ದೇವನಹಳ್ಳಿ: ವಿಶ್ವದ ಅತ್ಯಂತ ಅಪಾಯಕಾರಿಯಾದ ಎಫೆಡ್ರೈನ್ ಡ್ರಗ್ಸ್ ಸಾಗಣೆ ಮಾಡುತ್ತಿದ್ದ ಜಾಲವನ್ನು ಪತ್ತೆ ಮಾಡುವ ಮೂಲಕ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು 5 ಕೋಟಿ ಮೌಲ್ಯದ 5.115 ಕೆ.ಜಿ. ಎಫೆಡ್ರೈನ್ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ.
ವಿಶ್ವದ ಅತ್ಯಂತ ಅಪಾಯಕಾರಿಯಾದ ಎಫೆಡ್ರೈನ್ ಡ್ರಗ್ಸ್ ವಿವಿಧ ದೇಶಗಳಲ್ಲಿ ನಿಷೇಧ ಮಾಡಲಾಗಿದೆ. ಎಫೆಡ್ರೈನ್ ಡ್ರಗ್ಸ್ ಕೆಲ ರೋಗಗಳ ಚಿಕಿತ್ಸೆಗಾಗಿ ಕ್ಯಾಪ್ಸೂಲ್, ಟ್ಯಾಬ್ಲೆಟ್, ಚುಚ್ಚುಮದ್ದುಗಳ ರೂಪದಲ್ಲಿ ಬಳಕೆ ಮಾಡಲಾಗುತ್ತಿದೆ. ಚೆನ್ನೈ ಮೂಲದ ವ್ಯಕ್ತಿ ಸುಮಾರು 5 ಕೋಟಿ ಮೌಲ್ಯದ 5.115 ಕೆ.ಜಿ. ಎಫೆಡ್ರೈನ್ ಡ್ರಗ್ಸ್ ಅನ್ನು ಬಟ್ಟೆ ಹೊಲಿಗೆ ಯಂತ್ರದಲ್ಲಿ ಬಳಸುವ ಬಾಬಿನ್ಗಳೊಳಗೆ ಇರಿಸಿ ಆಸ್ಟ್ರೇಲಿಯಾಗೆ ಸಾಗಿಸುತ್ತಿದ್ದ.
ಸುಮಾರು 45 ಬಾಬಿನ್ಗಳೊಳಗೆ ಸುರುಳಿ ರೂಪದಲ್ಲಿ ಎಫೆಡ್ರೈನ್ ಡ್ರಗ್ಸ್ ಇಡಲಾಗಿತ್ತು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಗೋ ಮೂಲಕ ಆಸ್ಟ್ರೇಲಿಯಾಗೆ ಕಳಿಸಲಾಗುತ್ತಿತ್ತು. ಈ ಸಂಬಂಧ NDPS ಆಕ್ಟ್ 1985 ಪ್ರಕಾರ ಪ್ರಕರಣ ದಾಖಲಾಗಿದೆ.
ಏನಿದು ಎಫೆಡ್ರೈನ್ ಡ್ರಗ್?
ಎಫೆಡ್ರೈನ್ ಒಂದು ಉತ್ತೇಜಕ ಮತ್ತು ಥರ್ಮೋಜೆನಿಕ್(ಶಾಖ ಉತ್ಪಾದಕ) ಡ್ರಗ್. ಇದನ್ನು ಎಫೆಡ್ರಾ ಎಂದು ಕರೆಯಲ್ಪಡುವ ಮೂಲಿಕೆಯಿಂದ ತಯಾರು ಮಾಡಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಉತ್ತೇಜಕ, ಹಸಿವು ನಿವಾರಕ, ಏಕಾಗ್ರತೆಗೆ ನೆರವು, ಮತ್ತು ಅರಿವಳಿಕೆಗೆ ಸಂಬಂಧಿಸಿದ ಹೈಪೊಟೆನ್ಷನ್ ಚಿಕಿತ್ಸೆಗಾಗಿ ಬಳಸಲಾಗುತ್ತದೆ. ಎಫೆಡ್ರೈನ್ ಉತ್ತೇಜಕಕಾರಿಯಾಗಿರುವುದರಿಂದ ಈ ಡ್ರಗ್ ಅನ್ನು ಸಾಮಾನ್ಯವಾಗಿ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯೇ ಹೆಚ್ಚು.
ಅಪಾಯಕಾರಿ ಎಫೆಡ್ರೈನ್:
ಎಫೆಡ್ರಾ ತ್ವರಿತವಾಗಿ ಹೃದಯ ಬಡಿತ ಮತ್ತು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಇದರ ಅಡ್ಡ ಪರಿಣಾಮಗಳೆಂದರೆ ಹೃದಯ ಬಡಿತ, ವಾಕರಿಕೆ ಮತ್ತು ವಾಂತಿ. ಗಿಡಮೂಲಿಕೆಗಳ ಬಳಕೆಯಿಂದ 800ಕ್ಕೂ ಹೆಚ್ಚು ಅಪಾಯಕಾರಿ ಪ್ರತಿಕ್ರಿಯೆಗಳು ವರದಿಯಾಗಿವೆ. ಇವುಗಳಲ್ಲಿ ಹೃದಯಾಘಾತ, ಪಾರ್ಶ್ವವಾಯು, ರೋಗಗ್ರಸ್ತವಾಗುವಿಕೆಗಳು ಮತ್ತು ಹಠಾತ್ ಸಾವುಗಳು ಸೇರಿವೆ.