ಬೆಂಗಳೂರು: ಪಾದರಾಯನಪುರ ಪಕ್ಕದಲ್ಲಿನ 137ನೇ ವಾರ್ಡ್ ರಾಯಪುರಂನಲ್ಲಿ ಇಂದು ಸಾಮಾಜಿಕ ಅಂತರ ನಿಯಮ ಗಾಳಿಗೆ ತೂರಿ ಬರ್ತ್ ಡೇ ಸಮಾರಂಭ ನಡೆಸಲಾಗಿದೆ.
ಬಿಜೆಪಿ ಚಾಮರಾಜಪೇಟೆ ಮಂಡಲ ಅಧ್ಯಕ್ಷ ವಿ.ಕೇಶವ್ ಬರ್ತ್ ಡೇ ಪ್ರಯುಕ್ತ ಕೊರೊನಾ ವಾರಿಯರ್ಸ್ಗೆ ಅಭಿನಂದನೆ ಸಲ್ಲಿಸಲಾಯ್ತು. ಕೇಶವ್ ಅವರ ತಂಗಿ ರಾಯಪುರಂ ವಾರ್ಡ್ ಕಾರ್ಪೋರೇಟರ್ ಶಶಿಕಲಾ ಕೂಡಾ ಉಪಸ್ಥಿತರಿದ್ದರು. ಬರ್ತ್ಡೇ ಆಚರಣೆಗೆ ನೂರಕ್ಕೂ ಹೆಚ್ಚು ಜನರನ್ನು ಒಂದೆಡೆ ಸೇರಿಸಲಾಗಿತ್ತು. ಪೌರಕಾರ್ಮಿಕರು, ಆರೋಗ್ಯ ಸಿಬ್ಬಂದಿಗಳಿಗೆ ಹೂಮಳೆ ಸುರಿದು ಅಭಿನಂದನೆ ಸಲ್ಲಿಸಲಾಗಿದೆ. ಪೊಲೀಸರು ಸ್ಥಳದಲ್ಲಿದ್ದರೂ ಏನೂ ಮಾಡಲಾಗಿಲ್ಲ. ಆದರೆ ದಿನೇ ದಿನೆ ಹೆಚ್ಚಾಗುತ್ತಿರುವ ಕೊರೊನಾ ಭೀತಿಯ ನಡುವೆ ಸಾಮಾಜಿಕ ಅಂತರ ಮರೆತು ಈ ರೀತಿಯ ಸಮಾರಂಭ ಬೇಕಿತ್ತಾ ಅನ್ನೋದು ಎಲ್ಲರ ಪ್ರಶ್ನೆಯಾಗಿದೆ.
ಇವರ ನಡೆ ತೀವ್ರ ವಿವಾದಕ್ಕೆ ಗುರಿಯಾಗಿದೆ. ಈ ಸಮಾರಂಭ ರಾಯಪುರಂನ ಅಂಬೇಡ್ಕರ್ ಭವನದಲ್ಲಿ ನಡೆದಿದ್ದು, ಸಂಸದ ಪಿ.ಸಿ.ಮೋಹನ್ ಕೂಡಾ ಈ ಬರ್ತ್ ಡೇ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಮಾಸ್ಕ್, ಸ್ಯಾನಿಟೈಸರ್ ಏನೂ ಇಲ್ಲದೆ ಜನರನ್ನು ಸೇರಿಸಲಾಗಿದೆ ಎನ್ನಲಾಗಿದೆ. ಈ ಹಿಂದೆ ಪಾದರಾಯನಪುರದ ಜನರ ಪರೀಕ್ಷೆಯನ್ನು ರಾಯಪುರಂ ವಾರ್ಡ್ನಲ್ಲಿ ನಡೆಸುವುದಕ್ಕೆ ವಿರೋಧಿಸಿದ್ದ ಕಾರ್ಪೋರೇಟರ್ ಹಾಗೂ ಕೇಶವ್ ಈಗ ಖುದ್ದು ಬರ್ತ್ ಡೇ ಸಮಾರಂಭ ನಡೆಸಿದ್ದಾರೆ.