ಬೆಂಗಳೂರು: ಡಿಕೆಶಿ ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಲು ಹಿಂದಿನ ಬಿಜೆಪಿ ಸರ್ಕಾರ ಅವಸರದ ತೀರ್ಮಾನ ಯಾಕೆ ಕೈಗೊಂಡಿತು ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ. ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಜಿಗೆ ವರದಿ ಕೊಡುವಂತೆ ಯಡಿಯೂರಪ್ಪ ಕೇಳಿದ್ದು ಹೌದು. ಆದರೆ ವರದಿ ಏನಂತ ಕೊಟ್ರು ಅಂತ ಹೇಳಲಿ ?. ಎಲ್ಲ ದಾಖಲೆಗಳನ್ನು ಅವರು ಸದನದಲ್ಲಿ ಕೊಡಲಿ. ಇಲ್ಲದಿದ್ದರೆ ನಾನು ದಾಖಲೆ ಕೊಡುತ್ತೇನೆ. ನಮಗೂ ರಾಜಕಾರಣ ಮಾಡಲು ಬರುತ್ತದೆ. ಈ ಪ್ರಕರಣದಲ್ಲಿ ಅವಸರದ ತೀರ್ಮಾನ ಕೈಗೊಳ್ಳುವುದು ಏನಿತ್ತು ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.
ಇಂತಹ ಎಷ್ಟು ಪ್ರಕರಣಗಳನ್ನು ತನಿಖೆಗೆ ಕೊಡಲಾಗಿದೆ?. ಎಲ್ಲ ವಿವರ ಕೊಡಲಿ. ಸ್ಥಳೀಯ ತನಿಖಾ ಸಂಸ್ಥೆಗಳು ತನಿಖೆ ಮಾಡಲು ವಿಫಲ ಆದಾಗ ಮಾತ್ರ ಸಿಬಿಐ ತನಿಖೆ ಮಾಡಬೇಕು. ಆದರೆ, ಯಾಕೆ ಅವಸರ ಮಾಡಿದ್ರು?. ಒಂದೇ ದಿನದಲ್ಲಿ ಸಿಬಿಐ ತನಿಖೆಗೆ ಯಡಿಯೂರಪ್ಪ ಆದೇಶ ಮಾಡಿದ್ರು?. ಸಚಿವ ಸಂಪುಟದ ಸಭೆಯಲ್ಲಿ ನಿರ್ಣಯ ಕೈಗೊಳ್ಳುವಾಗ ಎಲ್ಲ ಸಾಧಕ ಬಾಧಕ ಚರ್ಚೆ ಮಾಡುತ್ತೇವೆ. ಸಾರ್ವಜನಿಕ ಅಭಿಪ್ರಾಯ, ಮಾಧ್ಯಮ, ಕಾನೂನು ಸಮಸ್ಯೆ ಕುರಿತು ಚರ್ಚೆ ಮಾಡ್ತೇವೆ ಎಂದು ಹೇಳಿದರು.
ಬಿಜೆಪಿ ಏನಾದ್ರೂ ಹೋರಾಟ ಮಾಡಿಕೊಳ್ಳಲಿ. ಅದಕ್ಕೂ ಮೊದಲು ನಾವು ಕೇಳಿರುವ ಪ್ರಶ್ನೆಗಳಿಗೆ ಉತ್ತರ ಕೊಡಲಿ. ಒಂದೇ ದಿನದಲ್ಲಿ ಕೇಸ್ ಅನ್ನ ಸಿಬಿಐ ವಹಿಸುವ ನಿರ್ಧಾರ ಮಾಡಿದ್ದೇಕೆ ?. ಅವರ ಪ್ರಕಾರ ಅಂದು ಅವರ ಕೇಸ್ ಹ್ಯಾಂಡಲ್ ಮಾಡಲು ರಾಜ್ಯದ ಪೊಲೀಸ್ ವ್ಯವಸ್ಥೆ ಬಲ ಕಳೆದುಕೊಂಡಿತ್ತೇ?. ಅವರ ಶಿಫಾರಸು ನೋಡಿದರೆ ಇದನ್ನು ಅವರು ಒಪ್ಪಿಕೊಂಡಂತಿದೆ. ನಾವೂ ಎಂದಿಗೂ ದಾಖಲೆ ರಹಿತ ಆರೋಪ ಮಾಡಿಲ್ಲ. ನಮ್ಮ ಪ್ರಶ್ನೆ ಈಗಲೂ ಒಂದೇ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದ್ದು ಏಕೆ. ಇದು ರಾಜಕೀಯ ಪ್ರೇರಣೆಯೇ ? ಎಂದು ಪ್ರಶ್ನಿಸಿದರು.
ಡಿಕೆಶಿ ಪ್ರಕರಣ ವಾಪಸ್ ಪಡೆದಿರುವುದು ಅಕ್ಷಮ್ಯ ಅಪರಾಧ: ಯಡಿಯೂರಪ್ಪ- ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ವಾಪಸ್ ಪಡೆದಿರುವುದು ಅಕ್ಷಮ್ಯ ಅಪರಾಧ. ಶಿವಕುಮಾರ್ ಅವರನ್ನು ರಕ್ಷಿಸಲು ರಾಜ್ಯ ಸರ್ಕಾರ ಕಾನೂನು ಬಾಹಿರ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ದಾಖಲೆ ಸಮೇತ ಬೆಳಗಾವಿ ಅಧಿವೇಶನದಲ್ಲಿ ಪಕ್ಷದ ಶಾಸಕರು ಮಾತನಾಡುತ್ತಾರೆ ಎಂದು ಹೇಳಿದರು. ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ಅಡ್ವೋಕೇಟ್ ಜನರಲ್ ಒಪ್ಪಿಗೆಯ ಮೇರೆಗೆ ಸಿಬಿಐ ತನಿಖೆಗೆ ವಹಿಸಲಾಗಿದ್ದು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆರೋಪದಲ್ಲಿ ಹುರುಳಿಲ್ಲ ಎಂದು ಯಡಿಯೂರಪ್ಪ ತಿರುಗೇಟು ನೀಡಿದರು.
ಅಡೋಕೇಟ್ ಜನರಲ್ ಒಪ್ಪಿಗೆ ಇಲ್ಲದೇ ಕಾನೂನು ಬಾಹಿರವಾಗಿ ಸಿಬಿಐ ತನಿಖೆಗೆ ನೀಡಲಾಗಿದೆ ಎಂದು ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ. ಆದರೆ, ವಾಸ್ತವವಾಗಿ ಜಾರಿ ನಿರ್ದೇಶನಾಲಯದ ಬರೆದ ಪತ್ರದ ಆಧಾರದ ಮೇಲೆ ಅಡ್ವೋಕೇಟ್ ಜನರಲ್ ಅಭಿಪ್ರಾಯ ಪಡೆದು ಸಿಬಿಐಗೆ ನೀಡಲಾಗಿತ್ತು. ಇಡಿ ಪತ್ರದ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಇದನ್ನೂಓದಿ:ಡಿಕೆಶಿ ವಿರುದ್ಧದ ಸಿಬಿಐ ಕೇಸ್ ವಾಪಸ್ ಪಡೆದಿದ್ದು ನ್ಯಾಯಾಲಯಕ್ಕೆ ಸವಾಲು ಹಾಕುವಂತಿದೆ: ನಾರಾಯಣಸ್ವಾಮಿ