ಬೆಂಗಳೂರು: ''ಬಿಡಿಎ ಹಾಗೂ ಬಿಡಬ್ಲ್ಯೂಎಸ್ಎಸ್ಬಿ ಅಧಿಕಾರಿಗಳು ದಕ್ಷಿಣ ಬೆಂಗಳೂರಿನ ಜನರಿಗೆ ಕುಡಿಯಲು ಕಾವೇರಿ ನೀರು ಪೂರೈಸುವತ್ತ ಆದ್ಯತೆ ನೀಡಬೇಕೆಂದು ಸೂಚಿಸಿದ್ದೇನೆ'' ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಯಲಚೇನಹಳ್ಳಿಯಲ್ಲಿ ಗುರುವಾರ ನಡೆದ "ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ" ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ''ಮೂರ್ನಾಲ್ಕು ತಿಂಗಳುಗಳಲ್ಲಿ ಪ್ರಮುಖವಾಗಿ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಜನರಿಗೆ ಕುಡಿಯಲು ಕಾವೇರಿ ನೀರನ್ನು ಪೂರೈಸಬೇಕೆಂದು ಸೂಚನೆ ನೀಡಿದ್ದೇನೆ. ಸಂಸದ ಡಿ ಕೆ ಸುರೇಶ್ ಅವರು ಈ ಭಾಗದ ಟ್ರಾಫಿಕ್ ಸಮಸ್ಯೆ ಹಾಗೂ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಈ ಕ್ಷೇತ್ರದ ಜನರಿಗೆ ಕುಡಿಯಲು ಕಾವೇರಿ ನೀರನ್ನು ಪೂರೈಸಬೇಕೆಂಬುದು ಅವರ ಸಂಕಲ್ಪವಾಗಿದೆ'' ಎಂದರು.
''ಎಲ್ಲೂ ನ್ಯಾಯ ಸಿಗದಿದ್ದಾಗ ಮಾತ್ರ ಜನ ನಮ್ಮ ಬಳಿ ಬರುತ್ತಾರೆ. ಹೀಗಾಗಿ ಜನರ ಸಮಸ್ಯೆಗೆ ಅಧಿಕಾರಿಗಳಿಂದ ಪರಿಹಾರ ಕೊಡಿಸುವ ಉದ್ದೇಶದಿಂದ ನಿಮ್ಮ ಮನೆ ಬಾಗಿಲಿಗೆ ಬಂದಿದ್ದೇನೆ. ಅದ್ದರಿಂದ ಈ ತಿಂಗಳು ಬೆಂಗಳೂರಿನ ಎಲ್ಲಾ ಕ್ಷೇತ್ರಗಳ ಸಮಸ್ಯೆ ಬಗೆಹರಿಸಲು ಕಾರ್ಯಕ್ರಮ ಹಮ್ಮಿಕೊಂಡಿದ್ದೇನೆ'' ಎಂದು ತಿಳಿಸಿದರು.
''ನಿಮ್ಮ ಸಮಸ್ಯೆ ಆಲಿಸಲು ಸಂಬಂಧಿಸಿದ ಎಲ್ಲಾ ಇಲಾಖೆಯ 500 ಅಧಿಕಾರಿಗಳು ಇಲ್ಲಿದ್ದಾರೆ. ನೀವು ನನಗೆ ಅಹವಾಲು ನೀಡುವುದಕ್ಕಿಂತ ಮುಖ್ಯವಾಗಿ ನೀವು ನಿಮ್ಮ ಅಹವಾಲುಗಳನ್ನು ನೋಂದಣಿ ಮಾಡಿಸಬೇಕು. ಜೊತೆಗೆ ನಿಮ್ಮ ದೂರವಾಣಿ ಸಂಖ್ಯೆಯನ್ನು ಕೂಡ ನಮೂದಿಸುವುದು ಬಹಳ ಮುಖ್ಯ. ಇದರಿಂದ ಅಧಿಕಾರಿಗಳು ಮತ್ತೆ ನಿಮ್ಮನ್ನು ಸಂಪರ್ಕ ಮಾಡಲು ನೆರವಾಗುತ್ತದೆ'' ಎಂದು ವಿವರಿಸಿದರು.
