ಬೆಂಗಳೂರು: ಬಿಡಿಎ ನಿರ್ಮಾಣ ಮಾಡಲು ಮುಂದಾಗಿರುವ ಡಾ.ಶಿವರಾಂ ಕಾರಂತ ಬಡಾವಣೆ ನಿರ್ಮಾಣ ಯೋಜನೆಯನ್ನು ಕೈಬಿಡುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ರೈತ ಮುಖಂಡರಿಗೆ ಯಾವುದೇ ಭರವಸೆ ನೀಡಿಲ್ಲ ಎಂದು ಬಿಡಿಎ ಅಧ್ಯಕ್ಷ ಎಸ್.ಆರ್ ವಿಶ್ವನಾಥ್ ತಿಳಿಸಿದ್ದಾರೆ.
ಕಾರಂತ ಬಡಾವಣೆ ಕೈಬಿಡುವಂತೆ ಒತ್ತಾಯಿಸಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ನಿನ್ನೆ ಮೌರ್ಯ ಸರ್ಕಲ್ನಲ್ಲಿ ಪ್ರತಿಭಟನೆ ನಡೆಸಿದ ನಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ನಂತರ ಬಡಾವಣೆಯನ್ನು ಕೈಬಿಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.
ಈ ಬಗ್ಗೆ ಸ್ಪಷ್ಟನೆ ನೀಡಿರುವ ವಿಶ್ವನಾಥ್, ಪ್ರತಿಭಟನೆ ನಡುವೆಯೇ ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ನಿಯೋಗ ಮನವಿ ಸಲ್ಲಿಸಿತು. ಮುಖ್ಯಮಂತ್ರಿ ಭೂಸ್ವಾಧೀನ ಕೈಬಿಡುವ ಬಗ್ಗೆಯಾಗಲೀ ಅಥವಾ ಯೋಜನೆಯನ್ನು ಕೈಬಿಡುವ ಬಗ್ಗೆಯಾಗಲೀ ಯಾವುದೇ ಭರವಸೆಯನ್ನು ಕೊಟ್ಟಿಲ್ಲ. ಆದರೆ ಕೋಡಿಹಳ್ಳಿ ಚಂದ್ರಶೇಖರ್ ಅವರು ಮಾಧ್ಯಮಗಳ ಮೂಲಕ ಈ ವಿಚಾರದಲ್ಲಿ ತಪ್ಪು ಸಂದೇಶವನ್ನು ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಬಡಾವಣೆ ವಿಚಾರ ಸುಪ್ರೀಂಕೋರ್ಟ್ನಲ್ಲಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಅಡ್ವೋಕೇಟ್ ಜನರಲ್ ಜತೆಗೆ ಚರ್ಚೆ ನಡೆಸುತ್ತೇನೆ ಎಂದಷ್ಟೇ ಮುಖ್ಯಮಂತ್ರಿಗಳು ಹೇಳಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಯಾವುದೇ ತಪ್ಪು ಸಂದೇಶಗಳು ಅಥವಾ ಮಾಹಿತಿಗಳಿಗೆ ಕಿವಿಗೊಡಬಾರದು ಎಂದು ವಿಶ್ವನಾಥ್ ಮನವಿ ಮಾಡಿದ್ದಾರೆ. ಅಲ್ಲದೇ, ಈ ವಿಚಾರದಲ್ಲಿ ಸುಪ್ರೀಂಕೋರ್ಟ್ ನೀಡುವ ತೀರ್ಪಿಗೆ ಸರ್ಕಾರ ಮತ್ತು ಬಿಡಿಎ ಬದ್ಧವಾಗಿರುತ್ತದೆ ಎಂದೂ ಅವರು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಬಿಜೆಪಿ ಕೋರ್ ಕಮಿಟಿ ಪುನಾರಚನೆ: ಲಿಂಬಾವಳಿ, ಉದಾಸಿಗೆ ಕೊಕ್