ಬೆಂಗಳೂರು: ಕೆಲ ದಿನಗಳ ಹಿಂದೆ ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ದಾಳಿಯ ಸಂಬಂಧ ಜಿಲ್ಲಾಧಿಕಾರಿ ಮಂಜುನಾಥ್ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಎಸಿಬಿ ನೋಟಿಸ್ ನೀಡಿತ್ತು. ಈ ನೋಟಿಸ್ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳ ಹಿಂದೆ ಡಿಸಿ, ಎಸಿಬಿ ಅಧಿಕಾರಿಗಳ ಮುಂದೆ ಹಾಜರಾಗಿ ಹೇಳಿಕೆ ನೀಡಿದ್ದಾರೆ. ವಿಚಾರಣೆಗೆ ಅಗತ್ಯವಾದರೆ ಮತ್ತೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಮೇ 21ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸ ಮಾಡುವ ಉಪ ತಹಶೀಲ್ದಾರ್/ಮ್ಯಾನೇಜರ್ ಮಹೇಶ್ ಎಂಬವರು ಗುತ್ತಿಗೆ ನೌಕರ ಚೇತನ್ ಆಲಿಯಾಸ್ ಚಂದ್ರು ಎಂಬವರಿಂದ 5 ಲಕ್ಷ ರೂಪಾಯಿ ಲಂಚ ಪಡೆದು ಎಸಿಬಿ ಕೈಗೆ ಸಿಕ್ಕಿಬಿದ್ದಿದ್ದರು. ಈ ಪ್ರಕರಣದಲ್ಲಿ ಜಿಲ್ಲಾಧಿಕಾರಿ ಪಾತ್ರದ ಬಗ್ಗೆ ಆರೋಪ ಕೇಳಿಬಂದಿತ್ತು. ಹೀಗಾಗಿ ಎಸಿಬಿ ತನಿಖಾಧಿಕಾರಿಗಳು ಡಿಸಿ ವಿಚಾರಣೆ ನಡೆಸಿ ಹೇಳಿಕೆ ಪಡೆದುಕೊಂಡಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.
ಮತ್ತಷ್ಟು ವಿವರ: ಬೇಗೂರಿನ ನಿವಾಸಿಯೊಬ್ಬರು ಅನೇಕಲ್ನ ಕೂಡ್ಲು ಗ್ರಾಮದಲ್ಲಿ 38 ಗುಂಟೆ ಜಮೀನು ಹೊಂದಿದ್ದರು. ಡಿಸಿ ಕೋರ್ಟ್‌ನಲ್ಲಿ ವ್ಯಾಜ್ಯ ನಡೆಯುತ್ತಿತ್ತು. ಅರ್ಜಿದಾರರ ಅರ್ಜಿ ಕ್ಲಿಯರ್ ಮಾಡಿಕೊಡಬೇಕಾದರೆ ಆರೋಪಿ ಮಹೇಶ್ ಆರಂಭದಲ್ಲಿ15 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟು ನಂತರ 5 ಲಕ್ಷ ರೂ.ಗೆ ಒಪ್ಪಿಕೊಂಡಿದ್ದರು. ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದರು. ಜಮೀನು ವಿಚಾರವಾಗಿ ದೂರುದಾರರು ಎರಡು ಬಾರಿ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿದ್ದರು ಎನ್ನಲಾಗಿದೆ.
ದೂರುದಾರರು ಭೇಟಿಯಾಗಿದ್ದು ನಿಜವೇ?. ಆರೋಪಿಗಳ ಲಂಚ ಪಡೆದಿದ್ದು ನಿಮ್ಮ ಗಮನಕ್ಕೆ ಬಂದಿತ್ತಾ? ಎಂಬ ಪ್ರಶ್ನೆಗಳೂ ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದ ಹಲವು ವಿಚಾರಗಳ ಬಗ್ಗೆ ವಿಚಾರಣೆ ವೇಳೆ ಡಿಸಿಯಿಂದ ಎಸಿಬಿ ಹೇಳಿಕೆ ದಾಖಲಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ. ವಿಚಾರಣೆಗೆ ಹಾಜರಾಗಿವುದರ ಕುರಿತು ಜಿಲ್ಲಾಧಿಕಾರಿ ಮಂಜುನಾಥ್ ಅವರಿಗೆ ಕರೆ ಮಾಡಿದಾಗ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ.
ಇದನ್ನೂ ಓದಿ: ಜನ್ಮದಿನದಂದು ಪತ್ನಿಗೆ ಚಂದ್ರನ ಮೇಲಿನ ಭೂಮಿಯನ್ನು ಉಡುಗೊರೆಯಾಗಿ ನೀಡಿದ ಪತಿ!