ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ನಿತ್ಯ ಪೌರ ಕಾರ್ಮಿಕರ ಕೆಲಸ, ಸ್ವಚ್ಛತೆ ಪರಿಶೀಲಿಸುವ ಜೂನಿಯರ್ ಹೆಲ್ತ್ ಇನ್ಸ್ ಪೆಕ್ಟರ್ ( ಕಿರಿಯ ಆರೋಗ್ಯ ಪರಿವೀಕ್ಷಕರು) ಗಳ ಕೆಲಸಗಳನ್ನೂ ಮೌಲ್ಯಮಾಪನಕ್ಕೆ ಒಳಪಡಿಸಲು ಪಾಲಿಕೆ ಘನತ್ಯಾಜ್ಯ ವಿಭಾಗ ನಿರ್ಧರಿಸಿದೆ.
ಬಿಬಿಎಂಪಿಯ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ಇವರನ್ನು ಮೌಲ್ಯಮಾಪನ ಮಾಡಲು ಹಾಗೂ ಏಕೀಕೃತ ಏಜೆನ್ಸಿ ಮೂಲಕ ನೇಮಕಕ್ಕೆ ಪಾಲಿಕೆ ಮುಂದಾಗಿದೆ.
ಇದರಲ್ಲಿ ಸರಿಯಾಗಿ ಕೆಲದ ನಿರ್ವಹಿಸದೇ ಇರುವವರನ್ನು ಕೈಬಿಡಲು ಸಹ ಚರ್ಚೆ ನಡೆದಿದೆ. ಸದ್ಯ 154 ಜನ ಕಿರಿಯ ಆರೋಗ್ಯ ಪರಿವೀಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ನಗರದಲ್ಲಿ ಕಸ ಸಂಗ್ರಹ ಹಾಗೂ ಕಸ ವಿಂಗಡಣೆಯ ಮೇಲ್ವಿಚಾರಣೆಯನ್ನು ಆರೋಗ್ಯ ಪರಿವೀಕ್ಷಕರು ಯಾವ ರೀತಿ ಕೆಲಸ ನಿರ್ವಹಿಸುತ್ತಿದ್ದಾರೆ ಎನ್ನುವುದನ್ನು ಪರಿಶೀಲಸಲು ನಿರ್ಧರಿಸಲಾಗಿದೆ.
ಗುತ್ತಿಗೆ ಆಧಾರದ ಮೇಲೆ ಪಾಲಿಕೆಯಲ್ಲಿ ಕಿರಿಯ ಆರೋಗ್ಯ ಪರಿವೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವವರನ್ನು ಏಕೀಕೃತ ಏಜೆನ್ಸಿಯ ಮೂಲಕ ತೆಗೆದುಕೊಂಡು ಅವರಿಗೆ ಮಾಸಿಕ 24, 500ರೂ. ವೇತನ ನಿಗದಿ ಮಾಡಲು ನಿರ್ಧರಿಸಲಾಗಿದೆ.
ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳುವ ಸಂದರ್ಭದಲ್ಲಿ ಈಗಾಗಲೇ ಉತ್ತಮವಾಗಿ ಕಾರ್ಯನಿರ್ವಹಿಸಿರುವ ಅಧಿಕಾರಿಗಳಿಗೆ ಆದ್ಯತೆ ನೀಡಲು ನಿರ್ಧರಿಸಲಾಗಿದೆ. ಮೇ. ತಿಂಗಳಿಂದ ಏಕೀಕೃತ ಏಜನ್ಸಿ ಮೂಲಕ ನೇಮಕಾತಿ ಮಾಡಿಕೊಳ್ಳುವ ಪ್ರಕ್ರಿಯೆ ಪ್ರಾರಂಭವಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.