ಬೆಂಗಳೂರು: ಮೋಹನ್ ಭಾಗವತ್ ಮೇಲೆ ಹತ್ಯೆ ಸಂಚು ವಿಚಾರವಾಗಿ ಬಿಜೆಪಿ ನಾಯಕರು ಆತಂಕ ವ್ಯಕ್ತಪಡಿಸಿದ್ದಾರೆ.
ಸಿಎಎ ಜಾರಿ ಆದ್ಮೇಲೆ ಪಾಕಿಸ್ತಾನದ ಬೆಂಬಲದೊಂದಿಗೆ ಹಿಂದೂ ಮುಖಂಡರ ಹತ್ಯೆಗೆ ಸಂಚು ರೂಪಿಸಲಾಗುತ್ತಿದೆ. ಇದಕ್ಕೆಲ್ಲ ಕಾರಣ ವಿಪಕ್ಷಗಳ ದೇಶವಿರೋಧಿ ನಿಲುವಿನಿಂದ ಈ ರೀತಿಯ ಹತ್ಯೆ ಸಂಚು ರೂಪಿಸಲಾಗುತ್ತಿದೆ ಎಂದು ಯತ್ನಾಳ್ ಆರೋಪಿಸಿದರು.
ಇದೇ ವೇಳೆ ಮಾತನಾಡಿದ ಸಿಎಂ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್, ಹಿಂದೂ ಮುಖಂಡರ ಮೇಲೆ ಹತ್ಯೆ ಸಂಚು ನಡಿತಾನೇ ಇದೆ. ಈ ಸಂಬಂಧ ಪೊಲೀಸ್ ಇಲಾಖೆ ಎಚ್ಚರಿಕೆಯ ಕ್ರಮ ಕೈಗೊಂಡಿದೆ. ಸೂಕ್ತ ಭದ್ರತೆ ಮಾಡಿರೋದ್ರಿಂದ ಅವರ ಹತ್ಯೆ ಸಂಚು ತಪ್ಪಿರಬಹುದು ಎಂದು ತಿಳಿಸಿದರು.
ಪಾಕಿಸ್ತಾನ ಪ್ರೇರಿತ ಭಯೋತ್ಪಾದಕರಿಂದ ನಮ್ಮ ಹಿರಿಯ ನಾಯಕರನ್ನು ಹತ್ಯೆ ಮಾಡುವ ಯತ್ನ ನಡೆಯುತ್ತಿದೆ. ಆದ್ರೆ, ಇದು ವಿಫಲವಾಗುತ್ತಿವೆ. ಕೇಂದ್ರ ಸರ್ಕಾರ ಇಂತಹ ಭಯೋತ್ಪಾದಕ ಉಗ್ರರನ್ನ ಬಂಧಿಸುವ ಕೆಲಸ ಮಾಡುತ್ತಿವೆ ಎಂದರು.
ರಾಷ್ಟ್ರವಾದಿಗಳ ಹತ್ಯೆ ಸಂಚು ಈ ಮೊದಲಿನಿಂದಲೂ ನಡೆಯುತ್ತಾನೆ ಬರುತ್ತಿದೆ ಎಂದು ಸಚಿವ ಸಿ.ಟಿ.ರವಿ ತಿಳಿಸಿದರು. ಇದೇನೂ ಹೊಸದಲ್ಲ. ಮೋಹನ್ ಭಾಗವತ್ ಹತ್ಯೆ ಸಂಚು ವಿಫಲಗೊಳಿಸಿದ ಬೇಹುಗಾರಿಕೆ ಇಲಾಖೆಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ದೇಶಕ್ಕೆ ಸಮರ್ಪಣೆ ಮಾಡಿದವರು ಇಂತಹ ಬೆದರಿಕೆಯನ್ನು ಎದುರಿಸುತ್ತಿರುತ್ತಾರೆ ಎಂದರು.
ಈ ಬಗ್ಗೆ ಮಾತನಾಡಿದ ಸಚಿವ ಬಿ.ಸಿ.ಪಾಟೀಲ್, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹತ್ಯೆ ಸಂಚು ಖಂಡನೀಯ ಎಂದರು. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಷ್ಟ್ರೀಯವಾದಿಗಳ ಮೇಲಿನ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂಬ ವಿಚಾರವನ್ನು ಗುಪ್ತಚರ ಇಲಾಖೆ ನೀಡಿದೆ ಎಂಬುದು ತಿಳಿದು ಬಂದಿದೆ. ಈ ಬಗ್ಗೆ ಗೃಹ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.