ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಯಾವುದೇ ರೀತಿಯ ಮಾನಹಾನಿಕರ ಹೇಳಿಕೆಗಳನ್ನು ಮಾಧ್ಯಮಗಳು ಹಾಗೂ 60ನೇ ಪ್ರತಿವಾದಿಯಾಗಿರುವ ಐಪಿಎಸ್ ಅಧಿಕಾರಿ ಡಿ ರೂಪಾ ಮೌದ್ಗಿಲ್ ಅವರಿಗೆ ನಗರದ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡಿ ಆದೇಶಿಸಿದೆ.
ತಮ್ಮ ವಿರುದ್ಧ ಯಾವುದೇ ಮಾನಹಾನಿಕರ ಹೇಳಿಕೆಗಳನ್ನು ನೀಡದಂತೆ ಆದೇಶ ನೀಡುವಂತೆ ಕೋರಿ ರೋಹಿಣಿ ಸಿಂಧೂರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ 74ನೇ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ, ಅರ್ಜಿದಾರರ ವಿರುದ್ಧ ಮಾನಹಾನಿಕರ, ನಕಾರಾತ್ಮಕ ಪರಿಣಾಮ ಬೀರುವುದು ಮತ್ತು ಚಾರಿತ್ರ್ಯ ವಧೆಯಾಂತಹ ಯಾವುದೇ ಹೇಳಿಕೆಗಳನ್ನು ನೀಡಬಾರದು ಎಂದು ಸೂಚನೆ ನೀಡಿದೆ.
ಅಲ್ಲದೆ, ಪ್ರಕರಣದ 60ನೇ ಪ್ರತಿವಾದಿಯಾಗಿರುವ ಡಿ ರೂಪಾ ಮೌದ್ಗಿಲ್ ಅವರಿಗೆ ತುರ್ತು ನೋಟಿಸ್ ಜಾರಿ ಮಾಡಿದ್ದು, ಮಾರ್ಚ್ 7 ರಂದು ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿ ವಿಚಾರಣೆ ಮುಂದೂಡಿದೆ. ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿ, ಅರ್ಜಿದಾರರಾದ ರೋಹಿಣಿ ಸಿಂಧೂರಿ ಮತ್ತು 60ನೇ ಪ್ರತಿವಾದಿ ರೂಪಾ ಅವರು ಸಾರ್ವಜನಿಕ ಸೇವಕರಾಗಿದ್ದು, ಸರ್ಕಾರದಲ್ಲಿ ಜವಾಬ್ದಾರಿಯುತ ಹುದ್ದೆಯಲ್ಲಿದ್ದಾರೆ. ದುರದೃಷ್ಟಕರವೆಂದರೆ ಸಾರ್ವಜನಿಕ ಸೇವಕರ ನಡತೆಯು ಸಿವಿಲ್ ನ್ಯಾಯಾಲಯದ ವ್ಯಾಪ್ತಿಗೆ ಬಂದಿದೆ.
ಪರಿಸ್ಥಿತಿ ಹೀಗಿರುವ ಹಿನ್ನೆಲೆಯಲ್ಲಿ ರೂಪಾ ವಿರುದ್ಧದ ತಾತ್ಕಾಲಿಕ ಪ್ರತಿಬಂಧಕಾದೇಶವು ಸಾರ್ವಜನಿಕ ಸೇವಕರ ನಡತೆ, ಕರ್ತವ್ಯ ಮತ್ತು ಕಾರ್ಯ ಚಟುವಟಿಕೆಯ ಮೇಲೆ ಪರಿಣಾಮ ಬೀರುವುದಿಲ್ಲ. ಹೀಗಾಗಿ, ತಾತ್ಕಾಲಿಕ ಪ್ರತಿಬಂಧಕಾದೇಶದ ತುರ್ತು ನೋಟಿಸ್ ಅನ್ನು ರೂಪಾ ಅವರಿಗೆ ನೀಡಬೇಕು. ಹಾಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಫಿರ್ಯಾದಿ ರೋಹಿಣಿ ಯಾವುದೇ ತೆರನಾದ ಅಭಿಪ್ರಾಯ ಅಥವಾ ಹೇಳಿಕೆಯನ್ನು ನೀಡದಂತೆ ನಿರ್ದೇಶನ ನೀಡಬೇಕು ಎಂದು ಕೋರಿದ್ದರು.
