ಬೆಂಗಳೂರು: ಡಿ. ಜಿ. ಹಳ್ಳಿ ಹಾಗೂ ಕೆ. ಜಿ. ಹಳ್ಳಿ ಪೊಲೀಸ್ ಠಾಣೆಗಳಿಗೆ ನುಗ್ಗಿ ಗಲಭೆ ನಡೆಸಿರುವ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದಂತೆ ಘಟನೆಯ ಗಂಭೀರತೆ ಅರಿತ ಬೆಂಗಳೂರು ನಗರ ಪೊಲೀಸರು, ಗಲಭೆಯ ಹಿಂದಿನ ಸಂಚು, ಕೃತ್ಯಗಳ ಬಗ್ಗೆ ಇಂಚಿಂಚೂ ಮಾಹಿತಿ ಕಲೆ ಹಾಕುತ್ತಿದ್ದಾರೆ. ಅಷ್ಟೇ ಅಲ್ಲ ತನಿಖೆಯನ್ನೂ ಚುರುಕುಗೊಳಿಸುತ್ತಿದ್ದಾರೆ.
ಘಟನೆ ಸಂಬಂಧ 52 ಎಫ್ಐಆರ್ ದಾಖಲಾಗಿ 300ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿದೆ. ಎಲ್ಲ ಆಯಾಮಗಳಿಂದಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಗಲಭೆ ನಡೆದ ರಾತ್ರಿ ಗಲಭೆ ಪೀಡಿತ ಪ್ರದೇಶಗಳಲ್ಲಿ ಆರೋಪಿಗಳು ಓಡಾಡಿರುವ ಬಗ್ಗೆ ತಾಂತ್ರಿಕವಾಗಿ ಸಾಕ್ಷ್ಯ ಹುಡುಕುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ. ಗಲಭೆ ವೇಳೆ ಹಾಗೂ ನಂತರದಲ್ಲಿ ಆರೋಪಿಗಳ ಮೊಬೈಲ್ ನೆಟ್ವರ್ಕ್ಗಳನ್ನು ತಪಾಸಣೆ ನಡೆಸಿ 1 ಲಕ್ಷ ಮೊಬೈಲ್ ನಂಬರ್ಗಳನ್ನು ಟವರ್ ಡಂಪ್ ಮಾಡಿಕೊಂಡಿದ್ದಾರೆ. ಡಂಪ್ ಮಾಡಿದ ನಂಬರ್ಗಳನ್ನು ಹೆಚ್ಚು ಬಾರಿ ಕರೆ ಮಾಡಿ ಮಾತನಾಡಿದ ನಂಬರ್ಗಳು ಎಂದು ವರ್ಗೀಕರಿಸಿ ಪರಿಶೀಲನೆ ನಡೆಸಲಾಗುತ್ತಿದೆ.
ಡಿ. ಜಿ. ಹಳ್ಳಿ ಹಾಗೂ ಕೆ. ಜಿ. ಹಳ್ಳಿ ಠಾಣಾ ವ್ಯಾಪ್ತಿಯ ಎಂಟು ಕಿ.ಮೀ. ವ್ಯಾಪ್ತಿವರೆಗೂ ಸೆರೆಯಾದ ಗಲಭೆ ದೃಶ್ಯಾವಳಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಸಿಸಿಬಿ ತಾಂತ್ರಿಕ ತಂಡವು ಪ್ರತಿಯೊಂದು ವಿಡಿಯೋವನ್ನೂ ಕೂಲಂಕಷವಾಗಿ ಪರಿಶೀಲಿಸುತ್ತಿದೆ. ಗಲಭೆ ನಂತರ ಆರೋಪಿಗಳು ಬಳಸಿದ್ದ ಬೈಕ್ಗಳ ರಿಜಿಸ್ಟರ್ ನಂಬರ್ ಮೂಲಕ ಆರೋಪಿಗಳನ್ನು ಸೆರೆ ಹಿಡಿಯುವ ಕೆಲಸ ಮಾಡಲಾಗುತ್ತಿದೆ. ಜೊತೆಗೆ ಬಂಧಿತ ಆರೋಪಿಗಳು ನೀಡುವ ಸುಳಿವಿನ ಮೇರೆಗೆ ಇನ್ನಿತರ ಗಲಭೆಕೋರರನ್ನು ಸೆರೆಹಿಡಿಯಲಾಗುತ್ತಿದೆ. ಪ್ರತಿ ಆರೋಪಿಗಳಿಂದ ಫಿಂಗರ್ ಪ್ರಿಂಟ್ ಸಂಗ್ರಹ ಮಾಡಲಾಗುತ್ತಿದೆ.
100ಕ್ಕೂ ಹೆಚ್ಚು ರೌಡಿಪಟ್ಟಿ ತೆರೆಯಲು ಚಿಂತನೆ:
ಆರೋಪಿಗಳ ಬಂಧನ ಕೆಲಸ ಮುಗಿದ ನಂತರ ಬಹುತೇಕ ಅರೋಪಿಗಳ ವಿರುದ್ದ ರೌಡಿಶೀಟ್ ತೆರೆಯಲು ಚಿಂತನೆ ನಡೆಸಲಾಗುತ್ತಿದೆ. ಕಮ್ಯೂನಲ್ ಗೂಂಡಾಗಳು ಎನ್ನುವ ರೀತಿ ಪ್ರತ್ಯೇಕ ಪಟ್ಟಿ ಮಾಡಲಾಗುತ್ತಿದೆ. ಪೊಲೀಸರು ಆರೋಪಿಗಳ ವಿರುದ್ದ ಕಾನೂನು ಕ್ರಮಕ್ಕೆ ಮುಂದಾಗಿದ್ದು, ನೂರಕ್ಕೂ ಹೆಚ್ಚು ಎಫ್ಐಆರ್ ದಾಖಲಾಗುವ ಸಾಧ್ಯತೆಯಿದೆ. ಕೋಮು ಗಲಭೆ, ಸರ್ಕಾರಿ ಕೆಲಸಕ್ಕೆ ಅಡ್ಡಿ, ರಾಬರಿ, ಹಲ್ಲೆ, ಸರ್ಕಾರಿ ಆಸ್ತಿಗೆ ಧಕ್ಕೆ ಹೀಗೆ, ವಿವಿಧ ಕೇಸ್ಗಳನ್ನು ದಾಖಲಿಸಲು ಮುಂದಾಗಿದ್ದಾರೆ. ಪ್ರತಿಯೊಬ್ಬ ಆರೋಪಿಯು 20ಕ್ಕಿಂತ ಹೆಚ್ಚು ಕೇಸುಗಳು ದಾಖಲಾಗುವ ಸಾಧ್ಯತೆಯಿದೆ. ಸುಲಭವಾಗಿ ಆರೋಪಿಗಳಿಗೆ ಜಾಮೀನು ಸಿಗಬಾರದು ಎಂಬ ಉದ್ದೇಶದಿಂದ ಪೊಲೀಸರು ಯಾವುದೇ ಸಾಕ್ಷ್ಯ ತಪ್ಪಿ ಹೋಗದಂತೆ ನೋಡಿಕೊಳ್ಳುತ್ತಿದ್ದಾರೆ.