''ಒಂದೇ ದಿನದಲ್ಲಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡಲು ಸಾಧ್ಯವಾಗದಿದ್ದರೂ ಕಾನೂನು ಚೌಕಟ್ಟಿನಲ್ಲಿ ನಿಮಗೆ ಸಹಾಯ ಮಾಡಲು ಪ್ರಯತ್ನಿಸುತ್ತೇವೆ. ಜನ ಸೇವೆ ಜನಾರ್ದನ ಸೇವೆ ಎಂಬ ಮಾತನ್ನು ನಂಬಿ ಅದರಂತೆ ಮಾಡಿದ್ದೇನೆ. ಶಿವಕುಮಾರ ಸ್ವಾಮೀಜಿ, 'ದೊಡ್ಡವನಾಗಲು ಪ್ರಯತ್ನ ಮಾಡಬೇಡ, ಒಳ್ಳೆಯವನಾಗಲು ಪ್ರಯತ್ನ ಮಾಡು, ಆಗ ತಂತಾನೇ ದೊಡ್ಡವನಾಗುತ್ತೀಯಾ' ಎಂದು ಹೇಳಿದ್ದಾರೆ. ಅದನ್ನೇ ಪಾಲಿಸುತ್ತಿದ್ದೇನೆ. ಹಾಗೆಯೇ ನಮ್ಮ ಸರ್ಕಾರ ಕೂಡ ಜನಪರವಾಗಿ ಕೆಲಸ ಮಾಡುತ್ತಿದೆ'' ಎಂದರು.
''ಕೃಷ್ಣಪ್ಪ ಶಾಸಕರಾಗಿರುವ ಕ್ಷೇತ್ರದಲ್ಲಿರುವ 18 ಕಿ.ಮೀ ರಸ್ತೆಯ ಒತ್ತಡ ಕಡಿಮೆ ಮಾಡಲು ಪರ್ಯಾಯ ರಸ್ತೆ ಮಾಡಬೇಕಿದೆ. ಕನಕಪುರ ರಸ್ತೆಯಿಂದ ಎಲೆಕ್ಟ್ರಾನಿಕ್ ಸಿಟಿ ಮಧ್ಯೆ ಹೊಸ ರಸ್ತೆ ಯೋಜನೆಗೆ ಈ ಹಿಂದೆ ಬಿಡಿಎ ನೋಟಿಫಿಕೇಶನ್ ಆಗಿದ್ದು, ಅದಕ್ಕೆ ಮರುಜೀವ ನೀಡಲು ಪ್ರಯತ್ನ ಆರಂಭವಾಗಿದೆ'' ಎಂದು ಮಾಹಿತಿ ನೀಡಿದರು.
''ನಮ್ಮ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಲ್ಲಿ 1.04 ಕೋಟಿ ಮಹಿಳೆಯರಿಗೆ ಪ್ರತಿ ತಿಂಗಳು ತಲಾ 2 ಸಾವಿರ ಹಣ ತಲುಪುತ್ತಿದೆ. ಬೆಸ್ಕಾಂನಲ್ಲಿ 80 ಲಕ್ಷ ಸಂಪರ್ಕಗಳಿದ್ದು, 67 ಲಕ್ಷ ಜನರು ಗೃಹಜ್ಯೋತಿ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಆ ಮೂಲಕ ಬೆಂಗಳೂರಿನ ಶೇ. 74 ರಷ್ಟು ಜನರು ಇದರ ಉಪಯೋಗ ಪಡೆದಿದ್ದಾರೆ. ಇದಕ್ಕಾಗಿ ಸರ್ಕಾರ 362 ಕೋಟಿ ಹಣ ನೀಡಿದೆ'' ಎಂದು ಡಿಸಿಎಂ ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಸಂಸದ ಡಿ ಕೆ ಸುರೇಶ್, ಶಾಸಕ ಕೃಷ್ಣಪ್ಪ, ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಬಿಬಿಎಂಪಿ ಮುಖ್ಯ ಕಮಿಷನರ್ ತುಷಾರ್ ಗಿರಿನಾಥ್, ಡಿಸಿಎಂ ಕಾರ್ಯದರ್ಶಿ ರಾಜೇಂದ್ರ ಚೋಳನ್, ಬಿಡಿಎ ಕಮಿಷನರ್ ಜಯರಾಮ್, ಬೆಂಗಳೂರು ಜಿಲ್ಲಾಧಿಕಾರಿ ದಯಾನಂದ್, ಬಿಡಬ್ಲ್ಯೂಎಸ್ಎಸ್ಬಿ ಎಂಡಿ ರಾಮಪ್ರಶಾತ್ ಮನೋಹರ್ ಇತರರು ಇದ್ದರು.
ಇದನ್ನೂ ಓದಿ: ಹೊರಗುತ್ತಿಗೆ ಶಿಕ್ಷಕರಿಗೆ ಮೊದಲಿನಂತೆ ನೇರ ಸಂಬಳ ನೀಡಿ: ಆರ್ ಅಶೋಕ್ ಆಗ್ರಹ