ಬೆಂಗಳೂರು: ಆಶೋಕ ನಗರ ಠಾಣಾ ವ್ಯಾಪ್ತಿಯಲ್ಲಿ ರೌಡಿ ಶೀಟರ್ ರವಿವರ್ಮನನ್ನು ವಿರೋಧಿ ಗುಂಪು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದು ಎನ್ನಲಾದ ವಿಡಿಯೋ ದೊರೆತಿದೆ.
ಏಳೆಂಟು ಮಂದಿ ಮಾರಕಾಸ್ತ್ರ ಹಿಡಿದು ರವಿವರ್ಮನ ಮೇಲೆ ಸಿನಿಮೀಯ ಶೈಲಿಯಲ್ಲಿ ದಾಳಿ ಮಾಡಿದ್ದಾರೆ. ಘಟನೆ ಸಂಬಂಧ ಈಗಾಗಲೇ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಈ ಪೈಕಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿದ್ದ ರೌಡಿ ಶೀಟರ್ ದಿನೇಶ್ನನ್ನು ಬಂಧಿಸಿದ ಪೊಲೀಸರು, ನಿನ್ನೆ ಮಧ್ಯಾಹ್ನ ಅಶೋಕ ನಗರ ಠಾಣಾ ವ್ಯಾಪ್ತಿಯ ಲಾಂಗ್ ಫೋಡ್ರೆ ರಸ್ತೆಯ ಕ್ರಿಶ್ಚಿಯನ್ ಸೆಮೆಟ್ರಿ ಬಳಿಗೆ ರಿಕವರಿಗೆಂದು ಕರೆದುಕೊಂಡು ಹೋಗಿದ್ದರು. ಆತ ಪೊಲೀಸರ ಮೇಲೆ ಹಲ್ಲೆ ನಡೆಸಿ ಎಸ್ಕೇಪ್ ಆಗಲು ಯತ್ನಿಸಿದ್ದ. ಘಟನೆಯಲ್ಲಿ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು. ಆತ್ಮ ರಕ್ಷಣೆಗಾಗಿ ಇನ್ಸ್ಪೆಕ್ಟರ್ ಭರತ್, ಆರೋಪಿ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದರು.
ಇದನ್ನೂ ಓದಿ: ರಾಜಧಾನಿಯಲ್ಲಿ ಮತ್ತೊಬ್ಬ ರೌಡಿಶೀಟರ್ ಬರ್ಬರ ಹತ್ಯೆ : ಮರ್ಡರ್ ಮಾಡಿ ದುಷ್ಕರ್ಮಿಗಳು ಎಸ್ಕೇಪ್
ವಿವೇಕ್ ನಗರ ಠಾಣೆಯ ರೌಡಿ ಶೀಟರ್ ರವಿವರ್ಮ ಅಲಿಯಾಸ್ ಅಪ್ಪು (30) ಎಂಬಾತನನ್ನು ದಿನೇಶ್ ಮತ್ತವನ ಗ್ಯಾಂಗ್ ಕಳೆದ ಮಂಗಳವಾರ ಕೊಲೆ ಮಾಡಿತ್ತು.
ಕೊಲೆಯಾಗಿದ್ದ ರವಿವರ್ಮ ಅಪರಾಧ ಪ್ರಕರಣವೊಂದರಲ್ಲಿ ಜೈಲು ಸೇರಿ ಕಳೆದ 2 ವಾರಗಳ ಹಿಂದೆಯಷ್ಟೆ ಬಿಡುಗಡೆಯಾಗಿ ಹೊರ ಬಂದಿದ್ದ. ಮಂಗಳವಾರ ರಾತ್ರಿ 9 ಗಂಟೆಗೆ ಮನೆ ಸಮೀಪದಲ್ಲಿರುವ ರೋಜ್ ಗಾರ್ಡನ್‌ನ ಫಾತಿಮಾ ಗಲ್ಲಿಯಲ್ಲಿರುವ ಅಂಗಡಿಯೊಂದಕ್ಕೆ ಹೋಗಿದ್ದ. ಈತ ಒಂಟಿಯಾಗಿ ಓಡಾಡುವುದನ್ನು ಗಮನಿಸಿದ ಐದಾರು ಮಂದಿ ದುಷ್ಕರ್ಮಿಗಳು, ಏಕಾಏಕಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಭೀಕರವಾಗಿ ಹತ್ಯೆ ನಡೆಸಿದ್ದರು.
ಇದನ್ನೂ ಓದಿ: ರಿಕವರಿಗೆ ಕರೆದೊಯ್ದ ವೇಳೆ ಬಾಲಬಿಚ್ಚಿದ ರೌಡಿಶೀಟರ್ .. ಆತ್ಮರಕ್ಷಣೆಗಾಗಿ ಪೊಲೀಸರಿಂದ ಗುಂಡೇಟು
ಈ ವಿಚಾರ ತಿಳಿದ ಅಶೋಕ ನಗರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣ ಸಂಬಂಧ ಏ.24ರಂದು ಆರು ಜನರನ್ನು ಪೊಲೀಸರು ಬಂಧಿಸಿದ್ದರು. ಈ ಪೈಕಿ ದಿನೇಶ್ನನ್ನು ರಿಕವರಿಗೆ ಕರೆದುಕೊಂಡು ಹೋಗಲಾಗಿತ್ತು. ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರ ವಶಕ್ಕೆ ಪಡೆದುಕೊಳ್ಳುವಾಗ ತಮ್ಮ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.