುವ ಬಹುತೇಕ ಸಚಿವರು ತಮ್ಮ ವ್ಯಾಪಾರ, ವ್ಯವಹಾರಕ್ಕಾಗಿ ಇರುವಂತೆ ಭಾಸವಾಗುತ್ತಿದೆ. ಇವರಿಗೆ ಶಾಸಕರ ಬಗ್ಗೆ ಕಿಂಚಿತ್ತು ಗೌರವವೂ ಇಲ್ಲ, ಸರ್ಕಾರಕ್ಕೆ ಗೌರವ ತರುವ, ಆ ಮೂಲಕ ಪಕ್ಷಕ್ಕೆ ಶಕ್ತಿ ತರುವ ಯಾವ ಆಸಕ್ತಿಯೂ ಇಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.
ತಮಗೆ ಬೇಕಾದವರ ಮೂಲಕ ವ್ಯವಹಾರದಲ್ಲಿ ಅಪಾರ ಪ್ರಮಾಣದ ಹಣ ತೊಡಗಿಸುತ್ತಿರುವ ಹಲವು ಸಚಿವರು ಇದೇ ಕಾರಣಕ್ಕಾಗಿ ಸರ್ಕಾರವನ್ನು ದಲ್ಲಾಳಿಗಳ ಮಾರುಕಟ್ಟೆಯನ್ನಾಗಿ ಮಾರ್ಪಡಿಸಿದ್ದಾರೆ. ಕೇಳಿದರೆ ಸರ್ಕಾರ ಬರಲು ತಾವು ಬಂಡವಾಳ ಹೂಡಿರುವುದಾಗಿ ಉಡಾಫೆಯ ಮಾತನಾಡುತ್ತಾರೆ. ಆ ಮೂಲಕ ತಾವೇನು ಮಾಡಿದರೂ ನಡೆಯುತ್ತದೆ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಶಾಸಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಪಕ್ಷದ ಶಾಸಕಾಂಗ ಸಭೆಯಲ್ಲಿ ಹಲವು ಬಾರಿ ಪ್ರಸ್ತಾಪಿಸಿದ್ದಾಯಿತು. ಹಿರಿಯ ನಾಯಕರಿಗೆ ಹೇಳಿದ್ದೂ ಆಯಿತು. ಆದರೆ, ಈವರೆಗೆ ಯಾವ ಬದಲಾವಣೆಯೂ ಆಗಿಲ್ಲ. ಸರ್ಕಾರ ಅಸ್ತಿತ್ವಕ್ಕೆ ಬರುವುದರ ಹಿಂದೆ ನಮ್ಮ ಶ್ರಮವೂ ಇದೆ. ಆದರೆ, ಅದನ್ನು ನಿರ್ಲಕ್ಷಿಸುವ ಕೆಲಸವಾಗುತ್ತಿದೆ. ಇದು ಹೀಗೇ ಮುಂದುವರಿದರೆ ಪಕ್ಷ ಕಷ್ಟಕ್ಕೆ ಸಿಲುಕುತ್ತದೆ ಎಂದು ಅರುಣ್ ಸಿಂಗ್ ಅವರಿಗೆ ವಿವರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ವಲಸಿಗ ಸಚಿವರ ಪೈಕಿ ಕೆಲವರು ಈಗಾಗಲೇ ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿದ್ದಾರೆ. ಚುನಾವಣೆ ಹತ್ತಿರ ಬಂದಾಗ ಪುನಾಃ ಪಕ್ಷಾಂತರ ಮಾಡುತ್ತಾರೆ. ಇಂತವರ ಕ್ಷೇತ್ರದಲ್ಲಿ ಈಗಾಗಲೇ ಮೂಲ ಬಿಜೆಪಿಯವರ ಶಕ್ತಿಯೂ ಕುಗ್ಗಿದೆ.
ಹೀಗಾಗಿ, ಈ ವಿಷಯದ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕಿದೆ ಎಂದು ರೇಣುಕಾಚಾರ್ಯ ವಿವರಿಸಿದಾಗ, ಇಂತಹ ಎಲ್ಲ ಮಾಹಿತಿಗಳೊಂದಿಗೆ ದೆಹಲಿಗೆ ಬನ್ನಿ ಎಂದು ಸೂಚಿಸಿದ್ದಾರೆ ಎನ್ನಲಾಗಿದೆ. ಅರುಣ್ ಸಿಂಗ್ ಅವರು ನೀಡಿದ ಸೂಚನೆಯ ಹಿನ್ನೆಲೆಯಲ್ಲಿ ಫೆಬ್ರವರಿ 7 ಅಥವಾ 8ರಂದು ದೆಹಲಿಗೆ ತೆರಳಲು ರೇಣುಕಾಚಾರ್ಯ ನಿರ್ಧರಿಸಿದ್ದಾರೆ.
ದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅರುಣ್ ಸಿಂಗ್, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಸೇರಿದಂತೆ ಹಲವು ನಾಯಕರನ್ನು ಭೇಟಿ ಮಾಡಿ ರಾಜ್ಯ ಬಿಜೆಪಿ ಸರ್ಕಾರದಲ್ಲಾಗುತ್ತಿರುವ ಬೆಳವಣಿಗೆಗಳ ಕುರಿತು ವಿವರ ನೀಡಲಿದ್ದಾರೆ ಎಂದು ಗೊತ್ತಾಗಿದೆ.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