ಬೆಂಗಳೂರು: ಸೆಪ್ಟೆಂಬರ್ 11 ರಂದು ಬೆಂಗಳೂರಿನಲ್ಲಿ ನಡೆಯಬೇಕಿದ್ದ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ಮುಂದೂಡಿಕೆಯಾಗಿದೆ. ಸೇವಾ ಚಟುವಟಿಕೆ ಕಾರ್ಯಕ್ರಮ ಮುಕ್ತಾಯವಾದ ನಂತರ ಕಾರ್ಯಕಾರಿಣಿ ನಡೆಸುವ ನಿರ್ಧಾರ ಕೈಗೊಳ್ಳಲಾಗಿದೆ.
ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿದೆ. ಸದ್ಯ ಜನೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ನಡೆಸೋಣ. ಸೆ.11 ರಂದು ನಿಗದಿಯಾಗಿರುವ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಮಳೆ ನಿರ್ವಹಣೆ ಕಾರ್ಯಗಳು ಮುಕ್ತಾಯಗೊಂಡ ನಂತರ ಆಯೋಜಿಸೋಣ. ಸದ್ಯಕ್ಕೆ ಮಳೆ ಹಾನಿ ಸಂತ್ರಸ್ತರಿಗೆ ನೆರವಾಗುವ ಸೇವಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳೋಣ ಎನ್ನುವ ನಿರ್ಧಾರಕ್ಕೆ ಬರಲಾಯಿತು.
ಸೆ.17 ರಂದು ಪ್ರಧಾನಿ ನರೇಂದ್ರ ಮೋದಿ ಜನ್ಮದಿನ. ಅಂದಿನಿಂದ ಅ.2 ರವರೆಗೆ ವಿವಿಧ ಚಟುವಟಿಕೆಗಳು ಆರಂಭಗೊಳ್ಳಲಿದೆ. ರಕ್ತದಾನ ಶಿಬಿರಗಳು, ಕೃತಕ ಅಂಗಾಂಗ ಜೋಡಣೆ ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಮಂಡಲ ಮಟ್ಟದಲ್ಲಿ ಫಲಾನುಭವಿಗಳ ಸಮಾವೇಶವನ್ನು ಆಯೋಜನೆ ಮಾಡಲಾಗುತ್ತದೆ.
ಪ್ರಧಾನಿ ನರೇಂದ್ರ ಮೋದಿ ಸೇವಾ ಕಾರ್ಯಗಳು, ಅವರು ಅಧಿಕಾರಕ್ಕೆ ಬಂದ ನಂತರ ಕೇಂದ್ರ ಸರ್ಕಾರದಲ್ಲಿ ಯಾವೆಲ್ಲ ಬದಲಾವಣೆಗಳಾಗಿದೆ, ಜಾಗತಿಕ ಮಟ್ಟದಲ್ಲಿ ಆಗಿರುವ ಬದಲಾವಣೆ, ದೇಶದಲ್ಲಿನ ವಿಕಾಸ ಎಲ್ಲವನ್ನು ಜನರಿಗೆ ತಿಳಿಸುವ ಕೆಲಸವಾಗಲಿದೆ ಎಂದು ಅರುಣ್ ಸಿಂಗ್ ತಿಳಿಸಿದರು. ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ, ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್, ಪ್ರಧಾನ ಕಾರ್ಯದರ್ಶಿಗಳಾದ ರವಿಕುಮಾರ್, ಸಿದ್ದರಾಜು ಸಭೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ: ಹುಟ್ಟುಹಬ್ಬದಂದು ಕುನೋ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ನೀಡಲಿರುವ ಪ್ರಧಾನಿ ಮೋದಿ