ಬೆಂಗಳೂರು: ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಬಲಿದಾನ ವ್ಯರ್ಥ ಆಗಲಿಲ್ಲ. ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನವನ್ನು ಪ್ರಧಾನಿ ನರೇಂದ್ರ ಮೋದಿಯವರು ರದ್ದು ಮಾಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದರು.
ಬಿಜೆಪಿ ಸಂಸ್ಥಾಪನಾ ದಿನಾಚರಣೆ ಹಿನ್ನೆಲೆ ರಾಜ್ಯ ಬಿಜೆಪಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶ್ಯಾಮ್ ಪ್ರಸಾದ್ ಮುಖರ್ಜಿಯವರು ಅಂದೇ ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನ ನೀಡಲು ವಿರೋಧಿಸಿದ್ದರು. ಅಂದು ನಮ್ಮ ದೇಶದಲ್ಲೇ ಇದ್ದ ಕಾಶ್ಮೀರಕ್ಕೆ ಹೋಗಲು ಅನುಮತಿ ಬೇಕಿತ್ತು. ಕಾಶ್ಮೀರ ಮುಖ್ಯಮಂತ್ರಿಗೂ ಪ್ರಧಾನಿ ಅಂತ ಕರೆಯಲಾಗುತ್ತಿತ್ತು. ಒಂದು ದೇಶದಲ್ಲಿ ಎರಡು ಪ್ರಧಾನಿ ಇರಬಾರದು ಅಂತ ಶ್ಯಾಮ್ ಪ್ರಸಾದ್ ಮುಖರ್ಜಿ ಆಗ್ರಹಿಸಿ ಕಾಶ್ಮೀರ ಪ್ರವೇಶಕ್ಕೆ ಪ್ರಯತ್ನಿಸಿದ್ದರು.
ಅಂದಿನ ಶೇಖ್ ಅಬ್ದುಲ್ಲಾ ಸರ್ಕಾರ ಶ್ಯಾಮ್ ಪ್ರಸಾದ್ ಮುಖರ್ಜಿಯವರ ಬಂಧನ ಮಾಡುತ್ತದೆ. ಜೈಲಿನಲ್ಲಿ ಇದ್ದಾಗಲೇ ಮುಖರ್ಜಿ ನಿಧನರಾಗುತ್ತಾರೆ. ಶ್ಯಾಮ್ ಪ್ರಸಾದ್ ಮುಖರ್ಜಿಯವರಿಗೆ ಒಗ್ಗದ ಇಂಜೆಕ್ಷನ್ ಕೊಟ್ಟು ಸಾಯಿಸಲಾಯಿತು ಅನ್ನೋ ಆರೋಪ ಬರುತ್ತದೆ.
ಇಂದು ನಮ್ಮ ಪಕ್ಷ ಬಲಾಢ್ಯವಾಗಿ ಬೆಳೆದಿದೆ. ವಿಶ್ವದ ಅತೀ ಹೆಚ್ಚು ಕಾರ್ಯಕರ್ತರಿರುವ ಪಕ್ಷ ಬಿಜೆಪಿ. ಅತೀ ಹೆಚ್ಚು ಸಂಸದರು, ಶಾಸಕರು, ದಲಿತ ಸಮಯದಾಯದ ಜನಪ್ರತಿನಿಧಿಗಳಿರುವ ಪಕ್ಷ ಬಿಜೆಪಿ. ನಮ್ಮ ಪಕ್ಷ ದೇಶಕ್ಕೊಂದು ಅಸ್ಮಿತೆ ಕೊಟ್ಟಿದೆ. ರಾಮ ಮಂದಿರ ಮೂಲಕ ಸಾಂಸ್ಕೃತಿಕ ಅಸ್ಮಿತೆ ನೀಡಿದ್ದು, ದೇಶ ಮೊದಲು ಎಂಬ ತತ್ವ ನಮ್ಮ ಪಕ್ಷದ್ದಾಗಿದೆ ಎಂದರು.