ಬೆಂಗಳೂರು : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಪರ ಸಂಘಟನೆಗಳು ಇಂದು ಭಾರತ್ ಬಂದ್ಗೆ ಕರೆ ನೀಡಿವೆ. ಹಾಗಾಗಿ, ರಾಜ್ಯ ರೈತ ಸಂಘಟನೆಗಳು, ಕಾರ್ಮಿಕ, ದಲಿತ, ಕನ್ನಡಪರ, ವಿದ್ಯಾರ್ಥಿ ಸಂಘಟನೆಗಳು, ವರ್ತಕರು ಬೆಂಬಲ ಸೂಚಿಸಿದ್ದಾರೆ. ಕೆಲ ಸಂಘಟನೆಗಳು ಬಂದ್ಗೆ ನೈತಿಕ ಬೆಂಬಲ ಸೂಚಿಸಿದ್ದು, ಕೆಲಸ ಕಾರ್ಯಗಳು ಯಥಾಸ್ಥಿತಿಯಲ್ಲಿ ನಡೆಯುತ್ತವೆ.
ಬೃಹತ್ ಪ್ರತಿಭಟನಾ ರ‍್ಯಾಲಿ:
ಇಂದು ರಾಜಧಾನಿಯಲ್ಲಿ ರೈತ ಪರ ಸಂಘಟನೆಗಳಿಂದ ಪ್ರತಿಭಟನೆ, ಮೆರವಣಿಗೆ, ಹೆದ್ದಾರಿ ಬಂದ್ಗೆ ಸಿದ್ಧತೆ ನಡೆದಿದೆ. ಬೆಳಗ್ಗೆ 11 ಗಂಟೆಗೆ ಟೌನ್ ಹಾಲ್ನಿಂದ ಮೈಸೂರು ಬ್ಯಾಂಕ್ ಸರ್ಕಲ್ವರೆಗೆ ರೈತರಿಂದ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಯಲಿದೆ. ಕೆ.ಆರ್. ಮಾರುಕಟ್ಟೆಯಿಂದ ಟೌನ್ ಹಾಲ್ವರಗೆ ಸಾವಿರಾರು ರೈತರು ಜಾಥಾ ನಡೆಸಲಿದ್ದಾರೆ. ಹೀಗಾಗಿ ಕೆಲಸಕ್ಕೆ ತೆರಳುವವರು ಮುಂಚಿತವಾಗಿಯೇ ಮನೆಯಿಂದ ಹೊರಡಬೇಕು. ಇಲ್ಲವಾದಲ್ಲಿ ಟ್ರಾಫಿಕ್ ಸುಳಿಯಲ್ಲಿ ಸಿಲುಕಬೇಕಾಗುತ್ತದೆ.
ಬಸ್, ಆಟೋ, ಮೆಟ್ರೋ ಸಂಚಾರ ಯಥಾಸ್ಥಿತಿ
ದೂರದ ಊರಿಗೆ ಪ್ರಯಾಣ ಮಾಡುವವರಿಗೆ ಯಾವುದೇ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಸೂಕ್ತ ಪೊಲೀಸ್ ರಕ್ಷಣೆಯೊಂದಿಗೆ ಓಡಾಟ ನಡೆಸಲಿದೆ. ಎಂದಿನಂತೆ ಬಿಎಂಟಿಸಿ, ನಮ್ಮ ಮೆಟ್ರೋ ಸೇವೆಗಳು ಇರಲಿವೆ. ಲಾರಿಗಳ ಓಡಾಟ ಎಂದಿನಂತಿದ್ದು, ಮಾಲೀಕರು ನೈತಿಕ ಬೆಂಬಲವಷ್ಟೇ ನೀಡಲು ತೀರ್ಮಾನಿಸಿದ್ದಾರೆ. ಸೋಮವಾರ ಓಲಾ, ಉಬರ್ ಟ್ಯಾಕ್ಸಿ ಸೇವೆಯೂ ಲಭ್ಯವಿರಲಿದೆ.
ಹೋಟೆಲ್ ಉದ್ಯಮ ಬಂದ್ ಇಲ್ಲ:
ರಾಜ್ಯದಲ್ಲಿ ಎಂದಿನಂತೆ ಹೋಟೆಲ್ & ರೆಸ್ಟೋರೆಂಟ್ ಸೇವೆ ಇರಲಿದೆ. ಹೋಟೆಲ್ ಉದ್ಯಮ, ಬಂದ್ಗೆ ನೈತಿಕ ಬೆಂಬಲವನ್ನಷ್ಟೇ ನೀಡಿದ್ದಾರೆ. ಕೊರೊನಾದಿಂದ ಸಂಕಷ್ಟದಲ್ಲಿದ್ದೇವೆ. ಹೋಟೆಲ್ ಹಾಗೂ ರೆಸ್ಟೋರೆಂಟ್ ಮುಚ್ಚಿದರೆ ತೊಂದರೆಯಾಗುತ್ತೆ. ಒಂದು ದಿನದ ಹೋಟೆಲ್ ಉದ್ಯಮ ಬಂದ್ನಿಂದಾಗಿ, ರೈತರು ಬೆಳೆದ ಹಣ್ಣು-ತರಕಾರಿಗಳು ವ್ಯರ್ಥವಾಗುತ್ತವೆ. ಹೀಗಾಗಿ ರೈತರನ್ನು ಪ್ರೋತ್ಸಾಹಿಸಲು ನೈತಿಕ ಬೆಂಬಲವಷ್ಟೇ ನೀಡುವುದಾಗಿ ತಿಳಿಸಿದ್ದಾರೆ. ಬೀದಿಬದಿ ವ್ಯಾಪಾರಿಗಳಿಂದ ಬಂದ್ಗೆ ಬೆಂಬಲ ಇಲ್ಲ. ಇಂದು ಎಂದಿನಂತೆ ಕರ್ತವ್ಯ ನಿರ್ವಹಿಸಲು ಬೀದಿ ಬದಿ ವ್ಯಾಪಾರಿಗಳು ನಿರ್ಧರಿಸಿದ್ದಾರೆ.
