ಬೆಂಗಳೂರು : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯ ಬಸ್ ನಿಲ್ದಾಣಗಳ ವಾಣಿಜ್ಯ ಮಳಿಗೆಗಳು ಮತ್ತು ಶೌಚಗೃಹಗಳ ಗುತ್ತಿಗೆ ಪರವಾನಗಿ ನವೀಕರಿಸುವಾಗ ವ್ಯವಸ್ಥಾಪಕ ನಿರ್ದೇಶಕರ ಸಹಿ ನಕಲಿ ಮಾಡಿರುವುದು ಬಯಲಾಗಿದ್ದು, ನಿಗಮದ ಸಹಾಯಕ ಭದ್ರತಾ ಮತ್ತು ಜಾಗೃತಾಧಿಕಾರಿ ಸಿ.ಕೆ.ರಮ್ಯಾ ನೀಡಿರುವ ದೂರಿನನ್ವಯ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಾಜಿನಗರ ಬಸ್ ನಿಲ್ದಾಣದ ವಾಣಿಜ್ಯ ಮಳಿಗೆಗಳು ಹಾಗೂ ಶೌಚಗೃಹಗಳ ಗುತ್ತಿಗೆ ಪರವಾನಗಿ ನವೀಕರಣ, ಬಿಟಿಎಂ ಲೇಔಟ್ ಹಾಗೂ ವಿಜಯನಗರದ ಟಿಟಿಎಂಸಿ ಜಾಗದಲ್ಲಿ ಹೆಚ್ಚುವರಿ ಹಂಚಿಕೆ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನಿರ್ದೇಶಕ ಶ್ರೀರಾಮ್ ಮುಲ್ಕಾವಾನ್ ಮತ್ತು ಇತರ ಸಿಬ್ಬಂದಿ ಸೇರಿ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಇತರ ಅಧಿಕಾರಿಗಳ ಸಹಿ ನಕಲು ಮಾಡಿ ನವೀಕರಣದ ಹಣವನ್ನು ತಮ್ಮ ಕಿಸೆಗೆ ಇಳಿಸಿರುವುದು ಪತ್ತೆಯಾಗಿದೆ. ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಬಿಎಂಟಿಸಿ ಸಹಾಯಕ ಭದ್ರತಾ ಮತ್ತು ಜಾಗೃತಾಧಿಕಾರಿ ಸಿ.ಕೆ. ರಮ್ಯಾ ನೀಡಿರುವ ದೂರಿನನ್ವಯ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತ್ಯೇಕ ಎರಡು ಪ್ರಕರಣಗಳು: 46ನೇ ಸಿಸಿಎಚ್ ನ್ಯಾಯಾಲಯ ಇಂದು ಪತ್ನಿಯನ್ನು ಕೊಲೆ ಮಾಡಿ ಸಾಕ್ಷಿ ನಾಶ ಮಾಡಿದ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಮತ್ತೊಂದು ಪ್ರಕರಣದಲ್ಲಿ ಐಪಿಎಸ್ ಅಧಿಕಾರಿಯ ಮದುವೆಯ ಸಂದರ್ಭದಲ್ಲಿ ನೀಡಿದ್ದ ದುಬಾರಿ ಉಡೆಗೊರೆಯನ್ನು ಕಳ್ಳತನ ಮಾಡಿರು ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಪತ್ನಿಯನ್ನ ಹತ್ಯೆ ಮಾಡಿ ಸಾಕ್ಷ್ಯನಾಶಪಡಿಸಿದ್ದ ಆರೋಪಿಗೆ ಸಜೆ: ಪತ್ನಿಯನ್ನು ಹತ್ಯೆ ಮಾಡಿ ಸಾಕ್ಷ್ಯ ನಾಶ ಮಾಡಿದ್ದ ಪತಿಗೆ ಜೀವಾವಧಿ ಶಿಕ್ಷೆ ಜೊತೆಗೆ 7 ವರ್ಷಗಳ ಸಜೆ ಹಾಗೂ ಒಂದು ಸಾವಿರ ರೂ ದಂಡ ವಿಧಿಸಿ ಇಂದು 46ನೇ ಸಿಸಿಎಚ್ ನ್ಯಾಯಾಲಯ ಆದೇಶಿಸಿದೆ. ಕೈಲಾಸ್ ಚಂದ್ ಬೆಹರ್(45) ಶಿಕ್ಷೆಗೊಳಗಾದ ಅಪರಾಧಿ. 2014ರ ಜೂನ್ 19ರಂದು ಪತ್ನಿ ಮಾಲತಿ ಸಾಹು ಎಂಬಾಕೆಯನ್ನು ಆರೋಪಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದ.
6 ವರ್ಷಗಳ ಹಿಂದೆ ಮಾಲತಿ ಸಾಹು ಎಂಬಾಕೆಯನ್ನ ವಿವಾಹವಾಗಿದ್ದ ಉತ್ತರ ಭಾರತ ಮೂಲದ ಕೈಲಾಶ್ ಚಂದ್ ಬೆಹರ್ ಕಾಮಾಕ್ಷಿಪಾಳ್ಯದ ಮನೆಯೊಂದರಲ್ಲಿ ಬಾಡಿಗೆಗೆ ವಾಸವಾಗಿದ್ದ. ಮಾಲತಿ ಸಾಹು ತನ್ನ ಅಕ್ಕ ಮತ್ತು ಸಹೋದರನ ಜತೆ ಹೆಚ್ಚಾಗಿ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಳು. ಹೀಗಾಗಿ ಈಕೆ ಬೇರೆಯವರ ಜತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಕೈಲಾಶ್ ಚಂದ್ ಅನುಮಾನಗೊಂಡಿದ್ದ.
ಅದೇ ಸಂದರ್ಭದಲ್ಲಿ ಆರೋಪಿ ಕೈಲಾಶ್ ಚಂದ್ ತನ್ನ ತಂದೆಗೆ ಕೊಡಲು ಇಟ್ಟಿದ್ದ 2500 ರೂನಲ್ಲಿ ಪತಿಯ ಅನುಮತಿ ಪಡೆಯದೇ ಮಾಲತಿ ಸಾಹು ಒಂದು ಸಾವಿರ ರೂ ತೆಗೆದುಕೊಂಡಿದ್ದಳು. ಅದೇ ವಿಚಾರವಾಗಿ ಜುಲೈ 19ರಂದು ಪತ್ನಿ ಜತೆ ಜಗಳ ತೆಗೆದಿದ್ದ ಆರೋಪಿ ತಲೆ ದಿಂಬಿನಿಂದ ಉಸಿರುಗಟ್ಟಿಸಿ ಅವರನ್ನ ಕೊಲೆ ಮಾಡಿದ್ದ. ಬಳಿಕ ಮೃತದೇಹವನ್ನು ಮಲಗಿಸಿ ಮೈಮೇಲೆ ಬೆಡ್‌ಶೀಟ್ ಹೊದಿಸಿ ಸಾಕ್ಷ್ಯ ನಾಶಪಡಿಸಿದ್ದ.
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಕಾಮಾಕ್ಷಿಪಾಳ್ಯ ಠಾಣೆಯ ಅಂದಿನ ಇನ್ಸ್‌ಪೆಕ್ಟರ್ ಆರ್.ಜಿ.ರವಿಕುಮಾರ್ ಆರೋಪಿಯನ್ನು ಬಂಧಿಸಿ ಕೊಲೆ ಆರೋಪದಡಿ ಆರೋಪಪಟ್ಟಿ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕರಾಗಿ ಕೆ.ಎಸ್.ಲತಾ ವಾದ ಮಂಡಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ 46ನೇ ಸಿಸಿಹೆಚ್ ನ್ಯಾಯಾಲಯದ ನ್ಯಾಯಾಧೀಶರಾದ ಮಂಜುನಾಥ್, ಅಪರಾಧಿಗೆ ಜೀವಾವಧಿ ಶಿಕ್ಷೆ ಜತೆ 7 ವರ್ಷಗಳ ಸಜೆ ಮತ್ತು 1 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.
ಐಪಿಎಸ್ ಅಧಿಕಾರಿಯ ಮದುವೆಯಲ್ಲಿ ಕಳ್ಳರ ಕೈಚಳಕ : ತರಬೇತಿ ನಿರತ ಐಪಿಎಸ್ ಅಧಿಕಾರಿಯ ಮದುವೆಯಲ್ಲಿ ಕಳ್ಳರು ಕೈಚಳಕ ತೋರಿರುವ ಘಟನೆ ಬೆಂಗಳೂರಿನ ಹೈಗ್ರೌಂಡ್ಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಐಪಿಎಸ್ ಅಧಿಕಾರಿ ಮೆಲ್ವಿನ್ ವರ್ಗೀಸ್ ಮದುವೆ ಕಾರ್ಯಕ್ರಮದಲ್ಲಿ ಕಳ್ಳರು ಉಡುಗೊರೆಗಳನ್ನ ಕದ್ದೊಯ್ದಿರುವ ಘಟನೆ ವರದಿಯಾಗಿದೆ.
2022ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿದ್ದು, ಸದ್ಯ ಹೈದರಾಬಾದಿನಲ್ಲಿ ತರಬೇತಿ ನಿರತರಾಗಿರುವ ಮೆಲ್ವಿನ್ ವರ್ಗೀಸ್ ಜನವರಿ 14ರಂದು ವಸಂತನಗರದ ಖಾಸಗಿ ಹೋಟೆಲ್‌ನಲ್ಲಿ ವಿವಾಹವಾಗಿದ್ದರು. ಮದುವೆ ಸಮಾರಂಭದಲ್ಲಿ ವಾಚ್, ದುಬಾರಿ ವಸ್ತುಗಳ ಸಹಿತ ಒಂದು ಲಕ್ಷ ಉಡುಗೊರೆ ಬಂದಿತ್ತು. ಮನೆಗೆ ತೆರಳಿ ಪರಿಶೀಲನೆ ನಡೆಸಿದಾಗ ಒಂದು ಲಕ್ಷ ಮೌಲ್ಯದ ಉಡುಗೊರೆಗಳು ಕಳವು ಆಗಿರುವುದು ಪತ್ತೆಯಾಗಿದೆ. ಹೊಟೇಲ್ನಲ್ಲಿ ಡೆಕೋರೆಟ್ ಮಾಡಲು ಬಂದಿದ್ದ ಸುಂದರ್ ಎಂಬಾತನ ವಿರುದ್ಧ ಅನುಮಾನ ವ್ಯಕ್ತಪಡಿಸಿರುವ ಮೆಲ್ವಿನ್ ವರ್ಗೀಸ್ ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.
ಇದನ್ನೂ ಓದಿ: ಕಾರಿನ ಬಾನೆಟ್ ಮೇಲೆ ಕುಳಿತು ಸ್ಟಂಟ್: ಇಬ್ಬರು ಯುವಕರಿಗೆ ಬಿತ್ತು 27,500 ರೂಪಾಯಿ ದಂಡ