ಬೆಂಗಳೂರು: ರಾಜ್ಯ ವಿಧಾನಸಭೆಯ ಚುನಾವಣಾ ವೇಳಾಪಟ್ಟಿ ಮಾರ್ಚ್ ಅಂತ್ಯದ ವೇಳೆಗೆ ಪ್ರಕಟವಾಗಲಿದ್ದು, ಅಷ್ಟರೊಳಗೆ ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸುವಂತೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಸೂಚನೆ ನೀಡಿದೆ. ಕೇಂದ್ರದ ಮೌಖಿಕ ಆದೇಶದ ಹಿನ್ನೆಲೆಯಲ್ಲಿ ಆಡಳಿತಾರೂಢ ರಾಜ್ಯ ಬಿಜೆಪಿ ಸರ್ಕಾರ ತನ್ನ ಸಚಿವರು ಮತ್ತು ಶಾಸಕರಿಗೆ ಸಂದೇಶ ರವಾನೆ ಮಾಡಿ ಬಾಕಿ ಉಳಿದಿರುವ ಯೋಜನೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಜನರಿಗೆ ಅದು ತಲುಪುವಂತಾಗಬೇಕು ಎಂದು ಸಂದೇಶ ರವಾನಿಸಿದೆ.
ಬಜೆಟ್ ಯೋಜನೆಗಳ ಅನುಷ್ಠಾನ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ 2023-24 ನೇ ಸಾಲಿನ ಬಜೆಟ್‌ಗೆ ಅನುಮೋದನೆ ಪಡೆದು, ಮಾರ್ಚ್ 1ರಿಂದ ಬಜೆಟ್‌ನಲ್ಲಿ ಘೋಷಿಸಿರುವ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಮುಂದಾಗಿದ್ದಾರೆ. ಕೇಂದ್ರದ ಸೂಚನೆಯ ಹಿನ್ನೆಲೆಯಲ್ಲಿ ಸಿಎಂ ಪಕ್ಷದ ಶಾಸಕರಿಗೆ ಸೂಚನೆ ನೀಡಿದ್ದು, ನಿಮ್ಮ ನಿಮ್ಮ ಕ್ಷೇತ್ರದಲ್ಲೇ ಇದ್ದು ಸರ್ಕಾರದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಂತೆ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದಿಂದ ಭರದ ಸಿದ್ಧತೆ: ಚುನಾವಣಾ ಆಯೋಗ ವೇಳಾಪಟ್ಟಿಯಲಿ ಪ್ರಕಟಿಸುವುದಕ್ಕಿಂತ ಮುನ್ನವೇ ಕೇಂದ್ರ ಸರ್ಕಾರ ರಾಜ್ಯದಲ್ಲಿ ತಾನು ಕೈಗೊಂಡಿರುವ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಭರದ ತಯಾರಿ ನಡೆಸಿದೆ. ಇದೇ ಕಾರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ವೇಳಾಪಟ್ಟಿ ಪ್ರಕಟವಾಗುವ ಮುನ್ನವೇ ನಾಲ್ಕು ಬಾರಿ ರಾಜ್ಯದಲ್ಲಿ ಪ್ರವಾಸ ಕೈಗೊಂಡು ಬಿಜೆಪಿ ಸರ್ಕಾರದ ಕಾರ್ಯಕ್ರಮಗಳ ಅನುಷ್ಠಾನದ ಜೊತೆಗೆ ಪಕ್ಷದ ಬೃಹತ್ ಸಮಾವೇಶಗಳನ್ನು ಉದ್ದೇಶಿಸಿ ಪಕ್ಷದ ಪರವಾಗಿ ಅಲೆ ಎಬ್ಬಿಸಲು ತೀರ್ಮಾನಿಸಿದ್ದಾರೆ. ಪದೇ ಪದೇ ರಾಜ್ಯ ಪ್ರವಾಸ ಕೈಗೊಂಡಿರುವ ಪ್ರಧಾನಿ ಹಲವಾರು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಸೇರಿದಂತೆ ಹಲವು ನಾಯಕರು ರಾಜ್ಯದಲ್ಲಿ ಪ್ರವಾಸ ಆರಂಭಿಸಿದ್ದಾರೆ.
ಸರ್ಕಾರದ ಸೂಚನೆಯ ಮೇರೆಗೆ ಬಿಜೆಪಿಯ ಸಚಿವರು ಮತ್ತು ಶಾಸಕರು ರಾಜ್ಯ ಕೇಂದ್ರೀತ ಕಾರ್ಯಕ್ರಮಗಳಿಗಿಂತ ತಮ್ಮ ತಮ್ಮ ಕ್ಷೇತ್ರದ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಮತದಾರರ ಮನ ಸೆಳೆಯುವ ಯತ್ನ ಆರಂಭಿಸಿದ್ದಾರೆ. ಪಕ್ಷದ ಶಾಸಕರ ಅನುಕೂಲಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಸಹ ಕ್ಷೇತ್ರಾಭಿವೃದ್ಧಿ ನಿಧಿ ಸೇರಿದಂತೆ ಹಲವು ಬಾಬ್ತುಗಳಲ್ಲಿ ಶಾಸಕರಿಗೆ ಹಣ ಬಿಡುಗಡೆ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಮಧ್ಯೆ ಆಡಳಿತಾರೂಢ ಬಿಜೆಪಿ ಮಾತ್ರವಲ್ಲದೇ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಕೂಡಾ ಕೇಂದ್ರ ಚುನಾವಣಾ ಆಯೋಗದ ಇಂಗಿತ ಅರ್ಥವಾಗುತ್ತಿದ್ದಂತೆಯೇ ರಾಜ್ಯ ಪ್ರವಾಸದ ಮೇಲೆ ತಮ್ಮ ಗಮನ ನೆಟ್ಟಿವೆ. ಆ ಮೂಲಕ ಕರ್ನಾಟಕದಲ್ಲಿ ಮೂರೂ ರಾಜಕೀಯ ಪಕ್ಷಗಳ ಚುನಾವಣಾ ತಯಾರಿ ವಿದ್ಯುಕ್ತವಾಗಿ ಆರಂಭವಾಗಿದೆ. ಪಕ್ಷಾತೀತ ಸಂಭವನೀಯ ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮತದಾರರಿಗೆ ಉಡುಗೊರೆಗಳನ್ನು ನೀಡುವ ಮೂಲಕ ಓಲೈಸಿಕೊಳ್ಳಲು ಮುಂದಾಗಿದ್ದಾರೆ. ಈಗಾಗಲೇ ಸಂಭವನೀಯ ಅಭ್ಯರ್ಥಿಗಳು ಕ್ಷೇತ್ರಗಳಲ್ಲಿ ಬೀಡುಬಿಟ್ಟಿದ್ದು, ಹಲವು ರೀತಿ ಕಸರತ್ತು ನಡೆಸುತ್ತಿದ್ದಾರೆ.
ಇದನ್ನೂಓದಿ:ಚುನಾವಣಾ ರಾಜಕೀಯದಿಂದ ಹಿಂದೆ ಸರಿಯಲು ಶಾಸಕ ತನ್ವೀರ್ ಸೇಠ್ ನಿರ್ಧಾರ: ಈಟಿವಿ ಭಾರತದ ಜೊತೆ ಸಂದರ್ಶನ