ಬೆಂಗಳೂರು: ಬಹುದಿನಗಳಿಂದ ಚರ್ಚೆಯಲ್ಲಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಆಯ್ಕೆ ವಿಚಾರ ಇದೀಗ ಪೂರ್ಣಗೊಂಡಿದೆ. ಬಿಜೆಪಿ ಹೈಕಮಾಂಡ್ ಕೊನೆಗೂ ಅಳೆದು ತೂಗಿ ಬಿ ವೈ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಪಟ್ಟವನ್ನು ನೀಡಿದೆ. ಇನ್ನು ರಾಜ್ಯಾಧ್ಯಕ್ಷರ ರೇಸ್ನಲ್ಲಿ ಸಿ ಟಿ ರವಿ ಸೇರಿದಂತೆ ಹಲವು ನಾಯಕರ ಹೆಸರು ಮುಂಚೂಣಿಯಲ್ಲಿದ್ದವು. ಈ ಬಗ್ಗೆ ಸ್ವತಃ ಬಿಜೆಪಿ ನಾಯಕ ಸಿ ಟಿ ರವಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಮಧ್ಯಪ್ರದೇಶದಿಂದ ಬೆಂಗಳೂರಿಗೆ ಆಗಮಿಸಿದ ಸಿ ಟಿ ರವಿ ಅವರು ಈ ವಿಚಾರವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ. "ಪಕ್ಷ ನೇಮಕ ಮಾಡಿದೆ, ವೈಚಾರಿಕ ಭದ್ರತೆ ಜೊತೆಗೆ ಪಕ್ಷ ಕಟ್ಟಿ ಬೆಳೆಸುವ ಕೆಲಸ ಮಾಡಬೇಕಿದೆ. ಜೊತೆಗೆ ಲೋಕಸಭೆ ಚುನಾವಣೆಯಲ್ಲಿ 28ಕ್ಕೆ 28ಸ್ಥಾನ ಗೆಲ್ಲಿಸುವ ಹೊಣೆಗಾರಿಕೆ ಇದೆ ಯಶಸ್ವಿಯಾಗಲಿ" ಎಂದು ಹೇಳಿದ್ದಾರೆ.
ಪಕ್ಷದಲ್ಲಿ ಸಾಕಷ್ಟು ಜನ ಹಿರಿಯರು ಇದ್ದರು, ಅವರೂ ರಾಜ್ಯಾಧ್ಯಕ್ಷ ಸ್ಥಾನ ಸಿಗುವ ಕುರಿತು ನಿರೀಕ್ಷೆ ಇಟ್ಟುಕೊಂಡಿದ್ದರು ಎಂದು ಮಾಧ್ಯಮ ಪ್ರತಿನಿದಿಗಳು ಕೇಳಿದ ಪ್ರಶ್ನೆಗೆ, ದೀಪಾವಳಿ ಹಬ್ಬದ ಶುಭಾಶಯಗಳು ಎಂದು ತಿಳಿಸುವ ಮೂಲಕ ಈ ಪ್ರಶ್ನೆಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಬಳಿಕ ಮತ್ತೊಂದು ಪ್ರಶ್ನೆಗೆ ಪ್ರತಿಕ್ರಿಯಿಸಿ, ಬದಲಾಗದೆ ಇರೋದು ಕಾರ್ಯಕರ್ತ, ಈಗ ನಾನೊಬ್ಬ ಸಾಮಾನ್ಯ ಕಾರ್ಯಕರ್ತ ಎಂದು ಹೇಳಿದರು.
ನೂತನ ಅಧ್ಯಕ್ಷರ ಆಯ್ಕೆ ಬಗ್ಗೆ ಕಾಂಗ್ರೆಸ್ ಎಕ್ಸ್ ಪೋಸ್ಟ್ನಲ್ಲಿ ಹಾಕಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ಬಗ್ಗೆ ಈಗ ನಾನು ಏನು ಮಾತನಾಡಲ್ಲ, ಈಗಾಗಲೇ ಬಹಳಷ್ಟು ಮಾತನಾಡಿದ್ದೇನೆ. 35 ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿದ್ದೀನಿ. ಬೂತ್ ಅಧ್ಯಕ್ಷನಿಂದ ರಾಷ್ಟ್ರಿಯ ಪ್ರಧಾನ ಕಾರ್ಯದರ್ಶಿ ವರೆಗೂ ಜವಾಬ್ದಾರಿ ನಿರ್ವಹಿಸಿದ್ದೀನಿ. ಈಗಾಗಲೇ ಬಹಳ ವಿಷಯ ಮಾತನಾಡಿ ಬಿಟ್ಟಿದ್ದೇನೆ. ಈಗೇನಾದ್ರು ಮಾತನಾಡಿದ್ರೆ ನಮ್ಮ ಮಾತೇ ನಮಗೆ ತಿರುಗುಬಾಣವಾಗುತ್ತೆ ಎಂದು ಹೇಳಿದರು.
ಆರ್ ಅಶೋಕ್ ಪ್ರತಿಕ್ರಿಯೆ : ವಿಜಯೇಂದ್ರರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿರುವ ವಿಚಾರಕ್ಕೆ ಮಾಜಿ ಡಿಸಿಎಂ ಆರ್ .ಅಶೋಕ್ ಸಹ ಪ್ರತಿಕ್ರಿಯೆ ನೀಡಿದ್ದಾರೆ. ಅಳೆದು ತೂಗಿ ವಿಜಯೇಂದ್ರಗೆ ನಾಯಕತ್ವ ಕೊಟ್ಟಿದ್ದಾರೆ. ಇದರಿಂದಾಗಿ ಯಡಿಯೂರಪ್ಪ ಅವರು ಪಕ್ಷದ ಚಟುವಟಿಕೆಯಲ್ಲಿ ಇನ್ನಷ್ಟು ಸಕ್ರಿಯವಾಗಿ ಭಾಗಿಯಾಗಲಿದ್ದಾರೆ. ಹೈಕಮಾಂಡ್ನ ಘೋಷಣೆಯನ್ನು ತುಂಬು ಹೃದಯದಿಂದ ಸ್ವಾಗತ ಮಾಡುತ್ತೇನೆ. ಬಿಜೆಪಿಯಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ ಹಾಗೂ ಸಿದ್ಧಾಂತ ಮುಖ್ಯವಾಗಿದೆ. ಹೈಕಮಾಂಡ್ ನಿರ್ಧಾರವನ್ನು ನಾವು ಸ್ವಾಗತಿಸುತ್ತಿದ್ದು, ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ವಿಶ್ವಾಸ ಇದೆ. ಅವರಿಗೆ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಹೇಳುವ ಮೂಲಕ ಶುಭಕೋರಿದರು.
ಇದನ್ನೂ ಓದಿ: ಶಿವಮೊಗ್ಗ ಜಿಲ್ಲೆಗೆ ಮೂರನೇ ಬಾರಿಗೆ ಒಲಿದ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