ಮಾರುಕಟ್ಟೆ ವ್ಯಾಪಾರಕ್ಕಿಲ್ಲ ಅಡ್ಡಿ:
ಎಂದಿನಂತೆ ಯಶವಂತಪುರ ಎಪಿಎಂಸಿ ಮಾರುಕಟ್ಟೆ ಎಂದಿನಂತೆ ಓಪನ್ ಇರಲಿದೆ ಅಂತಾ ಕಾರ್ಮಿಕ ಸಂಘದ ಅಧ್ಯಕ್ಷ ಅರುಣ್ ಪರಮೇಶ್ ಹೇಳಿದ್ದಾರೆ.
ಯಾವೆಲ್ಲ ಹೆದ್ದಾರಿ ಬಂದ್ ಆಗಲಿವೆ?
ಕೃಷಿ ಮಸೂದೆಗಳನ್ನ ಖಂಡಿಸಿ ಹೆದ್ದಾರಿಗಳನ್ನು ಬಂದ್ ಮಾಡಲು ರೈತ ಸಂಘಟನೆಗಳು ನಿರ್ಧರಿಸಿವೆ. ಹೀಗಾಗಿ, ವಾಹನ ಸವಾರರು ಈ ಮಾರ್ಗದಲ್ಲಿ ಓಡಾಡುವ ಮುನ್ನ ಎಚ್ಚರದಿಂದಿರಿ.
ಹಳೆ ಮದ್ರಾಸ್ ರೋಡ್ ಬಂದ್, ಬೆಂಗಳೂರು ಟು ಗೋವಾ ರಾಷ್ಟ್ರೀಯ ಹೆದ್ದಾರಿ, ಬೆಂಗಳೂರು ಟು ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ, ಬೆಂಗಳೂರು ಟು ಚೆನ್ನೈ ರಾಷ್ಟ್ರೀಯ ಹೆದ್ದಾರಿ, ಬೆಂಗಳೂರು ಟು ಮೈಸೂರು ರೋಡ್ ರಾಜ್ಯ ಹೆದ್ದಾರಿ, -ಬೆಂಗಳೂರು ಟು ಚಾಮರಾಜನಗರ ರಾಜ್ಯ ಹೆದ್ದಾರಿ, ಬೆಂಗಳೂರು ಟು ಮಾಗಡಿ ರೋಡ್ ರಾಜ್ಯ ಹೆದ್ದಾರಿ, ಬೆಂಗಳೂರು ಟು ಶಿವಮೊಗ್ಗ ರಾಜ್ಯ ಹೆದ್ದಾರಿ, ಬೆಂಗಳೂರು ಟು ದೊಡ್ಡಬಳ್ಳಾಪುರ ರಾಜ್ಯ ಹೆದ್ದಾರಿ ಬಂದ್ ಆಗಲಿವೆ.
ಶಾಲಾ ಕಾಲೇಜುಗಳಿಗಿಲ್ಲ ರಜೆ
ಶಾಲಾ-ಕಾಲೇಜಿಗೆ ಯಾವುದೇ ರಜೆ ಇರುವುದಿಲ್ಲ. ಬದಲಿಗೆ ಎಂದಿನಂತೆ ಶಾಲಾ - ಕಾಲೇಜು ತರಗತಿಗಳು ನಡೆಯಲಿವೆ. ಇತ್ತ ಇಂದು ಎಸ್ಎಸ್ಎಲ್ಸಿ ಪೂರಕ ಪರೀಕ್ಷೆ ನಡೆಯಲಿದ್ದು, ಪರೀಕ್ಷಾರ್ಥಿಗಳು ಒಂದು ಗಂಟೆ ಮುಂಚಿತವಾಗಿ ಕೇಂದ್ರಕ್ಕೆ ಬರುವಂತೆ ಸೂಚಿಸಲಾಗಿದೆ.
ಇದನ್ನೂ ಓದಿ: 16 ವರ್ಷಗಳ ಬಳಿಕ ಸಿಕ್ತು ಯೋಧನ ಶವ; ವೀರಪುತ್ರನ ಕೊನೆಯ ಬಾರಿ ನೋಡಲು ಪೋಷಕರೇ ಇಲ್ಲ