ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿರುವ ಬಿಜೆಪಿಯಲ್ಲಿ ಆಂತರಿಕ ಕಲಹ, ಸ್ವಪಕ್ಷೀಯರ ತೇಜೋವಧೆ ಹೆಚ್ಚಾಗಿದೆ. ಇದರಿಂದ ಪಕ್ಷದ ವರ್ಚಸ್ಸಿಗೆ ಸಾರ್ವಜನಿಕವಾಗಿ ಧಕ್ಕೆಯಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ವರಿಷ್ಠರು ಮಧ್ಯಪ್ರವೇಶಿಸಿ ಕಳೆದೊಂದು ತಿಂಗಳಿನಿಂದ ನಡೆಯುತ್ತಿರುವ ಆರೋಪ - ಪ್ರತ್ಯಾರೋಪಗಳಿಗೆ ಕಡಿವಾಣ ಹಾಕಿದ್ದಾರೆ.
ಹಿರಿಯ ನಾಯಕರ ವಿರುದ್ಧವೇ ಟೀಕಾಸಮರ ನಡೆಸುತ್ತಿರುವವರ ವಿರುದ್ಧ ಶಿಸ್ತು ಕ್ರಮದ ಎಚ್ಚರಿಕೆ ನೀಡಿ ಈಗ ಬಾಯಿ ಮುಚ್ಚಿಸಲಾಗಿದೆ. ಪಕ್ಷದ ಮುಖಂಡರ ವಿರುದ್ಧ ಸಾರ್ವಜನಿಕವಾಗಿ ಯಾರೂ ಮಾಧ್ಯಗಳ ಮುಂದೆ ಟೀಕೆಗಳನ್ನು ಆರೋಪಗಳನ್ನು ಮಾಡಬಾರದು, ಪಕ್ಷದ ಚೌಕಟ್ಟು ಮೀರಿ ಆಕ್ಷೇಪಾರ್ಹ ಮಾತುಗಳನ್ನು ಆಡಿದರೆ ಶಿಸ್ತು ಕ್ರಮಕ್ಕೆ ಒಳಪಡಿಸಲಾಗುವುದು. ಈ ತರಹದ ವರ್ತನೆ ಸಹಿಸುವುದಿಲ್ಲ ಎಂದು ಕಳೆದ ಒಂದು ತಿಂಗಳಿನಿಂದ ಹಿರಿಯ ಮುಖಂಡರ ವಿರುದ್ಧ ನೇರವಾಗಿ ಮತ್ತು ಪರೋಕ್ಷವಾಗಿ ಆರೋಪಗಳನ್ನು ಮಾಡುತ್ತಿರುವುದಕ್ಕೆ ಕಡಿವಾಣ ಹಾಕಲಾಗಿದೆ.
ಭಾರತೀಯ ಜನತಾ ಪಕ್ಷದ ರಾಜ್ಯ ಮುಖಂಡರ ವಿರುದ್ಧ ಟೀಕೆ ಮಾಡಿರುವ ಮುಖಂಡರ ಹೆಸರುಗಳನ್ನು ರಾಜ್ಯ ಬಿಜೆಪಿ ನಾಯಕತ್ವವು ಪಟ್ಟಿ ಮಾಡಿದೆ. ಅವರಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹ, ಹಿರಿಯ ಶಾಸಕ ಬಸನಗೌಡ ಯತ್ನಾಳ್, ಬಿಜೆಪಿ ಅಭ್ಯರ್ಥಿಯಾಗಿದ್ದ ತಮ್ಮೇಶ ಗೌಡ , ದಾಸರಹಳ್ಳಿ ಶಾಸಕ ಮುನಿರಾಜು, ಮಾಜಿ ಶಾಸಕ ಚರಂತಿ ಮಠ, ಎ.ಎಸ್. ನಡಹಳ್ಳಿ, ಮಾಜಿ ಸಚಿವ ಮುರುಗೇಶ್ ನಿರಾಣಿ , ಸಂಸದ ರಮೇಶ್ ಜಿಗಜಿಣಗಿ, ಮಾಜಿ ಸಚಿವ ರೇಣುಕಾಚಾರ್ಯ ಇವರುಗಳು ಪಕ್ಷದ ಹಿರಿಯ ಮುಖಂಡರ ವಿರುದ್ಧ ಮಾಧ್ಯಮಗಳ ಎದುರು ಮಾತನಾಡಿ ಮುಜುಗರ ತಂದಿದ್ದಾರೆಂದು ಹೆಸರಿಸಲಾಗಿದೆ.
ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿ ನಡೆಸಲಾದ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಪಾಲ್ಗೊಂಡಿದ್ದರು. ಪಕ್ಷದ ಮುಖಂಡರ ವಿರುದ್ಧ ನೇರವಾಗಿ ಮತ್ತು ಪರೋಕ್ಷವಾಗಿ ಮಾತನಾಡಿದ ಬಗ್ಗೆ ವಿವರಣೆಯನ್ನು ಪಡೆಯಲಾಗಿದೆ. ಸಭೆಯಲ್ಲಿ ಕೆಲವು ಮುಖಂಡರು ತಾವು ಮಾತನಾಡಿದ ಕುರಿತು ತಪ್ಪನ್ನು ಒಪ್ಪಿಕೊಂಡಿಲ್ಲವೆಂದು ಹೇಳಲಾಗಿದೆ.
