ಬೆಂಗಳೂರು: ಬಿಟ್ ಕಾಯಿನ್ ಹಗರಣ ತನಿಖೆಗೆ ಎಸ್ಐಟಿ ರಚನೆಗೆ ಆದೇಶಿಸಿದ್ದು, ಆದಷ್ಟು ಬೇಗ ತನಿಖೆ ಮುಗಿಸಲಿದ್ದಾರೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಬಿಟ್ ಕಾಯಿನ್ ಹಗರಣ ಬಗ್ಗೆ ತನಿಖೆ ನಡೆಸಲು ಸಿಐಡಿ ಅಡಿ ಎಸ್ಐಟಿ ರಚಿಸಿ ಆದೇಶ ಹೊರಡಿಸಿದ್ದೇವೆ. ಎಸ್ಐಟಿ ಜೊತೆಗೆ ತಾಂತ್ರಿಕ ತಜ್ಞರ ಸಹಾಯ ಬೇಕಾದರೆ ಉಪಯೋಗ ಮಾಡಬಹುದು. ಅದಕ್ಕೆ ಪೂರಕವಾದ ಸರ್ಕಾರಿ ಆದೇಶ ಹೊರಡಿಸಲಾಗುವುದು ಎಂದರು.
ಬಿಟ್ ಕಾಯಿನ್ ಹಗರಣದಲ್ಲಿ ಏನೆಲ್ಲಾ ಮುಚ್ಚಿ ಹಾಕಲಾಗಿದೆ ಅದನ್ನು ಮರು ತನಿಖೆ ಮಾಡುತ್ತೇವೆ. ನಿಜ ಸ್ಥಿತಿ ಏನಿದೆ ಎಂಬ ಬಗ್ಗೆ ತನಿಖೆ ಆಗಲಿದೆ. ಎಡಿಜಿಪಿ ಮನೀಷ್ ನೇತೃತ್ವದಲ್ಲಿ ಎಸ್ಐಟಿ ರಚನೆ ಮಾಡಲಾಗಿದೆ. ಅವರು ತನಿಖೆಗೆ ಯಾವ ತಾಂತ್ರಿಕ ತಜ್ಞರು ಬೇಕು, ಅವರ ಸಹಾಯ ಪಡೆಯಬಹುದು. ಆದಷ್ಟು ಬೇಗ ತನಿಖೆ ಮುಗಿಸುವಂತೆ ಕೇಳಿದ್ದೇವೆ ಎಂದರು.
ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿಯವರ ವೈಎಸ್ಟಿ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ವೈಎಸ್ಟಿ ತೆರಿಗೆ ಬಗ್ಗೆ ನನಗೆ ಗೊತ್ತಿಲ್ಲ. ಅವರು ಯಾವೆಲ್ಲಾ ಎಸ್ ಟಿ ಹಾಕಿದ್ದಾರೆ ಎಂದು ನಮಗೆ ಗೊತ್ತಿಲ್ಲ. ಹೆಚ್ಡಿಕೆ ಈ ಬಾರಿ ಸದನಕ್ಕೆ ಬರುತ್ತೇನೆ ಎಂದಿದ್ದಾರೆ. ಆವಾಗ ಅವರನ್ನೇ ಕೇಳಿ ಎಂದು ತಿಳಿಸಿದರು.
ಬಿಟ್ ಕಾಯಿನ್ ಹಗರಣ ಉನ್ನತ ತನಿಖೆಗೊಳಪಡಿಸುವಂತೆ ಆಗ್ರಹ: ಬಿಟ್ ಕಾಯಿನ್ ಹಗರಣ ಪ್ರಕರಣವನ್ನು ಉನ್ನತಮಟ್ಟದ ತನಿಖೆಗೊಳಪಡಿಸುವಂತೆ ರಾಜ್ಯ ಡಿಜಿ ಮತ್ತು ಐಜಿಪಿ ಅಲೋಕ್ ಮೋಹನ್ ಅವರಿಗೆ ಬೆಂಗಳೂರು ಪೊಲೀಸ್ ಇಲಾಖೆ ಕಳೆದ ವಾರ ಪತ್ರ ಬರೆದಿತ್ತು. ಹಗರಣದ ಹಿಂದೆ ಅಂತಾರಾಷ್ಟ್ರೀಯ ಮಟ್ಟದ ವಂಚನೆ ಜಾಲವಿರುವ ಸಂಶಯ ಹಾಗೂ ಪರಿಣಿತ ವಿಧಿ ವಿಧಾನಗಳಿಂದ ಕೃತ್ಯ ಎಸಗಿರುವುದರಿಂದ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ ವಹಿಸುವಂತೆ ಪತ್ರದಲ್ಲಿ ಮನವಿ ಮಾಡಲಾಗಿತ್ತು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಬಿಟ್ ಕಾಯಿನ್ ಹಗರಣ ಕುರಿತು ಕಾಟನ್ ಪೇಟೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದಲ್ಲಿ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಪ್ರಮುಖ ಆರೋಪಿಯಾಗಿದ್ದ. ಕಳೆದ ಐದಾರು ವರ್ಷಗಳಿಂದ ವಿವಿಧ ಕ್ರಿಪ್ಟೋ ಕರೆನ್ಸಿ ಮಾರಾಟ ಪ್ಲಾಟ್‍ಫಾರ್ಮ್‍ಗಳನ್ನು ಹ್ಯಾಕ್ ಮಾಡಿ ಅವುಗಳಿಂದ ಸಾವಿರಾರು ಬಿಟ್ ಕಾಯಿನ್‍ಗಳನ್ನು ಕದ್ದಿದ್ದ ಎಂದು ಪೊಲೀಸರು ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖಿಸಿದ್ದರು.
ಇದನ್ನೂ ಓದಿ: ಬಿಟ್ ಕಾಯಿನ್ ಪ್ರಕರಣ.. ಉನ್ನತ ತನಿಖೆಗೊಳಪಡಿಸುವಂತೆ ಡಿಜಿ ಮತ್ತು ಐಜಿಪಿಗೆ ಮನವಿ