ಬೆಂಗಳೂರು : ಬೆಡ್ ಬ್ಲಾಕಿಂಗ್ ಪ್ರಕರಣದಲ್ಲಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಆಪ್ತ ಬಾಬು ಎಂಬುವನನ್ನು ಸಿಸಿಬಿ ವಿಚಾರಣೆಗೊಳಪಡಿಸಿತ್ತು. ಆದರೆ, ಇದೀಗ ಇದ್ದಕ್ಕಿದ್ದಂತೆ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಆತ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂಬ ಮಾಹಿತಿ ತಿಳಿದು ಬಂದಿದೆ.
ಕೋವಿಡ್ ವಾರ್ ರೂಂನಲ್ಲಿ ಬೆಡ್ ಬ್ಲಾಕ್ ದಂಧೆ ನಡೆಯುತ್ತಿದೆ ಎಂದು ಆರೋಪಿಸಿದ್ದ ಸಂಸದ ತೇಜಸ್ವಿ ಸೂರ್ಯ ಪ್ರಕರಣವನ್ನು ಬಯಲಿಗೆಳೆದಿದ್ದರು.
ಈ ಸಂಬಂಧ ಇಬ್ಬರು ವೈದ್ಯರು ಸೇರಿ ನಾಲ್ವರನ್ನು ಸಿಸಿಬಿ ಬಂಧಿಸಿತ್ತು. ಅಲ್ಲದೆ ದಂಧೆಯಲ್ಲಿ ಶಾಸಕ ಸತೀಶ್ ರೆಡ್ಡಿ ಆಪ್ತ ಬಾಬು ಎಂಬುವನನ್ನು ವಶಕ್ಕೆ ಪಡೆದು ಸಿಸಿಬಿ ತೀವ್ರ ವಿಚಾರಣೆಗೆ ಒಳಪಡಿಸಿತ್ತು.
ಶಾಸಕರ ಮಾತಿನಂತೆ ಬೆಡ್ ಬುಕ್ ಮಾಡಿಸುತ್ತಿದ್ದ ಬಾಬು, ಹಣ ಪಡೆದು ಬೆಡ್ ಬುಕ್ ಮಾಡಿದ್ದಾನೆ ಎಂಬ ಆರೋಪ ಈತನ ಮೇಲಿತ್ತು. ಆದರೀಗ ರಕ್ತದೊತ್ತಡ (ಬಿಪಿ) ಹೆಚ್ಚಾಗಿದೆ ಎಂದು ಹೇಳಿ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ತಿಳಿದು ಬಂದಿದೆ.
ಎರಡು ಆಯಾಮಗಳಲ್ಲಿ ಸಿಸಿಬಿ ತನಿಖೆ : ಸಿಸಿಬಿ ಅಧಿಕಾರಿಗಳು ಏಕಕಾಲದಲ್ಲಿ ವಾರ್ ರೂಮ್‌ಗಳಿಗೆ ದಾಳಿ ಮಾಡಿ ಡೇಟಾವನ್ನು ಸಂಗ್ರಹಿಸಿದ್ದು, ಪ್ರತಿವಲಯದಲ್ಲೂ 10ಕ್ಕೂ ಹೆಚ್ಚು ಬೆಡ್ಗಳ ಹಂಚಿಕೆ ನಡೆದಿರುವ ಡೇಟಾವನ್ನು ಸಂಗ್ರಹಿಸಿ ಪರಿಶೀಲನೆ ನಡೆಸುತ್ತಿದೆ.
ತನಿಖೆಯನ್ನು ಎರಡು ಆಯಾಮಗಳಲ್ಲಿ ಮಾಡಲು ಸಿಸಿಬಿ ಅಧಿಕಾರಿಗಳು ಸಜ್ಜಾಗಿದ್ದಾರೆ. ಶಾಸಕ, ಸಂಸದರು ರಾಜಕೀಯ ಪ್ರಭಾವ ಹಾಗೂ ಅಧಿಕಾರಿಗಳ ಪ್ರಭಾವದಿಂದ ಯಾವುದೇ ಹಣಕಾಸಿನ ವ್ಯವಹಾರ ನಡೆಯದೇ ಬೆಡ್ ಬ್ಲಾಕ್ ಆಗಿರುವಂತದ್ದು.
ಇನ್ನೊಂದು ಆಯಾಮದಲ್ಲಿ ಎಲ್ಲ ಪ್ರಭಾವ ಬಳಸಿ ಹಣಕ್ಕಾಗಿ ಬೆಡ್ ಬ್ಲಾಕ್ ಮಾಡಿರುವಂಥದ್ದು. ಈ ಎರಡು ಆಯಾಮದಲ್ಲಿ ಪರಿಶೀಲಿಸಿ ಅಸಲಿ ಆರೋಪಿಗಳ ವಿರುದ್ಧದ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದ್ದಾರೆ.
ಬೆಡ್ ಬ್ಲಾಕ್ ದಂಧೆಯಲ್ಲಿ ಬಿಯು ನಂಬರ್ ಆಧಾರದಲ್ಲಿ ಬ್ಲಾಕ್ ಆಗಿದ್ದ ಬೆಡ್ ಗಳ ಮಾಹಿತಿ ಆಧರಿಸಿ ರೋಗಿಗಳಾಗಿದ್ದವರಿಗೆ ಕರೆಮಾಡಲಾಗುತ್ತಿದೆ. ಈ ವೇಳೆ ಹೋಂ ಐಸೋಲೇಷನ್ ಮತ್ತು ಸತ್ತವರ ಹೆಸರಿನಲ್ಲೂ ಬೆಡ್ ಬ್ಲಾಕ್ ಆಗಿರುವ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಸಿಸಿಬಿ ಪೊಲೀಸರು ವಿಚಾರಣೆಯನ್ನು ಚುರುಕುಗೊಳಿಸಿದ್ದಾರೆ.
ಓದಿ: ಖಾಸಗಿ ಆಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನಿಂಗ್‌ಗೆ 1,500, ಡಿಜಿಟಲ್ ಎಕ್ಸ್‌ರೇಗೆ 250 ರೂ ದರ ನಿಗದಿ