ಬೆಂಗಳೂರು: ಅಶೋಕ್ ನಗರದ ಹಿರಿಯ ಪೊಲೀಸ್ ಅಧಿಕಾರಿಗಳ ಮೆಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ, ಡಿ. ಜೆ. ಹಳ್ಳಿ ಮತ್ತು ಕೆ. ಜಿ. ಹಳ್ಳಿ ಗಲಭೆಯಲ್ಲಿ ಪೊಲೀಸ್ ಸಿಬ್ಬಂದಿಯ ಬೈಕ್ ಗಳಿಗೆ ದುಷ್ಕರ್ಮಿಗಳು ಬೆಂಕಿ ಇಟ್ಟ ಕಾರಣ ಬೈಕ್ ಸುಟ್ಟು ಹೋಗಿದ್ದವು. ಅಂದು ಬೈಕ್ ಕಳೆದುಕೊಂಡ ಪೊಲೀಸ್ ಸಿಬ್ಬಂದಿಗೆ ಹೊಸ ಬೈಕ್ ಗಳನ್ನ ಗೃಹ ಸಚಿವ ಬಸವರಾಜ ಬೊಮ್ಮಾಯಿ ಇಂದು ವಿತರಿಸಿದರು.
ಆಗಸ್ಟ್ 11 ರಂದು ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿಯಲ್ಲಿ ನಡೆದಿದ್ದ ಗಲಭೆಯಿಂದ 25ಕ್ಕೂ ಹೆಚ್ಚು ಕರ್ತವ್ಯನಿರತ ಪೊಲೀಸರ ಬೈಕ್ ಗಳು ಬೆಂಕಿಗೆ ಆಹುತಿಯಾಗಿದ್ದವು. ಬಹುತೇಕ ಬೈಕ್ಗಳನ್ನು ಡಿ. ಜೆ. ಹಳ್ಳಿ ಪೊಲೀಸ್ ಠಾಣೆ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಲಾಗಿತ್ತು. ಬೆಂಕಿಯ ಕೆನ್ನಾಲಿಗೆ ಹಾಗೂ ಕಿಡಿಗೇಡಿಗಳ ದಾಂಧಲೆಯಿಂದ ಬೈಕ್ಗಳನ್ನ ಹೊರಗೆ ತರಲು ಸಾಧ್ಯವಾಗದೆ ಇದ್ದ ಕಾರಣ ಅವು ಸುಟ್ಟು ಕರಕಲಾಗಿದ್ದವು.
ಹೀಗಾಗಿ 25 TVS ಅಪಾಚೆ RTR ಬೈಕ್ಗಳನ್ನ ಉಚಿತವಾಗಿ ವಿತರಣೆ ಮಾಡಲಾಗಿದೆ. ಬೈಕ್ ವಿತರಣೆ ಬಳಿಕ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಪೊಲೀಸ್ ವ್ಯವಸ್ಥೆ ಇಲ್ಲದೆ ನಮ್ಮ ಜೀವನ ಕಲ್ಪನೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಡಿ. ಜೆ. ಹಳ್ಳಿ ಗಲಭೆ ವೇಳೆ ಠಾಣೆ ಸೇರಿದಂತೆ ಪೊಲೀಸರ ವಾಹನ ನಾಶವಾಗಿವೆ. ಜೊತೆಗೆ ಪೊಲೀಸ್ ಸಿಬ್ಬಂದಿಯ ಸ್ವಂತ ಬೈಕ್ ಗಳು ಸಹ ಭಸ್ಮವಾಗಿದ್ದವು. ಇದರಿಂದ ಸಿಬ್ಬಂದಿಗೆ ಬೈಕ್ ಇಲ್ಲವಾದ್ದರಿಂದ ಕಮಿಷನರ್ ಅವರು ಟಿವಿಎಸ್ ಕಂಪನಿ ಜೊತೆ ಮಾತನಾಡಿದ್ದರು. ಅವರು ಒಪ್ಪಿಕೊಂಡು 25 ಬೈಕ್ಗಳನ್ನ ಕೊಡುತ್ತಿದ್ದಾರೆ ಎಂದು ಹೇಳಿದರು.