ಬೆಂಗಳೂರು: ಪಾಲಿಕೆ ಶಾಲೆಗಳೇ ಮೂಲ ಸೌಕರ್ಯ ಕೊರತೆ ಎದುರಿಸುತ್ತಿದ್ದು, ಬೆಂಗಳೂರು ವ್ಯಾಪ್ತಿಯ 529 ಸರ್ಕಾರಿ ಶಾಲೆಗಳ ನಿರ್ವಹಣೆಯ ಹೊಣೆಯನ್ನು ವಹಿಸಿಕೊಳ್ಳಲು ಶಿಕ್ಷಣ ಸ್ಥಾಯಿ ಸಮಿತಿ ಮುಂದಾಗಿದೆ. ಇದಕ್ಕಾಗಿ ಬೆಂಗಳೂರು ನಗರ ಜಿಲ್ಲಾ ಪಂಚಾಯತ್ 30 ಕೋಟಿ ರುರೂಪಾಯಿ ಬೇಡಿಕೆ ಇಟ್ಟಿದ್ದು, ಈ ಬಾರಿಯ ಪಾಲಿಕೆ ಬಜೆಟ್ನಲ್ಲಿ ಅನುದಾನ ನೀಡುವ ಬಗ್ಗೆ ಕೌನ್ಸಿಲ್ನಲ್ಲಿ ಚರ್ಚಿಸಲಾಗುತ್ತದೆ ಎಂದು ಬಿಬಿಎಂಪಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಮಂಜುಳಾ ನಾರಾಯಣಸ್ವಾಮಿ ತಿಳಿಸಿದರು.
ನಗರದಲ್ಲಿ ಬಿಬಿಎಂಪಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಮಂಜುಳಾ ನಾರಾಯಣಸ್ವಾಮಿ ಹಾಗೂ ನಗರ ಜಿಲ್ಲಾ ಪಂಚಾಯತ್ ಶಿಕ್ಷಣ ಅಧ್ಯಕ್ಷ ನರಸಿಂಹಮೂರ್ತಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಬೆಂಗಳೂರು ಕೆಂಪೇಗೌಡರು ಕಟ್ಟಿರುವ ನಾಡಾಗಿದ್ದು, ಪಾಲಿಕೆಯ ಎಲ್ಲಾ ಶಾಲೆಗಳಿಗೂ ಕೆಂಪೇಗೌಡರ ಹೆಸರಿಡಲು ತೀರ್ಮಾನ ಮಾಡಲಾಗಿದೆ. ಕಾರ್ಪೋರೇಷನ್ ಶಾಲೆ ಎಂಬ ಕೀಳರಿಮೆ ಪೋಷಕರಿಗೆ ಹಾಗೂ ಮಕ್ಕಳಿಗಿದ್ದು, ಇದನ್ನು ದೂರ ಮಾಡಲು ಈ ಯೋಜನೆ ಸಹಕಾರಿ ಎಂದರು.
ಈ ವೇಳೆ ಮಾತನಾಡಿದ ನರಸಿಂಹಮೂರ್ತಿ, ಬೆಂಗಳೂರಿನಲ್ಲಿರುವ ಸರ್ಕಾರಿ ಶಾಲೆಗಳು ಪಾಲಿಕೆ ವ್ಯಾಪ್ತಿಯಡಿಯಲ್ಲೂ ಬರುತ್ತವೆ. ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಹಣಕಾಸಿನ ವ್ಯವಸ್ಥೆ ಇಲ್ಲ. ಹೀಗಾಗಿ ಶಾಲೆಗಳಿಗೆ ಮೂಲ ಸೌಕರ್ಯ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯ ನೀಡಲು ಪಾಲಿಕೆ ಶಿಕ್ಷಣ ಸಮಿತಿಯಲ್ಲಿ ಮನವಿ ಮಾಡಿದ್ದೆವು. ಇದಕ್ಕೆ ಸ್ಪಂದಿಸಿ, ಈ ಬಜೆಟ್ನಲ್ಲಿ ಮೂಲಭೂತ ಸೌಕರ್ಯ ಕೊಡುವ ಭರವಸೆ ನೀಡಿದ್ದಾರೆ ಎಂದರು.