ಬೆಂಗಳೂರು: ಮಾಜಿ ಜ್ಯೂನಿಯರ್ ಅಂತಾರಾಷ್ಟ್ರೀಯ ಅಥ್ಲೀಟ್ ಬಿಂದುರಾಣಿ ಹಾಗೂ ಶ್ವೇತಾ ಎಂಬವರ ನಡುವೆ ನಿನ್ನೆ ಕಂಠೀರವ ಕ್ರೀಡಾಂಗಣದ ಬಳಿ ನಡೆದಿದ್ದ ವಾಕ್ಸಮರ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಬಿಂದುರಾಣಿ ನೀಡಿದ ದೂರಿನ ಮೇರೆಗೆ ಆರೋಪಿತೆ ಶ್ವೇತಾ ಎಂಬುವರ ಮೇಲೆ ಐಪಿಸಿ 506 ಜೀವ ಬೆದರಿಕೆ, 504 ಶಾಂತಿ ಕದಡುವುದು ಹಾಗೂ 509 ಮಹಿಳಾ ಘನತೆಗೆ ಧಕ್ಕೆ ಸೆಕ್ಷನ್ ಗಳಡಿ ಸಂಪಂಗಿರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಜಿ ಅಥ್ಲೀಟ್ ಬಿಂದುರಾಣಿ ಅವರು ಕ್ರೀಡಾ ಕ್ಷೇತ್ರದಲ್ಲಿ ನಿರೀಕ್ಷಿತ ಪದಕ ಗಳಿಸದಿದ್ದರೂ ಸಾಮಾಜಿ ಜಾಲತಾಣಗಳಲ್ಲಿ ವೈಯಕ್ತಿಕ ಸಾಧನೆ ಉತ್ತಮವಾಗಿದೆ ಎಂದು ಬಿಂಬಿಸಿಕೊಂಡಿರುವ ಬಗ್ಗೆ ಮತ್ತೋರ್ವ ಮಹಿಳಾ ಕ್ರೀಡಾಪಟು ಅಸಮಾಧಾನಗೊಂಡು ನಿನ್ನೆ ಆಕೆಯ ಜೊತೆ ವಾಗ್ವಾದಕ್ಕೆ ಇಳಿದಿದ್ದರು. ಈ ಬಗ್ಗೆ ವಿಡಿಯೊ ವೈರಲ್ ಆಗಿತ್ತು. ಈ ಸಂಬಂಧ ಬಿಂದುರಾಣಿ ಎಂಬುವರು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.
ಏನಿದು ಪ್ರಕರಣ: ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯದ ಅಥ್ಲೀಟ್ ಬಿಂದುರಾಣಿಯ ಮೇಲೆ ಕೋಚ್ ಪತ್ನಿ ಚಪ್ಪಲಿ ತೋರಿಸಿ ಆಕ್ರೋಶ ಹೊರಹಾಕಿರುವ ಘಟನೆ ಸೋಮವಾರ ಬೆಳಗಿನ ಜಾವ ಕಂಠೀರವ ಕ್ರೀಡಾಂಗಣದಲ್ಲಿ ನಡೆದಿರುವುದು ಬೆಳಕಿಗೆ ಬಂದಿತ್ತು. ಬಿಂದುರಾಣಿಯನ್ನು ಕಳ್ಳಿ ಎಂದು ಕರೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ರಾಜ್ಯದ ಹಿರಿಯ ಅಥ್ಲೆಟಿಕ್ಸ್ ಕೋಚ್ ಯತೀಶ್ ಅವರ ಪತ್ನಿ ಶ್ವೇತ ಕ್ರೀಡಾಂಗಣಕ್ಕೆ ಆಗಮಿಸಿ ಬೆಳಗ್ಗೆ ಅಭ್ಯಾಸದ ಸಮಯದಲ್ಲಿ ಬಿಂದುರಾಣಿಗೆ ಅಡ್ಡಗಟ್ಟಿ ನಿಂದಿಸಿದ್ದರು. ನಿಮ್ಮಂತವರಿಂದ ಕರ್ನಾಟಕದ ಮರ್ಯಾದೆ ಹಾಳಾಗುತ್ತಿದೆ. ನಿನಗೆ ಖೇಲ್ ರತ್ನ ಪ್ರಶಸ್ತಿ ಸಿಕ್ಕಿರುವುದು ವೇಸ್ಟ್ ಮತ್ತು ಅದು ದೊಡ್ದ ದುರಂತ ಅನ್ನುವ ರೀತಿಯಲ್ಲಿ ಮಾತನಾಡಿರುವುದು ವಿಡಿಯೋದಲ್ಲಿ ಕಂಡುಬಂದಿತ್ತು. ಮುಂದುವರೆದು ಶ್ವೇತ ಬಿಂದುರಾಣಿಗೆ ಚಪ್ಪಲಿ ತೋರಿಸಿ ನೀನು ಕಳ್ಳಿ, ಲಕ್ಷಾಂತರ ಮೌಲ್ಯದ ಕ್ರೀಡಾ ಸಾಮಗ್ರಿಯನ್ನು ಕದ್ದಿದ್ದೀಯ ಎಂದು ಆರೋಪ ಮಾಡಿದ್ದರು. ಟೆಡ್ ಎಕ್ಸ್ ಶೋನಲ್ಲಿ ಬಿಂದುರಾಣಿ ಭಾಗಹಿಸಿದ್ದರ ಕುರಿತಂತೆ ಶ್ವೇತಾ ತಮ್ಮ ಆಕ್ರೋಶ ಹೊರಹಾಕಿದ್ದರು. ಇದಕ್ಕೆಲ್ಲ ಬಿಂದು ರಾಣಿ ಮಾತ್ರ ಯಾವುದೇ ಉತ್ತರ ಕೊಡದೇ ಸುಮ್ಮನೆ ನಿಂತಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿತ್ತು.
ಈ ಘಟನೆಗೆ ಪ್ರತಿಕ್ರಿಯಿಸಿರುವ ಬಿಂದುರಾಣಿ, "ಕಂಠೀರವ ಸ್ಟೇಡಿಯಂ ಗ್ರೂಪ್‌ನಲ್ಲಿ ನನ್ನ ಟೆಡ್ ಎಕ್ಸ್ ಶೋ ಬಗ್ಗೆ ವಾಟ್ಸ್ಆ್ಯಪ್ ಗ್ರೂಪ್‌ನಲ್ಲಿ ಯತೀಶ್ ಪೋಸ್ಟ್ ಮಾಡಿದ್ದರು. ನಾನು ಖೇಲ್ ರತ್ನ ಸ್ಟಾರ್ ಅಲ್ಲ ಎಂದೆಲ್ಲ ಹಾಕಿದ್ದರು. ಅಥ್ಲೆಟಿಕ್ಸ್ ಹೆಸರಿನಲ್ಲಿ ದುಡ್ಡು ಮಾಡುತ್ತೀಯಾ ಎಂದು ಇನ್ನೊಂದು ಪೋಸ್ಟ್ ಹಾಕಿದ್ದರು. ಈ ವಿಷಯವಾಗಿ ನನ್ನ ಪತಿ ಹಿರಿಯ ಕೋಚ್‌ಗೆ ಫೋನ್ ಮಾಡಿ ಮಾತನಾಡಿದ್ದರು. ಈ ವೇಳೆ, ಯತೀಶ್ ಅವರ ಪತ್ನಿ ಫೋನ್ ರಿಸೀವ್ ಮಾಡಿ ಏಕವಚನದಲ್ಲಿ ಮಾತನಾಡಿದ್ದರು" ಎಂದು ಆರೋಪ ಮಾಡಿದ್ದರು.
ಇದನ್ನೂ ಓದಿ: Bengaluru news: ಕಾಲೇಜು ಬಳಿ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆ... ವಿದ್ಯಾರ್ಥಿ ಸಾವು