ಬೆಂಗಳೂರು: ಪೊಲೀಸರ ಸೋಗಿನಲ್ಲಿ ಉದ್ಯಮಿ ಮನೆಗೆ ನುಗ್ಗಿ ಚಿನ್ನಾಭರಣ, ನಗದು ದೋಚಿದ್ದ ಹತ್ತಕ್ಕೂ ಅಧಿಕ ಆರೋಪಿಗಳನ್ನು ಪೀಣ್ಯ ಠಾಣಾ ಪೊಲೀಸರು ಬಂಧಿಸಿದ್ದಾರೆ. ಡಿ.4ರಂದು ರಾತ್ರಿ ಹೆಚ್ಎಂಟಿ ಲೇಔಟ್ನಲ್ಲಿರುವ ಎಸ್.ಎನ್.ಆರ್ ಪಾಲಿಫಿಲ್ಮ್ಸ್ ಪ್ಯಾಕೇಜಿಂಗ್ ಕಂಪನಿಯ ಮಾಲೀಕ ಮನೋಹರ್ ಎಂಬವರ ಮನೆಗೆ ನುಗ್ಗಿದ ದುಷ್ಕರ್ಮಿಗಳು 700 ಗ್ರಾಂ ಚಿನ್ನ ಹಾಗೂ 60 ಲಕ್ಷ ರೂಪಾಯಿ ನಗದು ದೋಚಿ ಪರಾರಿಯಾಗಿದ್ದರು.
ರಾತ್ರಿ 7.30ರ ಸುಮಾರಿಗೆ ಮನೋಹರ್ ಮನೆಯಲ್ಲಿರಲಿಲ್ಲ. ಪತ್ನಿ ಸುಜಾತ ಹಾಗೂ ಮಗ ರೂಪೇಶ್ ಮಾತ್ರ ಇದ್ದರು. ಈ ವೇಳೆ ಪೊಲೀಸ್ ಸಿಬ್ಬಂದಿ ದಿರಿಸು ಧರಿಸಿದ್ದ ಆರೋಪಿಗಳ ತಂಡ ಮನೆಗೆ ಬಂದಿತ್ತು. ಮನೋಹರ್ ಮತ್ತವರ ಸಹೋದರರ ನಡುವೆ ಕೌಟುಂಬಿಕ ಕಲಹ ನಡೆಯುತ್ತಿದ್ದುದರಿಂದ ಅದೇ ವಿಚಾರವಾಗಿ ಪೊಲೀಸರು ಬಂದಿರಬಹುದು ಎಂದು ಮನೆಮಂದಿ ಭಾವಿಸಿದ್ದರು. ಆದರೆ ಮನೆಯೊಳಗೆ ಬರುತ್ತಿದ್ದಂತೆ ಪೊಲೀಸರ ವೇಷದಲ್ಲಿದ್ದ ಖದೀಮರು ಏಕಾಏಕಿ ಡ್ಯಾಗರ್ ಹಾಗೂ ಮಚ್ಚುಗಳನ್ನು ತೋರಿಸಿ ಹೆದರಿಸಿದ್ದರು. ರೂಪೇಶ್ ಮೇಲೆ ಹಲ್ಲೆ ಮಾಡಿ, ಸುಜಾತಾ ಅವರ ಮಾಂಗಲ್ಯ ಸರ ಸಹಿತ ಚಿನ್ನಾಭರಣ ಹಾಗೂ ನಗದು ದೋಚಿದ್ದರು. ಮನೆಯಲ್ಲಿನ ಸಿಸಿಟಿವಿ ಡಿವಿಆರ್ ಸಮೇತ ಪರಾರಿಯಾಗಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಪೀಣ್ಯ ಠಾಣಾ ಪೊಲೀಸರು, ನಾಗರಾಜ್ ಎಂಬಾತ ಸೇರಿ ಹತ್ತಕ್ಕೂ ಅಧಿಕ ಆರೋಪಿಗಳನ್ನು ಬಂಧಿಸಿದ್ದಾರೆ. ಕಳೆದ ಒಂದು ವರ್ಷದ ಹಿಂದೆ ಕಂಪನಿಯಲ್ಲಿ ಎರಡು ತಿಂಗಳುಗಳ ಕಾಲ ಕೆಲಸ ಮಾಡಿದ್ದ ನಾಗರಾಜ್, ಇತ್ತೀಚೆಗೆ ಸಂಚು ರೂಪಿಸಿ ಇತರೆ ಆರೋಪಿಗಳೊಂದಿಗೆ ಸೇರಿ ದರೋಡೆ ಮಾಡಿರುವುದು ವಿಚಾರಣೆಯಲ್ಲಿ ಬಯಲಾಗಿದೆ.
ಮಂಪರು ಚಾಕೊಲೆಟ್ ನೀಡಿ ಚಿನ್ನ ಕಳ್ಳತನ: ಮಂಪರು ಬರುವ ಚಾಕೊಲೆಟ್ ನೀಡಿ ಚಿನ್ನ ಕಳ್ಳತನ ಮಾಡಿದ್ದ ಅಂತರರಾಜ್ಯ ಕಳ್ಳನನ್ನು ಧಾರವಾಡ ಶಹರ ಠಾಣೆ ಪೊಲೀಸರು ಬಂದಿಸಿದ್ದಾರೆ. ಮಹಮ್ಮದ್ ಶಮಷೇರ ಬಂಧಿತ ಆರೋಪಿ. ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಮಲ್ಲಿಕಾರ್ಜುನ ವಿಜಾಪುರ ಎಂಬಾತನಿಗೆ ಚಾಕೊಲೆಟ್ ನೀಡಿ ಚಿನ್ನ ಕಳ್ಳತನ ಮಾಡಿದ್ದನು. ನ.9ರಂದು ಧಾರವಾಡದಲ್ಲಿ ಪ್ರಕರಣ ನಡೆದಿತ್ತು.
ಧಾರವಾಡ ಶ್ರೀನಿವಾಸ ಚಿತ್ರಮಂದಿರಕ್ಕೆ ಸಿನಿಮಾ ನೋಡಲು ಹೋದಾಗ ಆರೋಪಿ ಮಹಮ್ಮದ್, ಮಲ್ಲಿಕಾರ್ಜುನ್ ಅವರ ಸ್ನೇಹ ಬೆಳೆಸಿದ್ದ. ಸ್ನೇಹದದಲ್ಲಿಯೇ ಆರೋಪಿ ಚಾಕೊಲೆಟ್ ನೀಡಿದ್ದ. ನಂಬಿಕೆಯಿಂದ ಚಾಕೊಲೆಟ್ ತಿಂದಿದ್ದ ಮಲ್ಲಿಕಾರ್ಜುನ್ ಮೂರ್ಛೆ ಹೋಗಿದ್ದಾನೆ. ಈ ವೇಳೆ ಮೈ ಮೇಲಿದ್ದ ಸುಮಾರು 75 ಸಾವಿರ ರೂ. ಮೌಲ್ಯದ ಚಿನ್ನದ ಸರ ಕದ್ದು ಪರಾರಿಯಾಗಿದ್ದ. ಮೂರ್ಛೆ ಹೋಗಿದ್ದ ಮಲ್ಲಿಕಾರ್ಜುನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಚೇತರಿಸಿಕೊಂಡು ನಂತರ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಇದನ್ನೂ ಓದಿ: ಹಾವೇರಿಯಲ್ಲಿ ಚಿನ್ನದ ವ್ಯಾಪಾರಿ ಅಪಹರಣಕ್ಕೆ ಯತ್ನ: ಐವರು ಆರೋಪಿಗಳ ಬಂಧನ