ಬೆಂಗಳೂರು: ಪಾದರಾಯನಪುರದಲ್ಲಿ ಕರ್ತವ್ಯ ನಿರ್ವಹಣೆ ಮಾಡಿದ ಜೆ.ಜೆ. ನಗರ ಠಾಣೆಯ 43 ವರ್ಷದ ಹೆಡ್ ಕಾನ್ಸ್‌ಟೆಬಲ್ ಒಬ್ಬರಿಗೆ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆ ಜೆ.ಜೆ ನಗರ ಠಾಣೆಯನ್ನ ಸೀಲ್ಡೌನ್ ಮಾಡಲು ಆರೋಗ್ಯಾಧಿಕಾರಿಗಳು ಹಾಗೂ ಬಿಬಿಎಂಪಿ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
ಆದರೆ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿ ನಂತರ ಸೀಲ್ಡೌನ್ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ನಗರ ಆಯುಕ್ತ ಭಾಸ್ಕರ್ ರಾವ್ ಅವರು ತಿಳಿಸಿದ್ದಾರೆ.
ಜೆಜೆಆರ್ ನಗರ ಪೊಲೀಸ್ ಸಿಬ್ಬಂದಿಗೆ ಕೊರೊನಾ ಪಾಸಿಟಿವ್
ಸೋಂಕಿತ ಹೆಡ್ ಕಾನ್ಸ್‌ಟೆಬಲ್ ಅತೀ ಹೆಚ್ಚು ಕೊರೊನಾ ಸೋಂಕಿತ ಪ್ರದೇಶವಾದ ಪಾದರಾಯನಪುರದ ಬಳಿ ಭದ್ರತೆ ಕಾರ್ಯ ನಿರ್ವಹಿಸಿ ಠಾಣೆಗೆ ಕೂಡ ಓಡಾಡಿದ್ರು. ಪಾಸಿಟಿವ್ ಪತ್ತೆಯಾದ ಪಾದರಾಯನಪುರ ಕಾರ್ಪೊರೇಟರ್ ಇಮ್ರಾನ್ ಪಾಷಾ ಅವರು ರಂಜಾನ್ ಪ್ರಯುಕ್ತ ಏರ್ಪಡಿಸಿದ್ದ ಬಿರಿಯಾನಿ ಊಟದ ಕಾರ್ಯಕ್ರಮ ವೇಳೆ ಕೊರೊನಾ ಸೋಂಕಿಗೆ ತುತ್ತಾಗಿರುವ ಹೆಡ್ ಕಾನ್ಸ್‌ಟೆಬಲ್ ಕೂಡ ಇದ್ದರು. ಹೀಗಾಗಿ ಸದ್ಯ ಠಾಣೆಯ ಹಲವು ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಿ ಕೊರೊನಾ ಟೆಸ್ಟ್ ಮಾಡಲಾಗಿದೆ. ಹೀಗಾಗಿ ಇವರೆಲ್ಲರ ವರದಿ ಆಧಾರದ ಮೇರೆಗೆ ಠಾಣೆ ಸೀಲ್ಡೌನ್ ಮಾಡುವ ನಿರ್ಧಾರ ಮಾಡಲಾಗುತ್ತದೆ ಎಂದ್ರು.
ಪದೇ ಪದೇ ಕೊರೊನಾ ಪ್ರಕರಣಗಳು ಕಾಣಿಸಿಕೊಂಡ ಹಿನ್ನೆಲೆ ಡಿಜಿಯವರು ಇಂದು ಮಾರ್ಗಸೂಚಿ ಹೊರಡಿಸ್ತಾರೆ. ಸದ್ಯ ಜೆ.ಜೆ. ನಗರ ಪೊಲೀಸ್ ಠಾಣೆಯ ಬಗ್ಗೆ ಪಶ್ಚಿಮ ವಿಭಾಗ ಡಿಸಿಪಿ ರಮೇಶ್ ಬಾನೋತ್ ಹಾಗೂ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದ್ರ ಮುಖರ್ಜಿಯವರು ಪರಿಶೀಲನೆ ನಡೆಸಿ ಡಿಜಿಯವರಿಗೆ ರಿಪೋರ್ಟ್ ನೀಡಲಿದ್ದು, ಹೆಚ್ಚು ಮಂದಿಗೆ ಕೊರೊನಾ ಸೋಂಕು ಲಕ್ಷಣ ಇದ್ರೆ ಸೀಲ್ಡೌನ್ ಮಾಡುವ ನಿರ್ಧಾರ ತೆಗೆದುಕೊಳ್ಳವುದಾಗಿ ಭಾಸ್ಕರ್ ರಾವ್ ತಿಳಿಸಿದ್ದಾರೆ.