ಲೋಕಸಭೆ ಸದಸ್ಯ ಪ್ರತಾಪ್ ಸಿಂಹ ಮತ್ತು ಹಿರಿಯ ಶಾಸಕ ಬಸನಗೌಡ ಯತ್ನಾಳ್ ತಮ್ಮ ಹೇಳಿಕೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಇದನ್ನು ಒಪ್ಪದ ಮುಖಂಡರು ಮಾಧ್ಯಮಗಳ ಮುಂದೆ ಪಕ್ಷಕ್ಕೆ ಮುಜುಗರ ತರುವ ರೀತಿಯಲ್ಲಿ ಯಾವುದೇ ಹೇಳಿಕೆಗಳನ್ನು ನೀಡಬಾರದೆಂದು ತಾಕೀತು ಮಾಡಿ ಎಚ್ಚರಿಕೆಯನ್ನು ನೀಡಿದ್ದಾರೆ.
ಈ ಸಭೆಗೆ ಮೈಸೂರು ಸಂಸದ ಪ್ರತಾಪ್ ಸಿಂಹ, ವಿಜಯಪುರ ಶಾಸಕ ಬಸನಗೌಡ ಯತ್ನಾಳ್, ಬಿಜೆಪಿ ಅಭ್ಯರ್ಥಿಯಾಗಿದ್ದ ತಮ್ಮೇಶ ಗೌಡ, ದಾಸರಹಳ್ಳಿ ಶಾಸಕ ಮುನಿರಾಜು, ಮಾಜಿ ಶಾಸಕರಾದ ವೀರಣ್ಣ ಚರಂತಿಮಠ, ಎ ಎಸ್ ನಡಹಳ್ಳಿಯವರು ಹಾಜರಾಗಿದ್ದರು. ಆದರೆ ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ಎಂ ಪಿ ರೇಣುಕಾಚಾರ್ಯ, ಪ್ರಭು ಚೌಹಾಣ್ , ಸಂಸದ ರಮೇಶ್ ಜಿಗಜಿಣಗಿ ಮತ್ತು ಈಶ್ವರ್ ಸಿಂಗ್ ಠಾಕೂರ್ ಅವರು ಸಭೆಗೆ ಹಾಜರಾಗದೆ ಗೈರಾಗಿದ್ದರು.
ಸಚಿವ ರೇಣುಕಾಚಾರ್ಯಗೆ ನೋಟಿಸ್: ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಪಕ್ಷಕ್ಕೆ ಮುಜುಗರ ತರುವ ರೀತಿಯಲ್ಲಿ ಮಾತನಾಡಿದ್ದಕ್ಕೆ 11 ಜನ ಮುಖಂಡರಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಆದರೆ ಯಾವ ಮುಖಂಡರಿಗೆ ನೋಟಿಸ್ ನೀಡಲಾಗಿದೆ ಎನ್ನುವ ಮಾಹಿತಿಯನ್ನು ಅವರು ಸ್ಪಷ್ಟಪಡಿಸಿಲ್ಲ. ಈ ನಡುವೆ ರಾಜ್ಯ ಬಿಜೆಪಿಯ ಶಿಸ್ತು ಸಮಿತಿಯ ಅಧ್ಯಕ್ಷ ಲಿಂಗರಾಜ್ ಪಾಟೀಲ್ ಅವರು ಮಾಜಿ ಸಚಿವ ರೇಣುಕಾಚಾರ್ಯ ಅವರಿಗೆ ಮಾತ್ರ ನೋಟಿಸ್ ನೀಡಲಾಗಿದೆ ಎನ್ನುವುದನ್ನು ಖಚಿತಪಡಿಸಿದ್ದಾರೆ.
ಬಿಜೆಪಿಗೆ ಮುಜುಗರ ತರುವ ರೀತಿ ಮಾತನಾಡಿದ ಬೇರೆ ನಾಯಕರಿಗೆಲ್ಲ ಬಿಟ್ಟು ತಮಗೊಬ್ಬರಿಗೆ ನೋಟಿಸ್ ನೀಡಿರುವ ಔಚಿತ್ಯವನ್ನು ಮಾಜಿ ಸಚಿವ ರೇಣುಕಾಚಾರ್ಯ ಪ್ರಶ್ನೆ ಮಾಡಿದ್ದಾರೆ. ಪಕ್ಷವು ನೀಡಿದ ನೋಟಿಸ್ಗೆ ತಾವು ಹೆದರುವುದಿಲ್ಲ ಎಂದು ಹೇಳಿರುವ ರೇಣುಕಾಚಾರ್ಯ ಅವರನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ನಿವಾಸಕ್ಕೆ ಕರೆಸಿ ಮಾತನಾಡಿ ಮಾಧ್ಯಮಗಳ ಮುಂದೆ ಪಕ್ಷಕ್ಕೆ ಮುಜುಗರವಾಗುವಂತೆ ಮಾತನಾಡಬಾರದೆಂದು ತಿಳಿಹೇಳಿದ್ದಾರೆ. ಯಡಿಯೂರಪ್ಪನವರ ಮಾತಿಗೆ ಗೌರವ ಕೊಟ್ಟು ಬಹಿರಂಗ ಹೇಳಿಕೆ ನೀಡುವುದಿಲ್ಲ ಎಂದು ಮಾಜಿ ಸಚಿವ ರೇಣುಕಾಚಾರ್ಯ '' ಈಟಿವಿ ಭಾರತ್'' ಗೆ ಸ್ಪಷ್ಟಪಡಿಸಿದ್ದಾರೆ.