ಅಲ್ಲದೆ, ರೋಹಿಣಿ ಅವರ ವಿರುದ್ಧ ನಕಾರಾತ್ಮಕ ಅಥವಾ ಮಾನಹಾನಿ ಉಂಟು ಮಾಡುವ ರೀತಿಯಲ್ಲಿ ಬಿಂಬಿಸುವ ಯಾವುದೇ ವಿಡಿಯೊ, ಚಿತ್ರ, ಅಭಿಪ್ರಾಯವನ್ನು ಪ್ರಕಟಿಸದಂತೆ ಪ್ರತಿವಾದಿಗಳ ವಿರುದ್ಧ ಏಕಪಕ್ಷೀಯ ಮಧ್ಯಂತರ ಆದೇಶ ಮಾಡಬೇಕು ಎಂದು ಕೋರಿದ್ದರು. ಈ ಮನವಿಯನ್ನು ಪರಿಗಣಿಸಿ ನ್ಯಾಯಾಲಯ ಈ ಆದೇಶ ನೀಡಿದೆ.
ಬೆಂಬಲಿಸಿದವರಿಗೆ ಧನ್ಯವಾದ ಅರ್ಪಿಸಿದ ಡಿ. ರೂಪಾ: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಮಾನಹಾನಿಕರ ಹೇಳಿಕೆ ನೀಡದಂತೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿ ಆಕ್ಷೇಪಣಾ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿದ ಬೆನ್ನಲ್ಲೇ ಐಪಿಎಸ್ ಅಧಿಕಾರಿ ಡಿ. ರೂಪಾ ಮತ್ತೆ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ತಮಗೆ ಬೆಂಬಲಿಸಿದವರಿಗೆ ರೂಪಾ ಧನ್ಯವಾದ ಅರ್ಪಿಸಿದ್ದಾರೆ. 'ಆತ್ಮೀಯ ಸ್ನೇಹಿತರೇ ಮತ್ತು ಹಿತೈಷಿಗಳೇ, ನಿಮ್ಮೆಲ್ಲರಿಂದ ಹರಿದುಬರುತ್ತಿರುವ ಅಪಾರ ಬೆಂಬಲದಿಂದ ನನಗೆ ಸಂತಸವಾಗಿದೆ. ನನ್ನ ಮೆಸೇಜ್ ಬಾಕ್ಸ್ ನಿಮ್ಮ ಬೆಂಬಲ ಮತ್ತು ಕಾಳಜಿಯ ಸಂದೇಶಗಳಿಂದ ತುಂಬಿದೆ. ಧನ್ಯವಾದಗಳು. ನನಗೆ ಮಾತನಾಡಲು ಅವಕಾಶ ಕೊಡುತ್ತಿರುವ ಗೌರವಾನ್ವಿತ ನ್ಯಾಯಾಲಯಕ್ಕೆ ನಾನು ಅತ್ಯಂತ ಕೃತಜ್ಞನಾಗಿದ್ದೇನೆ. ನಾನು ಗೌರವಾನ್ವಿತ ನ್ಯಾಯಾಲಯದ ಮುಂದೆ ನನ್ನ ಮನವಿಯನ್ನು ಸಲ್ಲಿಸುತ್ತೇನೆ. ಸತ್ಯಮೇವ ಜಯತೇ' ಎಂದು ಫೇಸ್ಬುಕ್ನಲ್ಲಿ ರೂಪಾ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: 'ಮಾನಹಾನಿ ಹೇಳಿಕೆ ನೀಡದಂತೆ ನಿರ್ಬಂಧಿಸಿ': ರೂಪಾ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ರೋಹಿಣಿ ಸಿಂಧೂರಿ