ರೇಣುಕಾಚಾರ್ಯರಿಂದ ಮೋದಿ, ಶಾ, ನಡ್ಡಾಗೆ ಪತ್ರ?: ವಿಧಾನಸಭೆ ಚುನಾವಣೆಯಲ್ಲಿನ ಸೋಲಿನ ಬಗ್ಗೆ ತಾವಾಡಿದ ಮಾತಿನ ಬಗ್ಗೆ ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ತಾವು ಆಡಿದ ಮಾತನ್ನು ಸಮರ್ಥಿಸಿಕೊಳ್ಳುತ್ತೇನೆ. ನನಗೊಬ್ಬನಿಗೆ ಶಿಸ್ತು ಸಮಿತಿ ನೋಟಿಸ್ ನೀಡುವುದು ಸರಿಯೇ? ಇದನ್ನು ಪಕ್ಷದ ವೇದಿಕೆಯಲ್ಲಿ ಪ್ರಶ್ನೆ ಮಾಡುತ್ತೇನೆ. ರಾಜ್ಯ ಬಿಜೆಪಿಯಲ್ಲಿನ ಬೆಳವಣಿಗೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಪತ್ರ ಬರೆಯುತ್ತೇನೆ. ಭೇಟಿ ಮಾಡಲು ಅವಕಾಶವನ್ನು ಸಹ ಕೇಳುತ್ತೇನೆ ಎಂದು ರೇಣುಕಾಚಾರ್ಯ ತಿಳಿಸಿದ್ದಾರೆ.
ರಾಜ್ಯ ಬಿಜೆಪಿಯಲ್ಲಿನ ಹಿರಿಯ ಮುಖಂಡರ ಬಗ್ಗೆ ಪರಸ್ವರ ಆರೋಪ- ಪ್ರತ್ಯಾರೋಪ ಮಾಡುತ್ತಿರುವ ಪ್ರಕರಣಗಳನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ. ಈ ಸಂಬಂಧ ಹಿರಿಯ ಮುಖಂಡರು ಸಭೆ ನಡೆಸಿ ಮುಜುಗರದ ಹೇಳಿಕೆ ನೀಡುವುದಕ್ಕೆ ತಾರ್ಕಿಕ ಅಂತ್ಯವನ್ನು ಕಾಣಿಸಿದ್ದಾರೆ. ಪಕ್ಷದಲ್ಲಿ ಶಿಸ್ತಿನ ಚೌಕಟ್ಟನ್ನು ಮೀರಿ ಯಾರಾದರೂ ಮಾಧ್ಯಮಗಳಲ್ಲಿ ಮಾತನಾಡಿದರೆ, ಪಕ್ಷಕ್ಕೆ ಮುಜುಗರ ಉಂಟುಮಾಡಿದರೆ ಶಿಸ್ತುಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸ್ಪಷ್ಟಪಡಿಸಿದ್ದಾರೆ. ಇದು ಪಕ್ಷದ ಮುಖಂಡರ ವಿರುದ್ಧ ಆರೋಪ ಮಾಡುತ್ತಿದ್ದ ಹಾಗೂ ಮಾಧ್ಯಮಗಳ ಮುಂದೆ ಹೇಳಿಕೆ ನೀಡುವುದನ್ನು ರೂಢಿಯನ್ನಾಗಿ ಮಾಡಿಕೊಂಡಿದ್ದ ನಾಯಕರುಗಳಿಗೆ ಬಿಸಿ ಮುಟ್ಟಿಸಿದಂತಾಗಿದ್ದು ಪಕ್ಷದ ಎಚ್ಚರಿಕೆಯ ಸಂದೇಶದಿಂದ ಅಸಮಾದಾನದಿಂದಲೇ ಮೌನಕ್ಕೆ ಎಲ್ಲರೂ ಶರಣಾಗಿದ್ದಾರೆ.
ಇದನ್ನೂ ಓದಿ: ಬಿಎಸ್ವೈಗೆ ಹೈಕಮಾಂಡ್ ಬುಲಾವ್: ನಾಳೆ ದೆಹಲಿಗೆ ಯಡಿಯೂರಪ್ಪ, ವಿಪಕ್ಷ ನಾಯಕ ಹೆಸರು ಘೋಷಣೆ ಸಾಧ್ಯತೆ